ತುಮಕೂರು ಪಾಲಿಕೆ: ಜೆಡಿಎಸ್-ಕಾಂಗ್ರೆಸ್ ಮೈತ್ರಿ, ಅವಿರೋಧ ಆಯ್ಕೆ

ತುಮಕೂರು

        ತುಮಕೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಆಡಳಿತ ಮತ್ತೊಮ್ಮೆ ಅಸ್ತಿತ್ವಕ್ಕೆ ಬಂದಿದ್ದು, ಜೆಡಿಎಸ್‍ನ ಲಲಿತಾ ರವೀಶ್ ಮೇಯರ್ ಆಗಿ ಮತ್ತು ಕಾಂಗ್ರೆಸ್‍ನ ಬಿ.ಎಸ್.ರೂಪಶ್ರೀ ಉಪಮೇಯರ್ ಆಗಿ ಬುಧವಾರ ಸರ್ವಾನುಮತದಿಂದ ಆಯ್ಕೆಯಾದರು.

          ಮೇಯರ್ ಸ್ಥಾನವು “ಹಿಂದುಳಿದ ವರ್ಗ-ಎ (ಮಹಿಳೆ)” ಕ್ಕೆ ಮೀಸಲಾಗಿದ್ದು, ತಿಗಳ ಸಮುದಾಯಕ್ಕೆ ಸೇರಿದ ಲಲಿತಾ ರವೀಶ್ ಅವರಿಗೆ ಎರಡನೇ ಬಾರಿ ಮೇಯರ್ ಆಗುವ ಅದೃಷ್ಟ ಲಭಿಸಿದೆ. ಇವರು ಪ್ರಸ್ತುತ ನಗರದ 21 ನೇ ವಾರ್ಡ್ ಪ್ರತಿನಿಧಿಸುತ್ತಿದ್ದಾರೆ. ಹಿಂದಿನ ಪಾಲಿಕೆಯಲ್ಲಿ ಇವರು ದಿನಾಂಕ 05-02-2015 ರಿಂದ ದಿ. 09-02-2016 ರವರೆಗೆ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ಉಪಮೇಯರ್ ಸ್ಥಾನವು “ಪರಿಶಿಷ್ಟ ಜಾತಿ (ಮಹಿಳೆ)”ಗೆ ಮೀಸಲಾಗಿದ್ದು, ಇದೇ ಮೊದಲ ಬಾರಿಗೆ ಆರಿಸಿಬಂದಿರುವ 19 ನೇ ವಾರ್ಡ್‍ನ ಬಿ.ಎಸ್. ರೂಪಶ್ರೀ ಅವರಿಗೆ ಈ ಸ್ಥಾನವು ಒಲಿದಿದೆ.

ಬಿಜೆಪಿಗೆ 2 ಸಮಿತಿಗಳು

        ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಪೈಕಿ, ಕಾಂಗ್ರೆಸ್ ಪಕ್ಷವು ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯನ್ನು ಹಾಗೂ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿಸಮಿತಿಯನ್ನು ಜೆ.ಡಿ.ಎಸ್. ಪರಸ್ಪರ ಹಂಚಿಕೊಂಡಿವೆ. ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಯನ್ನು ಬಿ.ಜೆ.ಪಿ.ಗೆ “ಬಿಟ್ಟುಕೊಡಲಾಗಿದೆ”. ಈ ನಾಲ್ಕೂ ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಇನ್ನು ಸದ್ಯದಲ್ಲೇ ಬಿಜೆಪಿಯು ಪಾಲಿಕೆಯಲ್ಲಿ “ಅಧಿಕೃತ ವಿರೋಧ ಪಕ್ಷ”ವೂ ಆಗಲಿದ್ದು, ಬಿಜೆಪಿಯ ಓರ್ವರು “ವಿಪಕ್ಷ ನಾಯಕ” ಪಟ್ಟವನ್ನು ಏರಲಿದ್ದಾರೆ.

