`ಸ್ವಚ್ಛ ನಗರ’ ಸ್ಪರ್ಧೆಯಲ್ಲಿ ತುಮಕೂರು ನಗರ

ತುಮಕೂರು

          ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ `ಸ್ವಚ್ಛ ಭಾರತ್’ ಅಭಿಯಾನದ ಭಾಗವಾದ “ಸ್ವಚ್ಛ ಸರ್ವೇಕ್ಷಣ-2019” ಸ್ಪರ್ಧಾಕಣದಲ್ಲಿ ತುಮಕೂರು ನಗರವೂ ಇದ್ದು, ಈ ಬಗೆಗಿನ ಅಗತ್ಯ ಸಿದ್ಧತೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಉತ್ಸಾಹದಿಂದ ತೊಡಗಿಸಿಕೊಂಡಿದೆ. “ಸ್ವಚ್ಛ ಸರ್ವೇಕ್ಷಣ” ಸ್ಪರ್ಧೆಯು ಜನವರಿ 4 ರಿಂದಲೇ ಆರಂಭವಾಗಿದೆ. ಇದೇ 31 ಕ್ಕೆ ಮುಕ್ತಾಯವಾಗಲಿದೆ.

         ಸ್ಪರ್ಧೆಗೆ ಒಟ್ಟು 5 ಸಾವಿರ ಅಂಕಗಳನ್ನು ನಿಗದಿಪಡಿಸಿದೆ. ಈ 5 ಸಾವಿರ ಅಂಕಗಳನ್ನು ತಲಾ 1250 ಅಂಕಗಳಂತೆ ಒಟ್ಟು ನಾಲ್ಕು ಭಾಗ ಮಾಡಲಾಗಿದೆ. ದಾಖಲೀಕರಣ (ಡಾಕ್ಯುಮೆಂಟೇಷನ್), ಜನಾಭಿಪ್ರಾಯ ಸಂಗ್ರಹ, ದೆಹಲಿ ತಂಡದಿಂದ ನೇರ ಸ್ಥಳಪರಿಶೀಲನೆ ಮತ್ತು ಬಯಲು ಮುಕ್ತಶೌಚ (ಸ್ಟಾರ್ ಸ್ಥಾನಮಾನ) ಎಂಬ ನಾಲ್ಕು ವಿಭಾಗಳಲ್ಲಿ ಒಟ್ಟಾರೆ ಗಳಿಸುವ ಅಂಕಗಳ ಆಧಾರದ ಮೇಲೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ತುಮಕೂರು ನಗರದ ಸ್ಥಾನವು ನಿಗದಿಗೊಳ್ಳಲಿದೆ.

         ತುಮಕೂರು ನಗರದಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಈಗಾಗಲೇ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಹಾನಗರ ಪಾಲಿಕೆಯು ದಾಖಲೀಕರಣ ಮಾಡಿ ಅದನ್ನು ಸಲ್ಲಿಸಿದೆ. ನವದೆಹಲಿಯ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ತಂಡ ತುಮಕೂರು ನಗರಕ್ಕೆ ಆಗಮಿಸಿ ಅನಿರೀಕ್ಷಿತವಾಗಿ ಸ್ಥಳಪಡಿಶೀಲನೆ ಮಾಡಿದೆ. ಈಗ ಜನಾಭಿಪ್ರಾಯ ಸಂಗ್ರಹ ಮತ್ತು ಸ್ಟಾರ್ ಸ್ಥಾನಮಾನ ನೀಡುವ ಕೆಲಸ ನಡೆಯುತ್ತಿದೆ ಎಂದು ಮೂಲಗಳು `ಪ್ರಜಾಪ್ರಗತಿ’ಗೆ ಮಾಹಿತಿ ನೀಡಿವೆ.

