ಸರ್ಕಾರದ ಕನ್ನಡ ವಿರೋಧಿ ನಿಲುವು ಪ್ರಶ್ನಾರ್ಹ

ದಾವಣಗೆರೆ

        ಸಾವಿರ ಇಂಗ್ಲೀಷ್ ಶಾಲೆಗಳನ್ನು ಆರಂಭಿಸುವುದಾಗಿ ಹೇಳುವ ಆಳುವ ಸರ್ಕಾರದಿಂದ ಇನ್ನೂ ಹೇಗೆ ಕನ್ನಡ ಉಳಿಯಲು ಸಾಧ್ಯ? ಎಂದು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಲೋಕೇಶ ಅಗಸನಕಟ್ಟೆ ಪ್ರಶ್ನಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಆರಂಭಗೊಂಡ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಪ್ರಸ್ತುತ ಆಳುವ ಸರ್ಕಾರಗಳೇ ಕನ್ನಡ ವಿರೋಧಿ ನಿಲುವುಗಳನ್ನು ತಳೆಯುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

         ವಿದೇಶಿ ಆಕ್ರಮಣಕಾರರು ಹಿಂದೆ ನಾಡಿನ ಸಂಸ್ಕತಿಯ ವಿನಾಶಕ್ಕೆ ಮುಂದಾದ ಸಂದರ್ಭದಲ್ಲಿ, ಇಲ್ಲಿನ ದೇಸೀಪ್ರಜ್ಞೆ ಅದಕ್ಕೆ ತಡೆಗೋಡೆಯಾಗಿ ನಿಂತಿತ್ತು. ಆದರೆ, ಅಧಿಕಾರ ಹಸ್ತಾಂತರವಾದ ನಂತರ ನಮ್ಮವರೇ ನಾಡಿನ ಪರಂಪರೆ, ಭಾಷಿಕ ವಿಚಾರ ಮರೆತುಬಿಟ್ಟರು. ಅದರಲ್ಲೂ ಈಗಿನ ಸರ್ಕಾರವೇ ಸಾವಿರ ಇಂಗ್ಲೀಷ್ ಶಾಲೆಗಳನ್ನು ಆರಂಭಿಸುವುದಾಗಿ ಹೇಳುತ್ತಿರುವಾಗ ಕನ್ನಡ ಹೇಗೆ ಉಳಿಯಲು ಸಾಧ್ಯ ಎಂದರು.

         ಅಧಿಕಾರಸ್ಥರಿಗೆ ಸಾಹಿತಿ ಹಾಗೂ ಸಾಹಿತ್ಯದ ಬಗ್ಗೆ ಗೌರವವೇ ಇಲ್ಲವಾಗಿದೆ. ನಾವು ಯಾರನ್ನೋ ಕೇಳಿ ಮೈತ್ರಿ ಸರ್ಕಾರ ಮಾಡಿಕೊಂಡಿಲ್ಲ ಎಂಬುದಾಗಿ ಧಾಷ್ರ್ಯದಿಂದ ಮಾತನಾಡುವ ಮುಖ್ಯಮಂತ್ರಿಯಿಂದ ಕನ್ನಡ ಉಳಿದೀತೆಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

        ಜನರೇ ಕನ್ನಡದ ಅಸ್ಮಿತೆಯನ್ನು ಉಳಿಸಲು ಮುಂದಾಗಬೇಕಾದ ಅನಿವಾರ್ಯತೆ ಈ ಹಿಂದಿಗಿಂತಲೂ ಈಗ ಅತ್ಯಂತ ಜರೂರಾಗಿದೆ ಎಂದ ಅವರು, ಇಂಗ್ಲೀಷ್ ಇಲ್ಲದೇ ಬದುಕುವುದು ಸಾಧ್ಯವಿಲ್ಲವೆಂಬುದು ಬರೀ ಭ್ರಮೆಯಾಗಿದೆ. ಭಾಷೆಯೇ ಬೇರೆ, ಕೌಶಲ್ಯವೇ ಬೇರೆ. ಕುಶಲತೆ ಕಲಿಯಲು ಭಾಷೆ ಒಂದು ಮಾಧ್ಯಮವಷ್ಟೇ ಎಂದರು.

        ಮನುಷ್ಯ ಸಂಬಂಧದ ಜಾಗದಲ್ಲಿ ಪ್ರಸ್ತುತ ಮನೆ, ಸೈಟು, ಹಣದ ಝಣತ್ಕಾರ ಕೇಳಿಸುತ್ತಿದೆ. ಎಲ್ಲ ಮನೆಗಳೂ ಅಶಾಂತಿಯ, ಅತೃಪ್ತರ ತಾಣಗಳಾಗುತ್ತಿವೆ. ಅಂಚಿನ ಸಮುದಾಯಗಳು ಮೀಸಲಾತಿಗಾಗಿ ಹೋರಾಟಕ್ಕಿಳಿದಿರುವ ಈ ಹೊತ್ತಿನಲ್ಲಿ ಇಂಗ್ಲೀಷ್ ಕೆಲವರಿಗೆ ಬಿಡುಗಡೆಯ ದಾರಿಯಾಗಿ ಕಾಣುತ್ತಿದ್ದರೆ, ಕೆಲವರಿಗೆ ಅನ್ನದ ಪ್ರಶ್ನೆಯಾಗಿದೆ ಎಂದರು.

         ವಿಘಟನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಬರಹಗಾರನ ಜವಾಬ್ದಾರಿ ಅತ್ಯಂತ ಹೆಚ್ಚಾಗಿದೆ. ಸುಳ್ಳು, ಭ್ರಮೆಗಳನ್ನು ಹೊಡೆದು ಹಾಕಿ, ವಾಸ್ತವವನ್ನು ಬರಹಗಾರ ಕಟ್ಟಿಕೊಡುವ ಮೂಲಕ ಸತ್ಯದ ಪರವಾಗಿ ಬರಹಗಾರ ದನಿ ಎತ್ತಬೇಕಾದ ಅವಶ್ಯಕತೆ ಇದೆ ಎಂದ ಅವರು, ಮಧ್ಯ ಕರ್ನಾಟಕದ ದಾವಣಗೆರೆಯು ರಾಜಧಾನಿಯಾಗಬೇಕೆಂಬ ಅಭಿಪ್ರಾಯ ಮೂಡಿತ್ತು. ಆದರೆ, ಜಾತಿಯ ಮನಸ್ಸುಗಳಿಗೆ ಇದು ಕೇಳದೇ ಹೋಯಿತು. ಒಂದು ವೇಳೆ ದಾವಣಗೆರೆಯೇ ರಾಜಧಾನಿಯಾಗಿದ್ದರೆ, ಇಲ್ಲಿನ ಅನನ್ಯತೆ, ಪರಿಸರ ನಾಶವಾಗುವ ಅಪಾಯವೂ ಇತ್ತು. ಆದರೆ, ರಾಜಧಾನಿಯಾಗದ ಕಾರಣ ಅದೆಲ್ಲಾ ಪ್ರಕ್ರಿಯೆ ತಡವಾಗಿ ನಡೆಯುತ್ತಿದೆ ಎಂದು ಸೂಚ್ಯವಾಗಿ ನುಡಿದರು.

         ಕನ್ನಡ ನಾಡಿನ ಜೀವ ನದಿ ಎಂದು ‘ಕಾವೇರಿ’ಯನ್ನು ಬಣ್ಣಿಸಲಾಗುತ್ತಿದೆ. ಈ ಮಾತು ಕೇಳಿದಾಗಲೆಲ್ಲ ನನಗೆ ಕಳವಳ ಉಂಟಾಗುತ್ತದೆ. ನಿಜವಾಗಿ ಹೇಳಬೇಕೆಂದರೆ ಕನ್ನಡ ನಾಡಿನ ಜೀವ ನದಿ ‘ತುಂಗಾಭದ್ರೆ’ ಎಂದು ಸಮ್ಮೇಳನ ಅಧ್ಯಕ್ಷರು ಪ್ರತಿಪಾದಿಸಿದರು.
ಕುವೆಂಪು ಅವರು ಬರೆದ ನಾಡಗೀತೆಯ ಸಾಲಿನಲ್ಲಿ ಕೃಷ್ಣ ಶರಾವತಿ ತುಂಗಾ ಕಾವೇರಿಯ ವರರಂಗ… ಹೀಗೆ ಕಾವೇರಿಯನ್ನು ಕೊನೆಯಲ್ಲಿ ಹೇಳಿದ್ದಾರೆ. ತುಂಗಾಭದ್ರೆ ಪಚ್ಚಿಮಘಟ್ಟದಲ್ಲಿ ಹುಟ್ಟಿ ನಾಡಿನ ಮಧ್ಯಭಾಗದಲ್ಲಿ ಹರಿಯುತ್ತಾಳೆ. ಹೀಗೆ, ಈ ಪ್ರದೇಶದ ಹೆಚ್ಚಿನ ಜನರಿಗೆ ಜೀವ ನದಿಯಾಗಿದೆ. ಆದರೆ, ಕೆಲವು ಕವಿಗಳು ಕಾವೇರಿಯನ್ನು ಬಣ್ಣಿಸುವ ನಿಟ್ಟಿನಲ್ಲಿ ಮಾಡಿದ ಸಣ್ಣ ತಪ್ಪು ಇಂದು ಜೀವ ನದಿ ಆಗಬೇಕಿದ್ದ ‘ತುಂಗಾಭದ್ರೆ’ಯ ಬದಲಿಗೆ ‘ಕಾವೇರಿ’ಯನ್ನು ಹೇಳಲಾಗುತ್ತಿದೆ ಎಂದು ಹೇಳಿದರು.

         ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಿದರು. ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಎಸ್.ಬಿ.ರಂಗನಾಥ, ಕಸಾಪ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ, ಮಾಜಿ ಜಿಲ್ಲಾಧ್ಯಕ್ಷ ಎ.ಆರ್.ಉಜ್ಜನಪ್ಪ, ತಾಲೂಕು ಅಧ್ಯಕ್ಷ ಬಿ.ವಾಮದೇವಪ್ಪ, ಡಿಡಿಪಿಐ ಪರಮೇಶ್ವರಪ್ಪ, ಡಾ.ಹೆಚ್.ಟಿ.ಕೃಷ್ಣಮೂರ್ತಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಿ.ದಿಳ್ಳೆಪ್ಪ ಸ್ವಾಗತಿಸಿದರು. ಎನ್.ಎಸ್.ರಾಜು ಕಾರ್ಯಕ್ರಮ ನಿರೂಪಿಸಿದರು. ಬುರುಡೇಕಟ್ಟೆ ಮಂಜಪ್ಪ ವಂದನಾರ್ಪಣೆ ಮಾಡಿದರು.

           ಉದ್ಘಾಟನಾ ಸಮಾರಂಭದ ನಂತರ ದಾವಣಗೆರೆ ಜಿಲ್ಲೆಯ ಅನನ್ಯತೆ ಹಾಗೂ ಕನ್ನಡ ಸಾಹಿತ್ಯ: ಸಾಮರಸ್ಯದ ನೆಲೆಗಳು ಕುರಿತು ವಿಚಾರಗೋಷ್ಠಿ ನಡೆದವು. ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link