ಹೊನ್ನಾಳಿ:
ಮಕ್ಕಳ ಸ್ಕೂಲ್ ಬ್ಯಾಗ್ಗಳ ಭಾರ ಕಡಿಮೆ ಮಾಡುವಲ್ಲಿ ಸ್ಮಾರ್ಟ್ ಕ್ಲಾಸ್ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಶನಿವಾರ ತಾಲೂಕಿನ ಕೂಲಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಮತ್ತು ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲೀಕರಣ ತಂತ್ರಜ್ಞಾನ ವ್ಯವಸ್ಥೆಯಡಿ ದೇಶದ ಪ್ರತಿಯೊಂದು ಮಗುವಿಗೂ ಆಧುನಿಕ ಶಿಕ್ಷಣ ಲಭಿಸಬೇಕು. ಈ ಕಾರಣಕ್ಕಾಗಿ ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ನ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಪರದೆಗಳ ಮೂಲಕ ತರಗತಿಗಳನ್ನು ನಡೆಸುವ ಕೇಂದ್ರ ಸರಕಾರದ ಯೋಜನೆಯನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು
ಕೂಲಂಬಿ ಗ್ರಾಮದ ಹಲವಾರು ಮಹನೀಯರು ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಕ್ಕಾಗಿ ತಮ್ಮ ಶಕ್ತಿ ಮೀರಿ ಧನಸಹಾಯ, ಇತರೆ ರೂಪದಲ್ಲಿ ಮುಕ್ತವಾದ ಸಹಾಯಹಸ್ತ ನೀಡಿರುವುದು ಶ್ಲಾಘನೀಯ. ಇದಕ್ಕಾಗಿ ದಾನಿಗಳನ್ನು ಅಭಿನಂದಿಸುತ್ತೇನೆ. ಬೇರೆಯವರು ಇವರ ಮಾದರಿ ಅನುಸರಿಸಬೇಕು ಎಂದು ವಿವರಿಸಿದರು.
ಜಿಪಂ ಸದಸ್ಯೆ ದೀಪಾ ಜಗದೀಶ್ ಮಾತನಾಡಿ, ಈ ಶಾಲೆಯಲ್ಲಿ ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ವಿನೂತನ ಕಲಿಕೆ ಅಳವಡಿಸಿರುವುದು ಸಂತಸದ ಸಂಗತಿ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ತಾಪಂ ಸದಸ್ಯೆ ಅಂಬುಜಾಕ್ಷಿ ಮರುಳಸಿದ್ದಪ್ಪ, ಗ್ರಾಪಂ ಅಧ್ಯಕ್ಷೆ ಗಾಯತ್ರಿ ಪ್ರಶಾಂತ್, ಸದಸ್ಯರಾದ ಟಿ.ಜಿ. ರಮೇಶ್, ಕೆ.ಆರ್. ಅಜ್ಜಯ್ಯ, ಟಿ.ಬಿ. ಮಂಜುನಾಥ್, ಜಿ.ಎಸ್. ಸಿದ್ಧೇಶ್, ಹುಸೇನ್ಬಿ, ಮುರಿಗೆಮ್ಮ, ಪಿಡಿಒ ಜಗದೀಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕರಿಬಸಪ್ಪ, ಉಪಾಧ್ಯಕ್ಷೆ ಶರ್ಮೀಳಾ ಬಾನು, ಮೋಹನ್ಕುಮಾರ್ ಸಿಆರ್ಪಿ ರಾಜಣ್ಣ, ಇಸಿಒ ಬಸವರಾಜ್, ಎಸ್ಡಿಎಂಸಿ ಸಮನ್ವಯ ವೇದಿಕೆಯ ಪರಮೇಶ್ವರಪ್ಪ, ಮುಖ್ಯ ಶಿಕ್ಷಕ ಬಿ. ಲೋಕಪ್ಪ, ಮೀನು ಮಹಾಮಂಡಳದ ಮಾಜಿ ನಿರ್ದೇಶಕ ಬಸವರಾಜ್, ಬಿ.ಎಂ. ಮಲ್ಲಿಕಾರ್ಜುನ್, ಟಿ.ಎಸ್. ಬಸವರಾಜ್, ವೈ.ಕೆ. ದಯಾನಂದ, ಸುರೇಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸ್ತ್ರೀಶಕ್ತಿ ಸಂಘದ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.