ಈಗ 2 ನೇ ಸ್ಥಾನದಲ್ಲಿ

          ಜ.28 ರಂದು ಬೆಳಗ್ಗೆ ಲಭ್ಯವಿದ್ದ ದಾಖಲಾತಿ ಪ್ರಕಾರ ತುಮಕೂರು ನಗರವು “ಸ್ವಚ್ಛ ಸರ್ವೇಕ್ಷಣ” ಅಭಿಯಾನದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿತ್ತು. ತುಮಕೂರು ನಗರದ 5300 ಜನರು ಜನಾಭಿಪ್ರಾಯ ಸಲ್ಲಿಸಿದ್ದು, ಈ ಸಂಖ್ಯೆಯು ಜನಾಭಿಪ್ರಾಯ ಸಂಗ್ರಹದಲ್ಲಿ ದ್ವಿತೀಯ ಎನಿಸಿದೆ. ಮೈಸೂರು ನಗರವು ಅಗ್ರ ಸ್ಥಾನದಲ್ಲಿದ್ದು ಅಲ್ಲಿನ 46 ಸಾವಿರ ಜನರು ಜನಾಭಿಪ್ರಾಯ ಸಲ್ಲಿಸಿದ್ದಾರೆ. ನಂತರದ ಸ್ಥಾನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಇತ್ತು.

ಜನಾಭಿಪ್ರಾಯಕ್ಕೆ ಅವಕಾಶ

         ತುಮಕೂರು ನಗರ “ಸ್ವಚ್ಛ ನಗರ” ಎಂದು ಗುರುತಿಸಲ್ಪಡಬೇಕಾದರೆ ಜನಾಭಿಪ್ರಾಯ ಪ್ರಮುಖ ಪಾತ್ರ ವಹಿಸಲಿದೆ. ಒಟ್ಟು ಅಂಕಗಳಲ್ಲಿ ಶೇ. 25 ರಷ್ಟು ಅಂಕಗಳು ಜನಾಭಿಪ್ರಾಯದಿಂದಲೇ ಲಭಿಸಲಿದೆ.

         ಈ ನಿಟ್ಟಿನಲ್ಲಿ ಜನರು ತಮ್ಮ ದೂರವಾಣಿಯಿಂದ ಟೋಲ್ ಫ್ರೀ (ಉಚಿತ) ಇರುವ 1969 ಎಂಬ ಸಂಖ್ಯೆಗೆ ಕರೆ ಮಾಡಬೇಕು. ಆಗ “ನೀವು ಸಮೀಕ್ಷೆಯಲ್ಲಿ ಭಾಗವಹಿಸುವಿರಾ? ಅಥವಾ ಕಸ್ಟಮರ್ ಕೇರ್ ಜೊತೆ ಮಾತನಾಡುವಿರಾ?” ಎಂದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಶ್ನಿಸಲಾಗುತ್ತದೆ. “ಸಮೀಕ್ಷೆಯಲ್ಲಿ ಭಾಗವಹಿಸುತ್ತೇವೆ” ಎಂದರೆ, ತಕ್ಷಣವೇ ಪೋನ್ ಸಂಪರ್ಕ ಕಟ್ ಆಗಲಿದ್ದು, ಅಲ್ಲಿಂದಲೇ ಪುನಃ ಕರೆ ಬರುತ್ತದೆ.