       ಬುಧವಾರ ಮಹಾನಗರ ಪಾಲಿಕೆ ಕಚೇರಿಯಲ್ಲಿ ಇವೆಲ್ಲ ಸ್ಥಾನಗಳ ಆಯ್ಕೆಗಾಗಿ ಚುನಾವಣೆ ನಿಗದಿಯಾಗಿತ್ತು. ಆದರೆ ಅಂತಿಮವಾಗಿ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆಯಿತು. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಚುನಾವಣಾಧಿಕಾರಿ ಆಗಿದ್ದು, ಚುನಾವಣಾ ಪ್ರಕ್ರಿಯೆ ನಡೆಸಿದರು. ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಮತ್ತು ಪಾಲಿಕೆ ಆಯುಕ್ತ ಟಿ.ಭೂಪಾಲನ್ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಚುನಾವಣಾ ಪ್ರಕ್ರಿಯೆ

         ಪಾಲಿಕೆ ಕಚೇರಿಯಲ್ಲಿ ಬೆಳಗ್ಗೆ 8 ರಿಂದ 9-30 ರವರೆಗೆ “ನಾಮಪತ್ರ ಸಲ್ಲಿಕೆ” ಪ್ರಕ್ರಿಯೆ ಇತ್ತು. ಆದರೆ ಆ ಅವಧಿಯಲ್ಲಿ ಮೇಯರ್ ಸ್ಥಾನಕ್ಕೆ ಲಲಿತಾ ರವೀಶ್ ಮತ್ತು ಉಪಮೇಯರ್ ಸ್ಥಾನಕ್ಕೆ ಬಿ.ಎಸ್. ರೂಪಶ್ರೀ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆ ಅವಿರೋಧವೆಂಬುದು ಮೊದಲೇ ಖಚಿತವಾಯಿತು.

        ಪೂರ್ವನಿಗದಿಯಂತೆ ಬೆಳಗ್ಗೆ 11-30 ರಿಂದ ಚುನಾವಣಾ ಪ್ರಕ್ರಿಯೆ ಪಾಲಿಕೆ ಸಭಾಗಣದಲ್ಲಿ ಅಧಿಕೃತವಾಗಿ ಆರಂಭವಾಯಿತು. ಮೊದಲಿಗೆ ಸದಸ್ಯರ ಹಾಜರಾತಿ ಪಡೆಯಲಾಯಿತು. ನಂತರ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಮೊದಲಿಗೆ ಮೇಯರ್ ಸ್ಥಾನಕ್ಕೆ, ಬಳಿಕ ಉಪಮೇಯರ್ ಸ್ಥಾನಕ್ಕೆ ಹಾಗೂ ಆ ನಂತರ ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ 7 ಸದಸ್ಯರುಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು.

        ಮಧ್ಯಹ್ನ 12-30 ರಲ್ಲಿ ಸಭಾಂಗಣಕ್ಕೆ ಮಾಧ್ಯಮದವರನ್ನು ಆಹ್ವಾನಿಸಿದ ಚುನಾವಣಾಧಿಕಾರಿ ಶಿವಯೋಗಿ ಕಳಸದ್ ಅವರು ಫಲಿತಾಂಶವನ್ನು ಮಾಧ್ಯಮಗಳಿಗೆ ಅಧಿಕೃತವಾಗಿ ಪ್ರಕಟಿಸಿದರು. ಇದರೊಂದಿಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಯಿತು. ಪಾಲಿಕೆಯ 34 ಚುನಾಯಿತ ಸದಸ್ಯರುಗಳೊಂದಿಗೆ, ಲೋಕಸಭೆ ಸದಸ್ಯ ಎಸ್.ಪಿ. ಮುದ್ದಹನುಮೇಗೌಡ, ವಿಧಾನಪರಿಷತ್ ಸದಸ್ಯ ಕಾಂತರಾಜು, ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಭೆಯಲ್ಲಿ ಹಾಜರಿದ್ದರು.

