ಬೆಂಗಳೂರು :
ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಅಧಿಕಾರಿಗಳು ಕೂಡ ಇದೇ ಹಾದಿಯಲ್ಲಿ ನಡೆಯಬೇಕು ಎಂದು ಸಿಎಂ ಕುಮಾರಸ್ವಾಮಿ ಮನವಿ ಮಾಡುತ್ತಿದ್ದರೆ, ಡಿಸಿಎಂ ಪರಮೇಶ್ವರ್ ಮಾತ್ರ ತಮ್ಮ ಕಚೇರಿಯನ್ನು ಐಷಾರಾಮಿಯಾಗಿ ನವೀಕರಣ ಮಾಡಿರುವುದು ಈಗ ಟೀಕೆಗೆ ಗುರಿಯಾಗಿದೆ.
ತಮ್ಮ ಕಚೇರಿ ನವೀಕರಣಕ್ಕಾಗಿ ಡಿಸಿಎಂ ಪರಮೇಶ್ವರ್ ಇದಕ್ಕಾಗಿ 70 ಲಕ್ಷ ಹಣವನ್ನು ದುಂದುವೆಚ್ಚ ಮಾಡಿದ್ದಾರೆ. ವಿಧಾನಸೌಧದ ತಮ್ಮ ಕೊಠಡಿ 327, 328 ಎ ಕೊಠಡಿಯ ತಮ್ಮ ಚೇಬರ್ ಹಾಗೂ ಆ್ಯಂಟಿ ಚೇಬರ್ಗೆ ಐಷಾರಾಮಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕೊಠಡಿ ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು, ಹೊಸ ಕುರ್ಚಿ, ಮೇಜು, ಸೋಫಾ, ಲೈಟ್ಗಳನ್ನು ಅಳವಡಿಸಲಾಗಿದೆ.
ಅಷ್ಟೇ ಅಲ್ಲದೇ ಕಚೇರಿಗೆ ಸಂಪೂರ್ಣ ಪಿಒಪಿ ಬಳಸಿ ಒಳವಿನ್ಯಾಸ ಮಾಡಲಾಗಿದ್ದು, ನಿತ್ಯ ಪೂಜೆಗೆ ಪಂಚಲೋಹದ ಪೂಜಾ ಸಾಮಾಗ್ರಿಗಳನ್ನು ಬಳಸಲಾಗುತ್ತಿದೆ. ಡಿಸಿಎಂ ಈ ನಡೆಗೆ ಈಗ ಚರ್ಚೆಗೆ ಗುರಿಯಾಗಿದೆ.
ಸಿಎಂ ಕುಮಾರಸ್ವಾಮಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಾಗಿ ಸರ್ಕಾರಿ ಕಾರನ್ನು ಬಳಸುತ್ತಿಲ್ಲ. ಅಲ್ಲದೇ ಕಚೇರಿಯಲ್ಲಿ ಗುತ್ತಿಗೆ ನೌಕರರ ಸಂಖ್ಯೆಯನ್ನು ಕಡಿತಗೊಳಿಸಿದ್ದರು. ಈ ಕುರಿತು ತಮ್ಮ ಸಹೋದ್ಯೋಗಿಗಳಲ್ಲಿಯೂ ಮನವಿ ಮಾಡಿದ್ದರು. ಆದರೆ, ಡಿಸಿಎಂ ಪರಮೇಶ್ವರ್ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಸರ್ಕಾರಿ ಹಣ ಪೋಲು ಮಾಡುತ್ತಿರುವುದು ಎಷ್ಟು ಸರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