ಸಂಶೋಧನೆ ನಡೆಸಿ ವಿಶ್ವದರ್ಜೆ ವಿವಿಗಳನ್ನಾಗಿಸಿ

ದಾವಣಗೆರೆ

         ವಿದ್ಯಾರ್ಥಿಗಳು ಆವಿಷ್ಕಾರಿ ಯೋಚನೆಗಳಲ್ಲಿ ತೊಡಗುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಸಂಶೋಧನೆಯಲ್ಲಿ ತೊಡಗಬೇಕೆಂದು ಬೆಂಗಳೂರಿನ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯಾತಾ ಸಂಸ್ಥೆಯ ನಿರ್ದೇಶಕ ಪ್ರೊ.ಎಸ್.ಪಿ.ಶರ್ಮಾ ಕರೆ ನೀಡಿದರು.
ನಗರದ ಹೊರವಲಯದ ಶಿವಗಂಗೋತ್ರಿ ಆವಣರದಲ್ಲಿ ಬುಧವಾರ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ 6ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಶಿಕ್ಷಣ ಜೊತೆಯಾಗಿ ಸಂಶೋಧನೆಯ ಜೊತೆ ಜೊತೆಗೆ ಸಾಗುವ ಮೂಲಕ ನಮ್ಮ ವಿಶ್ವವಿದ್ಯಾನಿಲಯಗಳನ್ನು ಭಾರತದಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾನಿಲಯಗಳನ್ನಾಗಿ ಮಾಡಬೇಕೆಂದು ಕಿವಿಮಾತು ಹೇಳಿದರು.

         ಸಂಶೋಧಕ ಹಾಗೂ ಸಂಶೋಧನಾ ಪ್ರಬಂಧದ ನಡುವೆ ಸಮನ್ವಯತೆಯೇ ಇಲ್ಲದ ಕಾರಣ ವಿಶ್ವವಿದ್ಯಾನಿಲಯಗಳಲ್ಲಿ ಉತ್ತಮ ಸಂಶೋಧನೆಗಳು ಬರುತ್ತಿಲ್ಲ. ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಭಾವನಾತ್ಮಕವಾಗಿ ತೊಡಗಿಕೊಳ್ಳುತ್ತಿಲ್ಲ. ಅವರು ಸಂಶೋಧನಾ ಪ್ರಬಂಧದಲ್ಲಿ ಬರೆದದ್ದನ್ನು ಮತ್ತೆ ತಿರುಗಿ ಸಹ ಓದುವುದೇ ಇಲ್ಲ. ಹೀಗಾಗಿ ಗುಣಮಟ್ಟದ ಸಂಶೋಧನೆಗಳು ಬರುತ್ತಿಲ್ಲ. ಸಾಕಷ್ಟು ಯುವ ಸಂಶೋಧಕ ವಿದ್ವಾಂಸರು ವಿಶ್ವವಿದ್ಯಾನಿಲಯಗಳಿಗೆ ಬರುತ್ತಿಲ್ಲ. ಸಂಶೋಧನೆಯ ಕಡೆ ಒಲವು ತೋರುತ್ತಿಲ್ಲ. ಸಂಶೋಧನೆ ಪರಕೀಯ ಚಟುವಟಿಕೆಯಂತಾಗಿದೆ. ಉದ್ಯೋಗ ಇಲ್ಲವೇ ಬಡ್ತಿಗಾಗಿ ಪದವಿ ಹಾಗೂ ಸಂಶೋಧನೆ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪಶ್ಚಿಮೇತ್ತರ ಸಂಸ್ಕೃತಿಗಳಿಗೆ ಹೋಲಿಸಿದರೆ, ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಣದ ಇತಿಹಾಸ ದೀರ್ಘವಾಗಿದೆ.

         ವಿಶ್ವದಾದ್ಯಂತ ಈಗ ಇರುವ ವಿಶ್ವವಿದ್ಯಾನಿಲಯಗಳಲ್ಲಿ ಪಾಶ್ಚಾತ್ಯ ನಾಗರೀಕತೆಯ ಕೊಡುಗೆ ಹೆಚ್ಚಾಗಿದೆ. ನಮ್ಮಲ್ಲಿ ಈಗ ನಳಂದ ಹಾಗೂ ತಕ್ಷಶಿಲಾ ರೀತಿಯ ಪುರಾತನ ಕಲಿಕಾ ಪರಿಕಲ್ಪನೆ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಭಾರತದಲ್ಲಿ 19ನೇ ಶತಮಾನದ ನಂತರದ ಭಾಗದಲ್ಲಿ ಕಲ್ಕತ್ತಾ, ಬಾಂಬೆ ಹಾಗೂ ಮದ್ರಾಸ್ ವಿಶ್ವವಿದ್ಯಾನಿಲಯಗಳು ಸ್ಥಾಪಿಯಾಗಿದ್ದವು. ಇವುಗಳು ಪ್ರಜಾಸತ್ತಾತ್ಮಕ ಪದ್ಧತಿಗಳ ನೆಲೆಯಾಗಿದೆ. ಇವು ಸಾಮಾಜಿಕ ನ್ಯಾಯಾದ ಪರಿಕಲ್ಪನೆಯನ್ನು ತಕ್ಕ ಮಟ್ಟಿಗೆ ಒದಗಿಸಿವೆ ಹಾಗೂ ಉತ್ತಮ ನಾಗರಿಕರನ್ನಾಗಿ ಮಾಡಿವೆ ಎಂದ ಅವರು, ಭಾರತದಲ್ಲಿ ವಿಶ್ವವಿದ್ಯಾನಿಲಯದ ಪರಿಕಲ್ಪನೆಯನ್ನು ಕಂಡುಕೊಳ್ಳುವುದು ಈಗಿನ ತುರ್ತು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

