ಚಳ್ಳಕೆರೆ
ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಕುರುಬ ಸಮಾಜದ ಬಂಧುಗಳು ಹಾಗೂ ಯುವಕರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಹಾಲುಮತ ಮಹಾಸಭಾ ಕನಕ ಒಡ್ಡೋಲಗ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಹಾಲುಮತ ಮಹಾಸಭಾದ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಕಾರ್ಯಕ್ಕೆ ಎಲ್ಲಾ ಸಮಾಜದ ಬಂಧುಗಳು ಸಹಕಾರ ನೀಡಬೇಕೆಂದು ಜಿಲ್ಲಾ ಹಾಲುಮತ ಮಹಾಸಭಾದ ಅಧ್ಯಕ್ಷ ಬಿ.ಟಿ.ಜಗದೀಶ್ ತಿಳಿಸಿದರು.
ಅವರು, ಬುಧವಾರ ಗೊರ್ಲಕಟ್ಟೆ, ಮಲ್ಲಸಮುದ್ರ, ಕಾಮಸಮುದ್ರ ಮುಂತಾದ ಗ್ರಾಮಗಳಲ್ಲಿ ಹಾಲುಮತ ಮಹಾಸಭಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 100 ಹಾಲುಮತ ಮಹಾಸಭಾ ಘಟಕವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ. ವಿಶೇಷವಾಗಿ ಚಳ್ಳಕೆರೆ ತಾಲ್ಲೂಕಿನಲ್ಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲ್ಲಿನ ಸಂಘಟನೆಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಹಂತ ಹಂತವಾಗಿ ಜಿಲ್ಲೆ ಎಲ್ಲಾ ತಾಲ್ಲೂಕಿನಲ್ಲಿ ಮಹಾಸಭಾ ಘಟಕ ಪ್ರಾರಂಭಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಹಾಲುಮತ ಬುಡಕಟ್ಟು ಸಂಸ್ಕತಿ ಸಂಶೋಧಕ, ಪತ್ರಕರ್ತ ಹರ್ತಿಕೋಟೆ ಮಾಲತೇಶ್ ಅರಸ್ ಮಾತನಾಡಿ, ಹಿಂದುಳಿದ ಸಮುದಾಯಗಳ ಅಭಿವೃದ್ಧಿಯಲ್ಲಿ ಸರ್ಕಾರಗಳು ಹಿನ್ನಡೆ ಸಾಧಿಸುತ್ತಿದ್ದು, ಹಾಲುಮತ ಬುಡಕಟ್ಟು ಸಂಸ್ಕತಿಯ ಯುವಕರಿಗೆ ಹೆಚ್ಚಿನ ಅವಕಾಶಗಳು ಯಾವುದೇ ಕ್ಷೇತ್ರದಲ್ಲಿ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಸಂಘಟನೆಯನ್ನು ಬಲಪಡಿಸಲು ನಿರ್ಧರಿಸಿದ್ದು, ಜಿಲ್ಲಾದ್ಯಂತ ಪ್ರವಾಸ ನಡೆಸಿ ಸಮುದಾಯದ ಹಲವಾರು ಸಂಸ್ಕತಿ, ಸಂಪ್ರದಾಯ, ಆಚರಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರನ್ನು ಜಾಗೃತಿಗೊಳಿಸಿ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಈ ಕಾರ್ಯಕ್ಕೆ ನಿರೀಕ್ಷೆಗೂ ಮೀರಿ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ತಾಲ್ಲೂಕು ಹಾಲುಮತ ಮಹಾಸಭಾದ ಅಧ್ಯಕ್ಷ, ನಗರಸಭಾ ಸದಸ್ಯ ಎಂ.ಜೆ.ರಾಘವೇಂದ್ರ ಮಾತನಾಡಿ, ತಾಲ್ಲೂಕಿನಲ್ಲಿ ಪ್ರತಿವರ್ಷ ಕೇವಲ ಕನಕಜಯಂತಿ ಆಚರಣೆ ಮಾತ್ರ ಸಮುದಾಯ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಹಾಲುಮತ ಮಹಾಸಭಾ ನಗರ ಹಾಗೂ ಗ್ರಾಮೀಣ ಪ್ರದೇಶದ ಯುವಕರ ಮತ್ತು ಯುವತಿಯರ ಸಂಘಟನೆಗೆ ಆದ್ಯತೆ ನೀಡಿದ್ದು, ಈಗಾಗಲೇ ಕಳೆದ ಒಂದು ವಾರದಿಂದ ಪ್ರವಾಸಿ ಕೈಗೊಂಡು ಹಲವಾರು ಗ್ರಾಮಗಳಲ್ಲಿ ಹಾಲುಮತಸಭಾದ ಕನಕ ಒಡ್ಡೋಲಗವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆಹಟ್ಟಿ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ನಾಗೇನಹಳ್ಳಿ, ಮಲ್ಲಿಕಾರ್ಜುನ, ಲಕ್ಷ್ಮಿಸಾಗರ, ಜಿ.ಎನ್.ಜಗದೀಶ್, ಮಹಂತೇಶ್, ಬಸವರಾಜು ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








