ಹಿರಿಯೂರು :
ಈ ದೇಶ ಹಲವು ವೈಶಿಷ್ಠ್ಯತೆ ಹಾಗೂ ವೈವಿದ್ಯತೆಯಿಂದ ಕೂಡಿದ ಜಾತ್ಯಾತೀತ ರಾಷ್ಟ್ರವಾಗಿದೆ. ಈ ದೇಶದಲ್ಲಿ ಸರ್ವರು ಪರಸ್ಪರ ಸಹಬಾಳ್ವೆ ನಡೆಸುವ ಮೂಲಕ ಈ ದೇಶದ ಒಗ್ಗಟ್ಟನ್ನು ಕಾಪಾಡಬೇಕಿದೆ. ಅಲ್ಲದೆ ಈ ದೇಶದ ನಾಗರೀಕರಾದ ನಾವುಗಳು ದೇಶಪ್ರೇಮ, ದೇಶಭಕ್ತಿಗಳನ್ನು ಬೆಳೆಸಿಕೊಳ್ಳಬೇಕಾಗಿದೆ ಎಂಬುದಾಗಿ ಕ್ಷೇತ್ರದ ಶಾಸಕಿಯಾದ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ಹೇಳಿದರು.
ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ 70ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಗಣರಾಜ್ಯೋತ್ಸವದ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಬೇಕಾಗಿದೆ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಈ ದೇಶವನ್ನು ಕಟ್ಟಬೇಕಿದೆ, ಈ ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದವರನ್ನು ಇಂದು ನಾವೆಲ್ಲಾ ನೆನೆಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿದ ತಾಲ್ಲೂಕು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಮಾತನಾಡಿ, ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿ ಪಡೆದು ನಮ್ಮದೇ ಆದ ಸಂವಿಧಾನವನ್ನು ರಚಿಸಿ ರಾಷ್ಟ್ರದ ಐಕ್ಯತೆ, ಸಮಗ್ರತೆ, ಸಮಾನತೆ, ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆ ಜೊತೆಗೆ ದೇಶದ ಸಮಗ್ರ ಅಬಿವೃದ್ಧಿಗೆ ಪೂರಕವಾದ ಅಂಶಗಳನ್ನು ಸಾಕಾರಗೊಳ್ಳಲು ಗಣರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿಮಂಜುಳ, ಉಪಾಧ್ಯಕ್ಷೆ ಇಮ್ರಾನಬಾನು, ತಾ.ಪಂ.ಅಧ್ಯಕ್ಷ ಎಸ್.ಚಂದ್ರಪ್ಪ, ಉಪಾಧ್ಯಕ್ಷೆ ಚಂದ್ರಕಲ, ಜಿ.ಪಂ.ಸದಸ್ಯರಾದ ರಾಜೇಶ್ವರಿ, ನಗರಸಭೆ ಸದಸ್ಯರುಗಳಾದ, ಎಸ್.ಪಿ.ಟಿ.ದಾದಾಪೀರ್, ನಟರಾಜ್, ರವಿಚಂದ್ರನಾಯಕ, ಸೈಯದ್ ಫಿರದೋಸ್, ಅಬ್ಬಾಸ್, ಪುಷ್ಪಲತಾ, ಸುಜಾತಾ, ಡಿವೈಎಸ್‍ಪಿ ವೆಂಕಟಪ್ಪನಾಯಕ, ಸಿಪಿಐ ಗುರುರಾಜ್, ನಗರಸಭೆ ಆಯುಕ್ತರಾದ ಮಹಂತೇಶ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸಾದತ್, ರೈತಸಂಘದ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಆರಂಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಸಿ.ವೈ.ನಟರಾಜ್ ಸ್ವಾಗತಿಸಿದರು, ಕೊನೆಯಲ್ಲಿ ಆಯುಕ್ತ ಮಹಂತೇಶ್ ವಂದಿಸಿದರು. ವಿವಿಧ ಶಾಲಾ ತಂಡಗಳಿಂದ ಸಾಂಸ್ಕತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