ಸ್ಥಾಯಿ ಸಮಿತಿಗಳಿಗೆ ಆಯ್ಕೆ

       ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ:- ಸೈಯದ್ ನಯಾಜ್ (8 ನೇ ವಾರ್ಡ್, ಕಾಂಗ್ರೆಸ್), ಬಿ.ಜಿ.ಕೃಷ್ಣಪ್ಪ (32 ನೇ ವಾರ್ಡ್, ಬಿಜೆಪಿ), ನೂರುನ್ನೀಸಾ ಬಾನು (10 ನೇ ವಾರ್ಡ್, ಪಕ್ಷೇತರ), ಫರೀದಾ ಬೇಗಂ (13 ನೇ ವಾರ್ಡ್, ಕಾಂಗ್ರೆಸ್), ಮುಜೀದಾ ಖಾನಂ (18 ನೇ ವಾರ್ಡ್, ಕಾಂಗ್ರೆಸ್), ನಳಿನಾ ಇಂದ್ರಕುಮಾರ್ (1 ನೇ ವಾರ್ಡ್, ಬಿಜೆಪಿ), ಎಂ.ಪ್ರಭಾವತಿ (9 ನೇ ವಾರ್ಡ್, ಕಾಂಗ್ರೆಸ್).

       ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿಸಮಿತಿ:- ಧರಣೇಂದ್ರ ಕುಮಾರ್ (28 ನೇ ವಾರ್ಡ್, ಜೆಡಿಎಸ್), ಎ.ಶ್ರೀನಿವಾಸ್ (20 ನೇ ವಾರ್ಡ್, ಜೆಡಿಎಸ್), ವಿಷ್ಣುವರ್ಧನ (30 ನೇ ವಾರ್ಡ್, ಪಕ್ಷೇತರ), ಬಿ.ಎಸ್.ಮಂಜುನಾಥ್ (17 ನೇ ವಾರ್ಡ್, ಜೆಡಿಎಸ್), ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್, ಜೆಡಿಎಸ್), ಶಕೀಲ್ ಅಹಮದ್ ಷರೀï (12 ನೇ ವಾರ್ಡ್, ಕಾಂಗ್ರೆಸ್), ಶಿವರಾಂ (24 ನೇ ವಾರ್ಡ್, ಪಕ್ಷೇತರ).

       ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ:- ಎಂ.ಸಿ. ನವೀನಾ ಅರುಣ (34 ನೇ ವಾರ್ಡ್, ಬಿಜೆಪಿ), ಸಿ.ಎನ್.ರಮೇಶ್ (31 ನೇ ವಾರ್ಡ್, ಬಿಜೆಪಿ), ಎಚ್.ಮಲ್ಲಿಕಾರ್ಜುನಯ್ಯ (26 ನೇ ವಾರ್ಡ್, ಬಿಜೆಪಿ), ಎಚ್.ಎಂ.ದೀಪಶ್ರೀ (4 ನೇ ವಾರ್ಡ್, ಬಿಜೆಪಿ), ಮಂಜುಳ ಕೆ.ಎಸ್.ಆದರ್ಶ್ (25 ನೇ ವಾರ್ಡ್, ಬಿಜೆಪಿ), ಜೆ.ಕುಮಾರ್ (7 ನೇ ವಾರ್ಡ್, ಕಾಂಗ್ರೆಸ್), ಟಿ.ಎಂ. ಮಹೇಶ್ (5 ನೇ ವಾರ್ಡ್, ಕಾಂಗ್ರೆಸ್).

         ಲೆಕ್ಕಪತ್ರ ಸ್ಥಾಯಿ ಸಮಿತಿ:- ವಿ.ಎಸ್. ಗಿರಿಜಾ (15 ನೇ ವಾರ್ಡ್, ಬಿಜೆಪಿ), ನಾಸಿರಾ ಬಾನು (14 ನೇ ವಾರ್ಡ್, ಕಾಂಗ್ರೆಸ್), ಚಂದ್ರಕಲಾ (27 ನೇ ವಾರ್ಡ್, ಬಿಜೆಪಿ), ಬಿ.ಜಿ. ವೀಣಾ (6 ನೇ ವಾರ್ಡ್, ಬಿಜೆಪಿ), ಎಸ್.ಮಂಜುನಾಥ್ (2 ನೇ ವಾರ್ಡ್, ಬಿಜೆಪಿ), ಎಚ್.ಎಸ್.ನಿರ್ಮಲ ಶಿವಕುಮಾರ್ (35 ನೇ ವಾರ್ಡ್, ಬಿಜೆಪಿ), ಇನಾಯತ್ ಉಲ್ಲಾ ಖಾನ್ (16 ನೇ ವಾರ್ಡ್, ಕಾಂಗ್ರೆಸ್).
ಒಗ್ಗಟ್ಟಾಗಿ ಶ್ರಮಿಸುತ್ತೇವೆ

         ಇದಾದ ಬಳಿಕ ನೂತನ ಮೇಯರ್ ಲಲಿತಾ ರವೀಶ್ ಸಭಾಂಗಣದಲ್ಲೇ ಮಾಧ್ಯಮದೊಂದಿಗೆ ಮಾತನಾಡುತ್ತ, ಎರಡನೇ ಬಾರಿ ತಮಗೆ ಮೇಯರ್ ಸ್ಥಾನ ದೊರೆತುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದರಲ್ಲದೆ, ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. “ಮಹಾನಗರ ಪಾಲಿಕೆಯ ಎಲ್ಲ 35 ಸದಸ್ಯರುಗಳೂ ಒಟ್ಟಾಗಿದ್ದೇವೆ. ನಗರದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗೂಡಿ ಶ್ರಮಿಸುತ್ತೇವೆ” ಎಂದು ಅವರು ಖುಷಿಯಿಂದ ಹೇಳಿದರು.

ಮೈತ್ರಿ ಸರ್ಕಾರಕ್ಕೆ ಪೂರಕ

        ಇದಕ್ಕೂ ಮೊದಲು ಮೇಯರ್ ಮತ್ತು ಉಪಮೇಯರ್ ಆಯ್ಕೆ ಆದ ತಕ್ಷಣವೇ ಅಂದರೆ ಅಪರಾಹ್ನ 12 ಗಂಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಕಾಂತರಾಜು (ಜೆಡಿಎಸ್) ಅವರೊಂದಿಗೆ ಸಭೆಯಿಂದ ನಿರ್ಗಮಿಸಿದ ತುಮಕೂರು ಲೋಕಸಭೆ ಸದಸ್ಯ ಎಸ್.ಪಿ. ಮುದ್ದಹನುಮೇಗೌಡ (ಕಾಂಗ್ರೆಸ್) ಅವರು ಪಾಲಿಕೆ ಕಚೇರಿ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ, “ರಾಜ್ಯದಲ್ಲಿ ಜನರ ಆಶಯದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಚಾಲ್ತಿಯಲ್ಲಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಪೂರಕವಾಗಿ ತುಮಕೂರು ಮಹಾನಗರ ಪಾಲಿಕೆಯಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತ ಬಂದಿದೆ” ಎನ್ನುತ್ತ, ಜೆಡಿಎಸ್‍ನ ಲಲಿತಾ ರವೀಶ್ ಮೇಯರ್ ಆಗಿ ಮತ್ತು ಕಾಂಗ್ರೆಸ್‍ನ ರೂಪಶ್ರೀ ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಪತ್ರಕರ್ತರಿಗೆ ನಿರ್ಬಂಧ