         ಆಗ ಮೂರನೇ ಆಪ್‍ಷನ್ ಆಯ್ಕೆ ಮಾಡಿಕೊಂಡರೆ ಕನ್ನಡ ಭಾಷೆ ಬರಲಿದೆ. ಬಳಿಕ ಆ ಕಡೆಯಿಂದ “1) ನಿಮ್ಮ ನಗರವು ಸ್ವಚ್ಛ ಸರ್ವೇಕ್ಷಣ-2019 ರಲ್ಲಿ ಭಾಗವಹಿಸುತ್ತಿರುವುದು ನಿಮಗೆ ತಿಳಿದಿದೆಯೇ?, 2)ಕಳೆದ ವರ್ಷಕ್ಕಿಂತ ಈ ವರ್ಷ ನಿಮ್ಮ ಸುತ್ತಮುತ್ತಲ ಪ್ರದೇಶವು ಸ್ವಚ್ಛವಾಗಿದೆಯೇ?, 3)ಈ ವರ್ಷ ಸಾರ್ವಜನಿಕ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಕಸದ ಬುಟ್ಟಿಯನ್ನು ಇಡಲಾಗಿದೆಯೇ?, 4)ಹಸಿಕಸ ಮತ್ತು ಒಣಕಸವನ್ನು ಮೂಲದಲ್ಲಿಯೇ ಬೇರ್ಪಡಿಸಿ ಪಾಲಿಕೆ ವಾಹನಗಳಿಗೆ ನೀಡಲು ಸೂಚಿಸಲಾಗಿದೆಯೇ?, 5)ನೀವು ನೀಡುವ ಕಸವು ಎಲ್ಲಿಗೆ ಹೋಗುತ್ತದೆ ಎಂದು ನಿಮಗೆ ತಿಳಿದಿದೆಯೇ?, 6)ಈ ವರ್ಷ ಸಾರ್ವಜನಿಕ ಶೌಚಾಲಯ/ಸಮುದಾಯ ಶೌಚಾಲಯಗಳು ಸ್ವಚ್ಛವಾಗಿದೆಯೇ?, 7)ನಿಮ್ಮ ನಗರವು ಬಯಲು ಶೌಚ ಮುಕ್ತ (ಓ.ಡಿ.ಎಫ್.) ವಾಗಿದೆ ಎಂದು ನಿಮಗೆ ತಿಳಿದಿದೆಯೇ?” ಎಂಬ ಒಟ್ಟು ಏಳು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಾರ್ವಜನಿಕರು “ಹೌದು” ಅಥವಾ “ಇಲ್ಲ” ಎಂದು ಉತ್ತರಿಸಬೇಕು. ಇದೇ ರೀತಿ oಡಿZ್ಚeeZಠಿZIಟಏಖಿಅ ಎಂಬ ಅಪ್ಲಿಕೇಷನ್ (ಆ್ಯಪ್) ಅನ್ನು ಸಹ ಡೌನ್‍ಲೋಡ್ ಮಾಡಿಕೊಂಡು ಇದೇ ರೀತಿಯ ಪ್ರಶ್ನೆಗಳಿಗೆ ಸಾರ್ವಜನಿಕರು ಪ್ರತಿಕ್ರಿಯಿಸಬಹುದಾಗಿದೆ. ಇಂತಹ ಜನಾಭಿಪ್ರಾಯದ ಮೇಲೆ ತುಮಕೂರು ನಗರದ ಸ್ಥಾನಮಾನ ಹಾಗೂ ರ್ಯಾಂಕಿಂಗ್ ನಿರ್ಧಾರವಾಗಲಿದೆ ಎಂದು ಮೂಲಗಳು ಹೇಳುತ್ತಿವೆ.

ಕಳೆದ ವರ್ಷ 4 ನೇ ಸ್ಥಾನ

          2018 ನೇ ಸಾಲಿನಲ್ಲಿ ತುಮಕೂರು ನಗರವು ಇದೇ ಮಾದರಿಯ “ಸ್ವಚ್ಛ ಸರ್ವೇಕ್ಷಣ”ದಲ್ಲಿ ರಾಜ್ಯದ 4 ನೇ `ಸ್ವಚ್ಛ ನಗರ’ವಾಗಿ ಆಯ್ಕೆಗೊಂಡಿತ್ತು. ರಾಜ್ಯದ 257 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 26 ಸ್ಥಳೀಯ ಸಂಸ್ಥೆಗಳಿಗೆ ರ್ಯಾಂಕಿಂಗ್ ನೀಡುವಾಗ ತುಮಕೂರಿಗೆ 4 ನೇ ಸ್ಥಾನ ಲಭಿಸಿತ್ತು. ಕಳೆದ ವರ್ಷ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದವು. ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಯಲ್ಲಿದ್ದ ನಾಲ್ಕು ಸಾವಿರ ನಗರಗಳ ಪೈಕಿ ತುಮಕೂರು ನಗರಕ್ಕೆ 192 ನೇ ಸ್ಥಾನವು ದೊರೆತಿತ್ತು. ಮಧ್ಯಪ್ರದೇಶದ ಇಂಧೋರ್ ನಗರವು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ದೆಹಲಿ ತಂಡ ಭೇಟಿ

