ಜಿಲ್ಲಾ ದಿನ ಪತ್ರಿಕೆ ಹಂಚಿಕೆದಾರರ ಸಂಘ ಉದ್ಘಾಟನೆ

ತುಮಕೂರು

         ಪತ್ರಿಕೆ ವಿತರಕರು ಕೀಳರಿಮೆ ಬಿಡಿ, ಎಲ್ಲಾ ವೃತ್ತಿಗಳಿಗೂ ತನ್ನದೇ ವೃತ್ತಿಗೌರವವಿದೆ, ಪತ್ರಿಕೆ ಹಂಚುವ ಕೆಲಸಮಾಡುತಿದ್ದ ಹಲವರು ಇಂದು ಉತ್ತಮ ಸ್ಥಾನದಲ್ಲಿದ್ದಾರೆ. ಬಾಲ್ಯದಲ್ಲಿ ಪತ್ರಿಕೆ ವಿತರಿಸುತ್ತಿದ್ದ ಖ್ಯಾತ ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಮ್ ರಾಷ್ಟ್ರಪತಿಯಾದರು, ಪತ್ರಿಕೆ ಹಂಚಿಕೆದಾರರಿಗೆ ಡಾ. ಕಲಾಂ ಪ್ರೇರಣೆಯಾಗಲಿ ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯಸ್ವಾಮೀಜಿ ಹೇಳಿದರು.

          ನಗರದಲ್ಲಿ ಜಿಲ್ಲಾ ದಿನ ಪತ್ರಿಕೆ ಹಂಚಿಕೆದಾರರ ಸಂಘ ಉದ್ಘಾಟಿಸಿದ ಶ್ರೀಗಳು, ಹಂಚಿಕೆದಾರರು ತಮ್ಮ ವೃತ್ತಿ ಕಡೆಗಣಿಸಬೇಡಿ, ಈ ಸ್ಪಧಾತ್ಮಕ ಕಾಲದಲ್ಲಿ ಮಾಡುವ ವೃತ್ತಿಯಲ್ಲಿ ಕ್ರಿಯಾಶೀಲತೆ ರೂಢಿಸಿಕೊಂಡಾಗ ಮಾತ್ರ ಯಶಸ್ಸುಪಡೆಯಲು ಸಾಧ್ಯ ಎಂದರು.

         ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಪತ್ರಿಕೆ ಅಕ್ಷರಸ್ಥರ ಹತ್ತಿರದ ಸಂಬಂಧಿಯಂತೆ. ಪತ್ರಿಕೆ ಓದುವವರು ಬುದ್ಧಿವಂತರಾದರೆ, ಟಿವಿ ನೋಡುವವರು ಕೇವಲ ವೀಕ್ಷಕರಾಗುತ್ತಾರೆ, ದಿನಾ ನಸುಕಿನಲ್ಲೇ ಏಳುವ ಪತ್ರಿಕೆ ವಿತರಕರು ಬ್ರಹ್ಮ ವಂಶೀಯರು, ತಡವಾಗಿ ಏಳುವವರು ಸೂರ್ಯವಂಶೀಯರು ಎಂದ ಶ್ರೀಗಳು, ತ್ರಿಲೋಕಗಳಿಗೆ ಸುದ್ದಿ ತಲುಪಿಸುತ್ತಿದ್ದ ನಾರದ ಮಹರ್ಷಿಯ ಹಾಗೆ ಸುದ್ದಿ ಪತ್ರಿಕೆ ಹಂಚುವ ವಿತರಕರು ಎಂದು ಹೇಳಿದರು.

          ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರಿಯಾಶಿಲರಾಗಿ ಇದ್ದರೆ ಮಾತ್ರ ಮನುಷ್ಯ ಚಲಾವಣೆಯಲ್ಲಿರುತ್ತಾನೆ. ಕ್ರಿಯಾಶೀಲತೆಗೆ ಸಿದ್ಧಗಂಗಾಮಠದ ಡಾ. ಶಿವಕುಮಾರಸ್ವಮೀಜಿಗಳು ನಮಗೆಲ್ಲಾ ಸ್ಫೂತಿಯಾಗಬೇಕು. ನಿಯಮ, ಸಂಯಮ, ಸಮಯ ಪ್ರಜ್ಞೆ ಹೊಂದಿದ್ದ ಸ್ವಾಮೀಜಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅವರ ಪಾದಸ್ಪರ್ಶ ಮಾಡಿ, ನಮಸ್ಕಾರ ಮಾಡಲು ಸಿಗುತ್ತಿದ್ದರು ಎಂದ ಶ್ರೀಗಳು, ಯಾವ ವೃತ್ತಿಯೂ ಅಗೌರವ ತರುವಂತಾದ್ದಾಲ್ಲ, ಕ್ರಿಯಾಶೀಲತೆ ಬೆಳೆಸಿಕೊಳ್ಳಿರಿ, ತಮ್ಮ ಕಾಯಕ ಪಾವಿತ್ರತೆ ಹಾಳಾಗದಂತೆ ಕಾಳಜಿ ವಹಿಸಿ ಎಂದು ಸ್ವಾಮೀಜಿ ಹೇಳಿದರು.

           ಶಾಸಕ ಜಿ ಬಿ ಜ್ಯೋತಿಗಣೇಶ್ ಮಾತನಾಡಿ, ಟಿವಿ, ಸಾಮಾಜಿಕ ಜಾಲಗಳ ಪೈಪೋಟಿಯಲ್ಲಿ ಪತ್ರಿಕೆಗಳು ಅಸ್ತಿತ್ವ ಕಾಪಾಡಿಕೊಳ್ಳುವುದು ಸವಾಲಾಗಿದೆ. ಆದರೂ, ಮುದ್ರಣ ಮಾಧ್ಯಮದ ವಿಶಿಷ್ಟತೆ, ಅಗತ್ಯತೆಯಿಂದಾಗಿ ಅದರ ಭವಿಷ್ಯಕ್ಕೆ ಧಕ್ಕೆಯಾಗುವುದಿಲ್ಲ. ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ವಿತರಕರ ಕಾರ್ಯ ಮಹತ್ವವಾದದ್ದು ಎಂದರು.

          ಆನರೊಂದಿಗೆ ನೇರ ಸಂಪರ್ಕ ಹೊಂದಿರುವ ವಿತರಕರು, ಜನರಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು, ಆ ಮೂಲಕ ಪತ್ರಿಕೆಗಳ ಬೆಳವಣಿಗೆಗೂ ಸಹಕರಿಸಬೇಕು. ದೇಶದಲ್ಲಿರುವ ಶೇಕಡ 70ರಷ್ಟು ಯುವ ಜನರಲ್ಲಿ ನಿತ್ಯ ಪತ್ರಿಕೆ ಓದುವ ಹವ್ಯಾಸ ಇರುವವರು ತೀರಾ ಕಡಿಮೆ ಎಂಬುದು ವಿಷಾದದ ಸಂಗತಿ ಎಂದು ಹೇಳಿದರು.

         ‘ಪ್ರಜಾಪ್ರಗತಿ’ ಸಂಪಾದಕರಾದ ಎಸ್ ನಾಗಣ್ಣನವರು ಮಾತನಾಡಿ, ಈ ಪ್ರಪಂಚದಲ್ಲಿ ಉತ್ಪಾದನಾ ವೆಚ್ಚಕ್ಕಿಂತಾ ಕಡಿಮೆ ಬೆಲೆಗೆ ಜನರ ಮನೆ ಬಾಗಿಲಿಗೆ ತಲುಪಿಸುವ ಏಕೈಕ ಪದಾರ್ಥವೆಂದರೆ ಅದು ಪತ್ರಿಕೆ ಮಾತ್ರ. ಆದರೆ ಇವತ್ತಿ ಸ್ಪರ್ಧೆಯಲ್ಲಿ ಪತ್ರಿಕೆ ಸಿದ್ದಪಡಿಸಿ ಓದುಗರಿಗೆ ತಲುಪಿಸುವ ಹಂತದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ದರ ಸಮರ ನಡುವೆ ಪತ್ರಿಕೆ ಗುಣಮಟ್ಟ ಕಾಪಾಡಿಕೊಂಡು ಓದುಗರನ್ನು ಹಿಡಿದಿಟ್ಟುಕೊಳ್ಳುವುದು ಸವಾಲಿನ ಕೆಲಸ ಎಂದರು.