         ಇತ್ತೀಚೆಗೆ ಭಾರತದ ಉನ್ನತ ಶಿಕ್ಷಣದಲ್ಲಿ ಶೈಕ್ಷಣಿಕ ಅಭ್ಯಾಸಗಳಲ್ಲಿ ಗುಣಮಟ್ಟ ಕ್ಷೀಣಿಸುತ್ತಿದೆ. ಸಮಾವೇಶಗಳಲ್ಲಿ ಭಾಗವಹಿಸುವಾಗ ಎ.ಪಿ.ಐ. ಸ್ಕೋರ್ ಗಳಿಸುವ ಹಾಗೂ ಇತರ ತಕ್ಷಣದ ಲಾಭಗಳಿಗೆ ನಾವು ಸೀಮಿತವಾಗುತ್ತಿದ್ದೇವೆ. ಶೈಕ್ಷಣಿಕ ಶ್ರಮವನ್ನು ಬದಕಲಿಕ್ಕಾಗಿ ಮಾತ್ರ ಸೀಮಿತಗೊಳಿಸಾರದು. ಎಲ್ಲಾ ಶೈಕ್ಷಣಿಕ ಕಾರ್ಯಗಳು ನಮ್ಮ ಕುತೂಹಲ ತಣಿಸುವ ಹಾಗೂ ಸಂತೃಪ್ತ ಭಾವನೆ ತರುವುದಕ್ಕಾಗಿ ಇರಬೇಕೆಂಬ ಭಾವನೆ ನಮ್ಮಲ್ಲಿ ಬರಬೇಕೆಂದು ಕಿವಿಮಾತು ಹೇಳಿದರು.      

          ಶಿಕ್ಷಣ ನಮ್ಮ ವಿದ್ಯಾರ್ಥಿಗಳ ಮನಸ್ಸನ್ನು ಮುಕ್ತಗೊಳಿಸುವ ಮೂಲಕ, ಚಿಂತನೆಗೆ ಇರುವ ಅಡೆತಡೆಗಳನ್ನು ನಿವಾರಿಸಬೇಕು. ಅನ್ಯಾಯ, ಅಸಮಾನತೆ, ದಬ್ಬಾಳಿಕೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳು ಹೊಂದಿರುವ ಪರಿಕಲ್ಪನೆ ಬದಲಾಗದೇ ಹೋದರೆ ವಿಶ್ವವಿದ್ಯಾನಿಲಯ ಶಿಕ್ಷಣ ಕಲಿತದ್ದೂ ಸಾರ್ಥಕವಾಗುವುದಿಲ್ಲ ಎಂದರು.

         ಸ್ವಾಗತ ಕೋರಿ, ಪ್ರಾಸ್ತಾವಿಕ ಮಾತನಾಡಿದ ದಾವಣಗೆರೆ ವಿವಿಯ ಕುಲಪತಿ ಪ್ರೊ.ಎಸ್.ವಿ.ಹಲಸೆ, ಚಿತ್ರದುರ್ಗ ಹಾಗೂ ದಾವಣ ಗೆರೆ ಜಿಲ್ಲೆಯ ಜನರ ಬಹು ನಿರೀಕ್ಷೆಯಂತೆ 2009ರ ಆಗಸ್ಟ್ 18ರಂದು ಸ್ಥಾಪನೆಯಾದ ದಾವಣಗೆರೆ ವಿವಿಯು ಒಟ್ಟು 251.1 ಎಕರೆ ಭೂಮಿ ಹೊಂದಿದ್ದು, ಮೂರು ಕ್ಯಾಂಪಸ್‍ಗಳನ್ನು ಹೊಂದಿದೆ. ಯುಜಿಸಿಯ ಮಾರ್ಗದರ್ಶಿ ಸೂತ್ರಗಳು ಮತ್ತು ಉನ್ನತ ಶಿಕ್ಷಣ ನೀತಿಗಳನ್ವಯ ಗುಣಮಟ್ಟದ ಶಿಕ್ಷಣ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ 24 ವಿಷಯಗಳಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡುವುದರ ಜತೆಗೆ ಸಂಶೋಧನೆಯಲ್ಲಿ ಎಂ.ಫಿಲ್, ಪಿ.ಹೆಚ್‍ಡಿ ನೀಡುತ್ತಿದೆ ಎಂದರು.