       “ಸ್ವಚ್ಛ ಸರ್ವೇಕ್ಷಣೆ”ಗೆ ಸಂಬಂಧಿಸಿದಂತೆ ನವದೆಹಲಿಯಿಂದ ಬಂದಿದ್ದ ನಾಲ್ವರು ಅಧಿಕಾರಿಗಳ ತಂಡವು ಜ. 4 ರಿಂದ 14 ರ ವರೆಗೆ ತುಮಕೂರು ನಗರದ ವಿವಿಧ ಭಾಗಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದೆ. ಇದೀಗ ಮತ್ತೋರ್ವ ಅಧಿಕಾರಿಯು ದೆಹಲಿಯಿಂದ ಬಂದಿದ್ದು, ತಪಾಸಣೆ ಮುಂದುವರೆಸಿದ್ದಾರೆ. ಈ ಅಧಿಕಾರಿಗಳಿಗೂ ತುಮಕೂರಿನಲ್ಲಿ ತಾವೆಲ್ಲಿಗೆ ಭೇಟಿ ನೀಡಬೇಕೆಂಬ ಮಾಹಿತಿ ಇರುವುದಿಲ್ಲ. ದೆಹಲಿ ಸಮೀಪದ ನೋಯ್ಡಾದಲ್ಲಿರುವ ನಿಯಂತ್ರಣ ಕಚೇರಿಯಿಂದ ಈ ಅಧಿಕಾರಿಗಳ ಮೊಬೈಲ್‍ಗೆ ಇಂತಹ ಸ್ಥಳಕ್ಕೆ ತೆರಳುವಂತೆ ಸೂಚನೆ ಬರಲಿದ್ದು, ಅದನ್ನು ಅನುಸರಿಸಿ ಈ ಅಧಿಕಾರಿಗಳು ಅಕ್ಷಾಂಶ-ರೇಖಾಂಶ ಸಹಿತ ನಿಖರವಾಗಿ ಸ್ಥಳಪರಿಶೀಲನೆ ಮಾಡಿ, ಮಾಹಿತಿಯನ್ನು ಅಲ್ಲಿಗೇ ರವಾನಿಸುವರು. ಈ ರೀತಿಯ ತಪಾಸಣೆಗೆ ಒಟ್ಟು 1250 ಅಂಕಗಳು ನಿಗದಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕರಿಗೆ ಮನವಿ

         ತುಮಕೂರು ನಗರವನ್ನು `ಬಯಲು ಶೌಚ ಮುಕ್ತ ನಗರ’ (ಓ.ಡಿ.ಎಫ್.-ಓಪನ್ ಡಿಫಿಕೇಷನ್ ಫ್ರೀ) ಎಂದು ಘೋಷಿಸಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜಿಸಬಾರದು. ಕಸ ಸಂಗ್ರಹದ ವಾಹನಗಳು ಬಂದಾಗ ಕಡ್ಡಾಯವಾಗಿ ಹಸಿ ಕಸ ಮತ್ತು ಒಣ ಕಸವನ್ನು ಮೊದಲೇ ವಿಂಗಡಣೆ ಮಾಡಿಕೊಂಡು, ಬಳಿಕ ವಾಹನಗಳಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು. ಹಸಿ ಕಸದಿಂದ ಮನೆಗಳಲ್ಲೇ ಗೊಬ್ಬರ ತಯಾರಿಕೆಗೆ ಪ್ರಯತ್ನಿಸಬಹುದು. ಒಣ ಕಸವನ್ನು ಮಾತ್ರ ಪಾಲಿಕೆ ವಾಹನಕ್ಕೆ ನೀಡಿದರೆ ಸಹಾಯಕವಾಗುತ್ತದೆ ಎಂದು ಮಹಾನಗರ ಪಾಲಿಕೆಯು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap