ಹುಳಿಯಾರು
ಹುಳಿಯಾರು ಹೋಬಳಿಯ ದಸೂಡಿ ಗ್ರಾಪಂ ವ್ಯಾಪ್ತಿಯ ಮರೆನಡುಪಾಳ್ಯದಲ್ಲಿ ಅಪೂರ್ಣಗೊಂಡಿರುವ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಶುದ್ಧ ಕುಡಿಯುವ ನೀರು ಕೊಡುವಂತೆ ದಸೂಡಿ ಗ್ರಾಪಂ ಉಪಾಧ್ಯಕ್ಷ ಹನುಮಂತರಾಯಪ್ಪ ಅವರು ಒತ್ತಾಯಿಸಿದ್ದಾರೆ.
ಮರೆನಡುಪಾಳ್ಯವು ತುಮಕೂರು ಜಿಲ್ಲೆಯ ಗಡಿ ಗ್ರಾಮವಾಗಿದ್ದು ರೈತರು ಮತ್ತು ಕೂಲಿ ಕಾರ್ಮಿಕರೆ ವಾಸವಾಗಿರುವ ಸರಿಸುಮಾರು 300 ಮನೆಗಳಿರುವ ಗ್ರಾಮವಾಗಿದೆ. ಈ ಭಾಗದಲ್ಲಿನ ಕೊಳವೆಬಾವಿಗಳಲ್ಲಿ ಫ್ಲೋರೈಡ್ ಅಂಶ ಹೆಚ್ಚಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಇಲ್ಲಿಗೆ 1 ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಇಲ್ಲಿಗೆ ಮಂಜೂರು ಮಾಡಲಾಗಿತ್ತು.
ಆದರೆ ಇಲ್ಲಿಗೆ 1 ವರ್ಷದ ಹಿಂದೆ ಘಟಕದ ಬಾಕ್ಸ್, ಫಿಲ್ಟರ್ ಯೂನಿಟ್ ಹಾಕಿ ಹೋದವರು ಇತ್ತ ತಲೆಯಾಕಿಯೂ ಸಹ ಮಲಗಿಲ್ಲ. ಗ್ರಾಮ ಪಂಚಾಯ್ತಿಯಿಂದ ಪೈಪ್‍ಲೈನ್ ಮಾಡಿ ನೀರು ಸಹ ಕೊಡಲಾಗಿದೆ. ಆದರೂ ಕರೆಂಟ್ ವೈರಿಂಗ್ ಹಾಗೂ ನೀರಿನ ಟ್ಯಾಂಕ್ ಇಟ್ಟು ಘಟಕ ಆರಂಭ ಮಾಡದೆ ನಿರ್ಲಕ್ಷ್ಯ ತಾಳಿದ್ದಾರೆ.
ಈ ಬಗ್ಗೆ ಎಂಜಿಯರ್ ಅವರನ್ನು ಕೇಳಿದರೆ ಗುತ್ತಿಗೆದಾರರತ್ತ ಬೆರಳು ಮಾಡಿ ತೋರಿಸುತ್ತಾರೆ. ಗುತ್ತಿಗೆದಾರರಿಗೆ ಫೋನ್ ಮಾಡಿ ಕೇಳಿದರೆ ಆಗ ಬರ್ತೇವೆ, ಈಗ ಬರ್ತೇವೆ ಎಂದು ಹೇಳುತ್ತಾರೆ. ಇತ್ತ ಊರಿನ ಜನ ನೀರಿನ ಘಟಕವಿದ್ದರೂ ಆರಂಭವಾಗದ ಕಾರಣ ಶುದ್ಧ ನೀರಿಗಾಗಿ ನಾಲ್ಕೈದು ಕಿ.ಮೀ ದೂರದ ದಸೂಡಿ, ದಬ್ಬಗುಂಟೆಗೆ ಹೋಗಬೇಕಿದೆ.ಇನ್ನಾದರೂ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಯನ್ನು ಪೂರ್ಣಗೊಳಿಸಿ ಗಡಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಕೊಡುವಂತೆ ಅವರು ಮನವಿ ಮಾಡಿದ್ದಾರೆ.