ಹೊನ್ನಾಳಿ:
ತಾಲೂಕಿನ ಕಮ್ಮಾರಗಟ್ಟೆ ಗ್ರಾಮದ ಸರ್ವೇ ನಂ. 96 ಮತ್ತು 97ರಲ್ಲಿನ 48 ಕುಟುಂಬಗಳ ಗುಡಿಸಲು ನಿವಾಸಿಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಿದ್ದು, ಶೀಘ್ರವೇ ತಹಸೀಲ್ದಾರರು ಅವರಿಗೆ ನಿವೇಶನಗಳನ್ನು ನೀಡಬೇಕು ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಕಮ್ಮಾರಗಟ್ಟೆ ಜೆ.ಕೆ. ಮಾಲತೇಶ್ ವಿನಂತಿಸಿದರು.
ಈ ಕುರಿತು ಮಂಗಳವಾರ ತಹಸೀಲ್ದಾರ್ ತುಷಾರ್ ಬಿ. ಹೊಸೂರ್ ಅವರಿಗೆ ಮನವಿಪತ್ರ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.ತಮಗೆ ನಿವೇಶನ ನೀಡಬೇಕು ಎಂದು ಕಮ್ಮಾರಗಟ್ಟೆ ಗ್ರಾಮದ 48 ಮಂದಿ ಅನೇಕ ಬಾರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಭೂ ಕಬಳಿಕೆ ಮಾಡಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಆರೋಪಿಸಿದ್ದಾರೆ. ಈ ಕಾರಣಕ್ಕೆ ಅವರ ವಿರುದ್ಧ ಬೆಂಗಳೂರಲ್ಲಿ ಪ್ರಕರಣ ದಾಖಲಿಸಬೇಕು ಎಂದು ಶಿಫಾರಸು ಮಾಡಿದ್ದಾರೆ. ಇದು ಸಲ್ಲದು. ಬಡವರು ಜಮೀನು ಬೇಕು ಎಂದು ಕೇಳುತ್ತಿಲ್ಲ.
ಹಗಲೆಲ್ಲಾ ಕೂಲಿ ಕೆಲಸ ಮಾಡಿ ಮನೆಗೆ ಬಂದು ನೆಮ್ಮದಿಯಿಂದ ನಿದ್ದೆ ಮಾಡಲು ಅಗತ್ಯವಾದ ಮನೆ ನಿರ್ಮಿಸಿಕೊಳ್ಳಲು ನಿವೇಶನ ಕೇಳುತ್ತಿದ್ದಾರೆ. ಶೀಘ್ರವೇ ಅವರಿಗೆ ನಿವೇಶನ ನೀಡಬೇಕು. ಇಲ್ಲದಿದ್ದರೆ, ತಾಲೂಕು ಕಚೇರಿ ಎದುರು ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಮುಖಂಡರಾದ ಎಸ್. ಹಾಲೇಶ್, ದಿಡಗೂರು ಸಂತೋಷ್, ಸೊರಟೂರು ಹನುಮಂತಪ್ಪ, ಆರುಂಡಿ ನರಸಿಂಹ, ದಿಡಗೂರು ಎನ್. ರಾಜು, ನರಸಗೊಂಡನಹಳ್ಳಿ ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.