ಚಿತ್ರದುರ್ಗ
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಜನರಿಗೆ ಕೂಲಿ ಹಣ ನೀಡುವಲ್ಲಿ ಆಗುತ್ತಿರುವ ವಿಳಂಬ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಜನರಿಗೆ ಕಳೆದ ಕೆಲವು ದಿನಗಳಿಂದ ಕೂಲಿ ಹಣ ಪಾವತಿಸಿಲ್ಲ. ಹೀಗಾದಲ್ಲಿ ಅವರು ಜೀವನ ನಡೆಸುವುದು ಹೇಗೆ. ಮಾಡಿದ ಕೆಲಸಕ್ಕೆ ಬಡವರಿಗೆ ಕೂಲಿ ನೀಡದಿದ್ದಲ್ಲಿ ಅವರು ಮತ್ತೆ ಹೇಗೆ ಕೆಲಸಕ್ಕೆ ಬರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿ.ಪಂ. ಸಿಇಒ ಪಿ.ಎನ್.ರವೀಂದ್ರ ಈ ಕುರಿತು ಮಾಹಿತಿ ನೀಡಿ, 2017-18ನೇ ಸಾಲಿನ 6.20 ಕೋಟಿ, 2018-19ನೇ ಸಾಲಿಗೆ 97.90 ಕೋಟಿ ವೇಜ್ ಪೇಮೆಂಟ್ ಹಾಗೂ ಮಟೀರಿಯಲ್ ಪೇಮೆಂಟ್ ಬಾಕಿ ಇದೆ. ಹಾಗಾಗಿ ಕಳೆದ ಐವತ್ತೈದು ದಿನಗಳಿಂದ ಕೂಲಿ ಹಣ ನೀಡಲಾಗಿಲ್ಲ. ಇದರಿಂದ ಜನರು ಕೆಲಸ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲಸ ಕೊಡುವುದಾಗಿ ಕರೆದರೂ ಜನರು ಬರುತ್ತಿಲ್ಲ. ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೇಮೆಂಟ್ ಸಮಸ್ಯೆಯಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಳೆದ ಕೆಲವು ದಿನಗಳಿಂದ ಎಂಟು ಜಿಲ್ಲೆಗಳಲ್ಲಿ ಬರ ಅಧ್ಯಯನಕ್ಕಾಗಿ ಪ್ರವಾಸ ನಡೆಸಲಾಗಿದೆ. ಆದರೆ ಈ ಎಲ್ಲ ಜಿಲ್ಲೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೂಲಿ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಅಲ್ಲದೇ ಇಂದು ಬಂದ ಕೆಲಸಗಾರರು ನಾಳೆ ಬರುವುದಿಲ್ಲ. ಕೂಲಿ ಹಣ ನೀಡುವುದಿಲ್ಲ ಎಂದು ಜನರು ಕೆಲಸಕ್ಕೆ ಬರುವುದಿಲ್ಲ.
ಆದರೆ ಈ ಕುರಿತು ಸುಳ್ಳು ದಾಖಲೆ ಸೃಷ್ಠಿಸಿ ಹಣ ದುರುಪಯೋಗ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್ ಕಳ್ಳೆಣ್ಣನವರ್ ಮಾತನಾಡಿ, ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ಬೆಳೆನಷ್ಟ ಕುರಿತು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಭೀಕರ ಬರಗಾಲ ಸಂಭವಿಸಿದೆ. ಶೇಕಡಾ 100 ರಷ್ಟು ಬೆಳೆ ನಷ್ಟವಾಗಿದೆ. ರಾಜ್ಯದಲ್ಲೇ ಅತಿಹೆಚ್ಚು ನಷ್ಟ ಚಿತ್ದುರ್ಗ ಜಿಲ್ಲೆಯಲ್ಲಾಗಿದೆ. ರೈತರ ಜಮೀನಿಗಳಿಗೆ ಕಡ್ಡಿ ಗೀಚಿ ಇಟ್ಟರೆ ಸಾಕು, ಎಲ್ಲ ಸುಟ್ಟು ಹೋಗುತ್ತದೆ. ಇದರಿಂದಾಗಿ ಜಿಲ್ಲೆಯ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಬರ ಪರಿಹಾರ ಕಾಮಗಾರಿಗಳನ್ನು ನಡೆಸುವ ಕುರಿತು ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಸ್‍ವೈ ಪ್ರಶ್ನಿಸಿದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಹಳ್ಳಿಗಳನ್ನು ಗುರುತಿಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ 42 ಟ್ಯಾಂಕರ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಸದ್ಯ ನಗರ ಪ್ರದೇಶದಲ್ಲಿ ಇಂತಹ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಜಿ.ಪಂ. ಸಿಇಒ ಪಿ.ಎನ್.ರವೀಂದ್ರ ಮಾತನಾಡಿ, ಜಿಲ್ಲೆಯ ಆರು ತಾಲ್ಲೂಕುಗಳಿಗೆ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಅಗತ್ಯ ಅನುದಾನ ನೀಡಲಾಗಿದೆ.
87 ಲಕ್ಷ ರೂ. ಬಿಲ್ ನೀಡಬೇಕಿದೆ ಎಂದು ತಿಳಿಸಿದರು. ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಕಾಮಗಾರಿಗಳ ಕುರಿತು ಸಭೆಯಲ್ಲಿ ಮಾಹಿತಿ ಪಡೆಯಲಾಯಿತು. ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಜಿ.ಪಂ. ಉಪಕಾರ್ಯದರ್ಶಿ ಬಸವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.