       ಇಡೀ ಚುನಾವಣಾ ಪ್ರಕ್ರಿಯೆಯಿಂದ ಈ ಬಾರಿ ಪತ್ರಕರ್ತರನ್ನು ಚುನಾವಣಾಧಿಕಾರಿಗಳು ಹೊರಗಿಟ್ಟರು. ಪಾಲಿಕೆ ಕಚೇರಿಯೊಳಕ್ಕೇ ಮಾಧ್ಯಮದವರನ್ನು ಬಿಟ್ಟುಕೊಳ್ಳಲಿಲ್ಲ. ಕಚೇರಿಯ ಹೊರ ಭಾಗದಲ್ಲೇ ಪೊಲೀಸರು ಪತ್ರಕರ್ತರನ್ನು ತಡೆದರು. “ಕಳೆದ ಬಾರಿ ಇದ್ದ ಅವಕಾಶ ಈ ಬಾರಿ ಏಕಿಲ್ಲ?” ಎಂದು ಪತ್ರಕರ್ತರು ಆಕ್ಷೇಪಿಸಿದಾಗ, ಪೊಲೀಸರು “ಚುನಾವಣಾಧಿಕಾರಿಗಳ ಆದೇಶ” ಎಂದು ಕೈಚೆಲ್ಲಿದರು. ಪತ್ರಕರ್ತರ ಆಕ್ಷೇಪದ ಬಗ್ಗೆ ಪೊಲೀಸ್ ಸಿಬ್ಬಂದಿ ಒಳಕ್ಕೆ ತೆರಳಿ ಚುನಾವಣಾಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನ ಆಗಲಿಲ್ಲ. ವಾರ್ತಾ ಇಲಾಖೆಯ ಅಧಿಕಾರಿಗಳು ಸಹ ಒಳಗೆ ತೆರಳಲು ಕಷ್ಟ ಪಡಬೇಕಾಯಿತು. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿ ಚುನಾವಣಾ ಪ್ರಕ್ರಿಯೆಯನ್ನು ಪ್ರತ್ಯಕ್ಷವಾಗಿ ದಾಖಲಿಸಲು ಮಾಧ್ಯಮದವರಿಗೆ ಅವಕಾಶ ಸಿಗಲಿಲ್ಲ. ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಚುನಾವಣಾಧಿಕಾರಿಗಳು ಮಾಧ್ಯಮದವರನ್ನು ಸಭಾಂಗಣಕ್ಕೆ ಆಹ್ವಾನಿಸಿ, ಪ್ರಕ್ರಿಯೆಯ ಸಂಕ್ಷಿಪ್ತ ವಿವರ ನೀಡಿದರು.

ಬಿಗಿ ಪೊಲೀಸ್ ಬಂದೋಬಸ್ತ್

       ಚುನಾವಣೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕಚೇರಿ ಒಳಗೆ ಮತ್ತು ಹೊರಗೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಾಲಿಕೆ ಕಚೇರಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಎಲ್ಲ ಪ್ರವೇಶದ್ವಾರಗಳಲ್ಲೂ ಪೊಲೀಸರು ಇದ್ದರು. ಪಾಲಿಕೆ ಕಚೇರಿಯ ಮೊದಲ ಮಹಡಿಯ ಸಭಾಂಗಣದ ಹೊರಗೂ ಬಿಗಿ ಪೊಲೀಸ್ ಬಂದೋಬಸ್ತ್ ಇತ್ತು. ಟೌನ್‍ಹಾಲ್ ವೃತ್ತದಿಂದ ಪಾಲಿಕೆ ಕಚೇರಿ ಕಡೆಗೆ ಬರುವ ವಾಹನಗಳ ಸಂಚಾರವನ್ನೂ ನಿರ್ಬಂಧಿಸಲಾಗಿತ್ತು.
ತುಮಕೂರು ನಗರದ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಿಜೆಪಿಯ ಎಲ್ಲ 12 ಸದಸ್ಯರುಗಳು ಮತ್ತು ಪಕ್ಷೇತರ ಸದಸ್ಯ ವಿಷ್ಣುವರ್ಧನ್ ಜೊತೆ ಒಟ್ಟಾಗಿ ಸಭೆಗೆ ಆಗಮಿಸಿ, ಛಾಯಾಗ್ರಾಹಕರನ್ನು ಕರೆದು ಫೋಟೋ ತೆಗೆಸಿಕೊಂಡಿದ್ದು ವಿಶೇಷವಾಗಿತ್ತು.

ಸಂಭ್ರಮಾಚರಣೆ

        ಚುನಾವಣೆ ಪ್ರಕ್ರಿಯೆ ಮುಗಿದು ಮೇಯರ್ ಮತ್ತು ಉಪಮೇಯರ್ ಅವರುಗಳು ಪಾಲಿಕೆ ಕಚೇರಿಯ ಹೊರಕ್ಕೆ ಬಂದಾಗ ಅವರ ಅಭಿಮಾನಿಗಳು ಹಾಗೂ ಆಯಾ ಪಕ್ಷದ ಕಾರ್ಯಕರ್ತರು ಜಯಘೋಷ ಹಾಕುತ್ತ, ಪಕ್ಷದ ಬಾವುಟ ಪ್ರದರ್ಶಿಸುತ್ತ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇತ್ತ ಪಾಲಿಕೆ ಕಚೇರಿಯಲ್ಲಿ `ಪತಿರಾಯರು’ಗಳೂ ಸಂಭ್ರಮದಿಂದ ಓಡಾಡುತ್ತಿದ್ದುದು ಕಂಡುಬಂದಿತು.

