ಚಳ್ಳಕೆರೆ
ಪ್ರತಿನಿತ್ಯ ನಗರದ ಸ್ವಚ್ಚತೆಯನ್ನು ಕಾಪಾಡುವ ಮೂಲಕ ಸಾರ್ವಜನಿಕರಿಗೆ ನೆಮ್ಮದಿಯ ಬದುಕನ್ನು ನೀಡುವುದಲ್ಲದೆ ಉತ್ತಮ ಆರೋಗ್ಯವಂತರನ್ನಾಗಿ ಮಾಡುವುದಲ್ಲದೆ ನಗರಸಭೆ ಆಡಳಿತ ಮತ್ತು ಪೌರಕಾರ್ಮಿಕರ ಶ್ರಮ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಸ್ವಚ್ಚತೆ ಅಭಿಯಾನ ಯಶಸ್ಸಿಯಲ್ಲಿ ನಿಮ್ಮ ಪಾತ್ರ ಬಹುಮುಖ್ಯವಾಗಿದ್ದು, ನಿಮ್ಮ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆಂದು ಇಲ್ಲಿನ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.
ಅವರು, ಬುಧವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಗರಸಭೆ ಆಡಳಿತ ಸಹಕಾರದೊಂದಿಗೆ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ ಕಾರ್ಯಕ್ರಮವನ್ನು ತಾವೇ ಆವರಣ ಸ್ವಚ್ಚಗೊಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪ್ರತಿನಿತ್ಯವೂ ಬೆಳಗ್ಗೆ ಸೂರ್ಯೋದಯಕ್ಕಿಂತ ಮುಂಚೆ ತಮ್ಮ ಪರಿಕರಕಗಳೊಂದಿಗೆ ನಗರದ ಬೀದಿ ಬೀದಿಗಳಿಗೆ ತೆರಳಿ ಚಳಿ ಮಳೆಯನ್ನೂ ಲೆಕ್ಕಿಸದೆ ಕಾರ್ಯನಿರ್ವಹಿಸುತ್ತೀರ. ನಗರದ ನಾಗರೀಕರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವುದರಲ್ಲಿ ಯಶಸ್ಸಿಯಾಗಿದ್ದೀರ. ನಗರಸಭೆಯ ಈ ಕಳಕಳಿಗೆ ಎಲ್ಲರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಅಪರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಇಂದು ನಗರ ಪ್ರದೇಶಗಳ ಜೊತೆಗೆ ಗ್ರಾಮಾಂತರ ಪ್ರದೇಶದಲ್ಲೂ ಸಹ ಹೆಚ್ಚು ಜಾಗೃತಿಯನ್ನು ಮೂಡಿಸುತ್ತಿದೆ. ವ್ಯಕ್ತಿ ಆರೋಗ್ಯ ಸದೃಢವಾದಲ್ಲಿ ಸಮಾಜ ಸದೃಢವಾಗುತ್ತದೆ. ಸಮಾಜದ ಸದೃಢವಾದಲ್ಲಿ ರಾಜ್ಯ ಹಾಗೂ ರಾಷ್ಟ್ರ ಸದೃಢವಾಗುತ್ತವೆ. ನಿಮ್ಮ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲವೆಂದರು. ನ್ಯಾಯಾಧೀಶರಾದ ಜನಾರ್ಥನ್ ಮಾತನಾಡಿದರು.
ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ನಗರಸಭೆ ಪೌರಾಡಳಿತ ಇಲಾಖೆ ನಿರ್ದೇಶನದ ಮೇರೆಗೆ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪೌರಕಾರ್ಮಿಕರ ಸವಲತ್ತುಗಳು ಹಾಗೂ ಅವರ ಆರೋಗ್ಯ ರಕ್ಷಣೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರತಿಯೊಬ್ಬ ಕಾರ್ಮಿಕನಿಗೂ ಕಾರ್ಯನಿರ್ವಹಿಸುವಾಗ ಯಾವುದೇ ರೀತಿಯ ಸೊಂಕು ತಗುಲದೇ ಇರಲಿ ಎಂದು ಕೈ, ಕಾಲು ಮತ್ತು ಮೂಗನ್ನು ಸಂರಕ್ಷಿಸಿಕೊಳ್ಳುವ ಸಲಕರಣೆಗಳನ್ನು ನೀಡಲಾಗುತ್ತಿದೆ. ಪ್ರತಿನಿತ್ಯ ಬೆಳಗಿನ ಉಪಹಾರವನ್ನು ಸಹ ನಗರಸಭೆಯಲ್ಲಿ ನೀಡಲಾಗುತ್ತಿದೆ. ಪೌರಕಾರ್ಮಿಕರ ರಕ್ಷಣೆಯೂ ಸೇರಿದಂತೆ ಅವರ ಎಲ್ಲಾ ಸಮಸ್ಯೆಗಳಿಗೆ ಇಲಾಖೆ ಸೂಕ್ತವಾಗಿ ಸ್ಪಂದಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ, ಗಣೇಶ್, ವಕೀಲರ ಸಂಘ ಅಧ್ಯಕ್ಷ ಕೆ.ಎಂ.ನಾಗರಾಜು, ಎಪಿಪಿ ಲಿಂಗೇಶ್ವರ ಮುಂತಾದವರು ಭಾಗವಹಿಸಿದ್ದರು.