          ವಿವಿಯು ತನ್ನ ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳಿಗೂ ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಂ ಅಡಿಯಲ್ಲಿ ಶಿಕ್ಷಣ ನೀಡುತ್ತಿದೆ. ಒಂದು ಘಟಕ ಕಾಲೇಜು ಹಾಗೂ ಒಂದು ಸ್ವಾಯತ್ತ ಕಾಲೇಜು ಸೇರಿದಂತೆ ಒಟ್ಟು 124 ಕಾಲೇಜುಗಳ ಮೂಲಕ 70 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಕೆಲವು ತರಗತಿಗಳ ಕೊಠಡಿಗಳಿಗೆ ಸ್ಮಾರ್ಟ್ ಬೋರ್ಡ್‍ಗಳನ್ನು ಮತ್ತು ಎಲ್‍ಸಿಡಿ ಪ್ರೊಜೆಕ್ಟರ್‍ಗಳನ್ನು ಅಂತರ್ಜಾಲ ಸೌಲಭ್ಯದೊಂದಿಗೆ ಅಳವಡಿಸಲಾಗಿದೆ ಎಂದರು.

           ವಿಜ್ಞಾನ ಮತ್ತು ಕಲಾ ವಿಭಾಗಗಳಲ್ಲಿ ಅತ್ಯುತ್ತಮ ಸಂಶೋಧನೆ ನಡೆಯುತ್ತಿದ್ದು, 5 ಕೋಟಿಗೂ ಹೆಚ್ಚು ಸಂಶೋಧನಾ ಅನುದಾನ ಪಡೆದು ವಿವಿಧ ಸಂಸ್ಥೆಗಳಿಂದ 500ಕ್ಕೂ ಹೆಚ್ಚು ಸಂಶೋಧನಾ ಪತ್ರಿಕೆಗಳನ್ನು ಪ್ರಕಟಿಸಲಾಗಿದೆ. ಅಲ್ಲದೆ, ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವಿದ್ಯಾಥಿಗಳಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವುದರ ಜತೆದೆ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ, ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯ ಮೂಲಕ ಆಂತರಿಕ ಗುಣಮಟ್ಟಗಳ ನಿರ್ಹಣಾ ಸಮಿತಿಯ ಮೂಲಕ ವಿವಿಯ ಎಲ್ಲಾ ಅಗತ್ಯತೆಗಳನ್ನು ಪೂರೈಸಿ ನ್ಯಾಕ್‍ನಿಂದ ಬಿ ಶೇಣಿ ಪಡೆದಿದೆ ಎಂದು ಹೇಳಿದರು.

          ಕಲಾ ನಿಕಾಯದ ಮುಖ್ಯಸ್ಥ ಪ್ರೊ.ವೀರಭದ್ರಪ್ಪ, ವಾಣಿಜ್ಯ ನಿಕಾಯದ ಪ್ರೊ.ಲಕ್ಷ್ಮಣ, ವಿಜ್ಞಾನ ನಿಕಾಯದ ಗಾಯತ್ರಿ ದೇವರಾಜ್ ಹಾಗೂ ಶಿಕ್ಷಣ ನಿಕಾಯದ ಪ್ರೊ.ಬಿ.ಸಿ.ಅನಂತರಾಮ್ ಅವರುಗಳು ತಮ್ಮ ನಿಕಾಯದ ಅಡಿಯಲ್ಲಿ ಪದವಿ, ರ್ಯಾಂಕ್, ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿದರು.

            10,648 ಸ್ನಾತಕ ವಿದ್ಯಾರ್ಥಿಗಳು, 1895 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ ಒಟ್ಟು 12,543 ವಿದ್ಯಾರ್ಥಿಗಳು ಪದವಿ ಪಡೆದರು.

            ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ.ಎಸ್.ಎಂ.ಎಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ ದಾವಣಗೆರೆ ವಿವಿಯ ಕುಲ ಸಚಿವ ಪ್ರೊ.ಪಿ.ಕಣ್ಣನ್, ಪರೀಕ್ಷಾಂಗ ಕುಲಸಚಿವ ಪ್ರೊ.ಬಸವರಾಜ ಬಣಕಾರ್, ಸಿಂಡಿಕೇಟ್ ಮತ್ತು ವಿದ್ಯಾ ವಿಷಯಕ ಪರಿಷತ್ ಸದಸ್ಯರುಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link