        ಮಧ್ಯಾಹ್ನ 1-30 ರ ಹೊತ್ತಿಗೆ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಪಾಲಿಕೆ ಕಚೇರಿಗೆ ಆಗಮಿಸಿ, ಹೊಸ ಮೇಯರ್ ಮತ್ತು ಉಪಮೇಯರ್ ಅವರನ್ನು ಅಭಿನಂದಿಸಿದರು. ಸದಸ್ಯರುಗಳ ಸಂತೋಷದಲ್ಲಿ ಸಚಿವರೂ ಪಾಲ್ಗೊಂಡರು. “ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಎಂಬುದು ಮೊದಲೇ ನಿರ್ಧರವಾಗಿತ್ತು. ಜೆಡಿಎಸ್‍ಗೆ ಮೇಯರ್ ಸ್ಥಾನ, ಕಾಂಗ್ರೆಸ್‍ಗೆ ಉಪಮೇಯರ್ ಸ್ಥಾನ ಎಂಬುದೂ ಖಚಿತವಾಗಿತ್ತು. ಮೀಸಲಾತಿ ಪ್ರಕಾರ ಮೇಯರ್ ಸ್ಥಾನಕ್ಕೆ ಲಲಿತಾ ರವೀಶ್ ಮತ್ತು ನಾಜಿಮಾಬಿ ನಡುವೆ ಸ್ಪರ್ದೆ  ಇತ್ತಾದರೂ, ಲಲಿತಾ ರವೀಶ್ ಅವರಿಗೆ ಮೇಯರ್ ಸ್ಥಾನ ಲಭಿಸುವುದು ಖಚಿತ ಎಂಬುದು ಬಹಿರಂಗವಾಗಿತ್ತು. ಆದರೆ ಚುನಾವಣೆ ಸಮೀಪಿಸಿದಂತೆ ಈ ವಿಷಯ ತಿರುವು ಪಡೆದುಕೊಳ್ಳತೊಡಗಿತು.

          ಚುನಾವಣೆಯ ಹಿಂದಿನ ದಿನ (ಜ.29) ಮಧ್ಯ ರಾತ್ರಿ “ಕ್ಷಿಪ್ರಕ್ರಾಂತಿ” ನಡೆದು ಜೆಡಿಎಸ್‍ನ ಒಟ್ಟು 9 ಸದಸ್ಯರಲ್ಲಿ ಒಡಕು ಉಂಟಾಯಿತು. ಐವರು ಸದಸ್ಯರುಗಳು ಒಂದು ಗುಂಪಾಗಿ ಲಲಿತಾರವೀಶ್‍ರವರನ್ನು ಬೆಂಬಲಿಸಿ, ಬಿಜೆಪಿ ಬೆಂಬಲ ಪಡೆದು ಅಧಿಕಾರಕ್ಕೇರುವ ಯತ್ನ ನಡೆಯಿತು. ಇತ್ತ ಇತರ ನಾಲ್ವರು ಸದಸ್ಯರು ಮತ್ತು ಓರ್ವ ಪಕ್ಷೇತರು ಒಂದಾಗಿ ನಾಜೀಮಾಬಿ ಅವರ ಪರ ನಿಂತರು. ಈ ವಿಷಯ ತಾರಕಕ್ಕೇರುತ್ತಿದ್ದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮಧ್ಯ ಪ್ರವೇಶಿಸಿ, ಉಭಯ ಬಣಗಳನ್ನು ಸಮಾಧಾನಗೊಳಿಸಿ ಸಂಧಾನ ಮಾಡಿದ ಫಲವಾಗಿ “ಕ್ಷಿಪ್ರಕ್ರಾಂತಿ” ತಣ್ಣಗಾಗಿ ಎಲ್ಲವೂ ನಿರೀಕ್ಷಿಸಿದಂತೆಯೇ ನಡೆಯಿತು” ಎಂದು ಪಾಲಿಕೆಯ ಒಳಗೆ ಮತ್ತು ಹೊರಗೆ ದಟ್ಟ ವದಂತಿ ಹರಿದಾಡಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link