          ಸುಮಾರು 2ಸಾವಿರ ಇಸವಿಯಿಂದೀಚೆಗೆ ಪತ್ರಿಕೋದ್ಯಮ ಕವಲು ಒಡೆಯುವಂತಾಗಿದೆ. ದೃಶ್ಯ ಮಾಧ್ಯಮ, ಶ್ರವಣ ಮಾಧ್ಯಮಗಳು ಶುರುವಾಗಿ ಮುದ್ರಣ ಮಾಧ್ಯಮಕ್ಕೆ ತಾತ್ಸಾರ ಬಂದೊದಗಿ, ಸಂಕಟ ಎದುರಿಸುವಂತಾಗಿದೆ. ದೃಶ್ಯ ಹಾಗೂ ಶ್ರವಣ ಮಾಧ್ಯಮಗಳು ಜಂಕ್ ಫುಡ್ ಇದ್ದಂತೆ, ಅದರ ಅಭಿರುಚಿಯೇ ಬೇರೆ, ಈಗಿನ ಹೆಚ್ಚಿನ ಯುವಜನ ಪತ್ರಿಕೆ ಓದುವ ಹವ್ಯಾಸವಿಲ್ಲ, ಮೊಬೈಲ್‍ಗಳಲ್ಲೆ ತಮಗೆ ಬೇಕಾದ್ದುನ್ನ ನೋಡಿ ತಿಳಿಯುತ್ತಾರೆ. ದೇಶದಲ್ಲಿ ಶೇಕಡ 90ರಷ್ಟು ಜನ ಸ್ಮಾರ್ಟ್ ಫೋನ್ ಹೊಂದಿ ಸಾಮಾಜಿಕ ಜಾಲತಾಣ ಅಂಟಿಕೊಂಡಿದ್ದಾರೆ, ಆದರೆ, ಟಿವಿ, ಇತರೆ ಮಾಧ್ಯಮಗಳ ಸುದ್ದಿಗಳ ನಿರ್ದಿಷ್ಟತೆ ಪರಿಶೀಲಿಸಿಯೇ ಪತ್ರಿಕೆಗಳು ನಿಖರ ಸುದ್ದಿ ಕೊಡಬೇಕಾಗುತ್ತದೆ ಎಂದು ಹೇಳಿದರು.

         ನಾನಾ ರೀತಿಯ ಸಮಸ್ಯೆಗಳು ಮುದ್ರಣ ಮಾಧ್ಯಮಕ್ಕೆ ಎದುರಾಗಿ ಮಾಧ್ಯಮ ಸಂಕಷ್ಟಕ್ಕೆ ಸಿಲುಕಿದೆ ಇಂತಹ ಸ್ಥಿತಿಯಲ್ಲಿ ವಿತರಕರು ಪತ್ರಿಕೆಗಳನ್ನು ಓದುಗರ ಮನೆಗೆ ತಲುಪಿಸಿ ಪತ್ರಿಕೆಯ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ. ಬಹಳಷ್ಟು ಪತ್ರಿಕೆ ವಿತರಕರು ಪತ್ರಿಕೆ ಹಂಚುವುದು ಗೌರವವಲ್ಲದ ಕೆಲಸ ಎಂದು ತಪ್ಪಾಗಿ ಭಾವಿಸಿದ್ದಾರೆ. ಈ ಕೀಳರಿಮೆಯಿಂದ ಪತ್ರಿಕೆ ವಿತರಿಸಲು ಹುಡುಗರು ಬರುವುದಿಲ್ಲ, ಬಂದರೂ ಜಾಸ್ತಿ ದಿನ ಈ ಕೆಲಸದಲ್ಲಿ ಮುಂದುವರೆಯುವುದಿಲ್ಲ, ವಿತರಕರು ಈ ಕೀಳರಿಮೆ ಬಿಟ್ಟು ತಮ್ಮ ವೃತಿಯಲ್ಲಿ  ಗೌರವ ಕಾಣಬೇಕು ಎಂದು ತಿಳಿಸಿದರು.
ಈ ವೇಳೆ ‘ಪ್ರಜಾಪ್ರಗತಿ’ ವಿತರಣಾ ವ್ಯವಸ್ಥಾಪಕ ಎಲ್ ಚಿಕ್ಕೀರಪ್ಪ ಅವರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

          ವಿವಿಧ ಪತ್ರಿಕೆಗಳ ವಿತರಕರಾದ ಮಂಜುನಾಥ್, ವೆಂಕಟೇಶ್, ಸಂಗಮೇಶ್, ಕೆ ಆರ್ ಶ್ರೀನಿವಾಸ್, ವಿ ವಿನಯ್, ಮಂಜುನಾಥ್ ದ್ಯಾವನಗೌಡ,ಡಿ ಶ್ರೀದರ್, ಇಂದ್ರೇಶ್,ಅವರನ್ನು ಸನ್ಮಾನಿಸಲಾಯಿತು. ವಿವಿಧ ಪತ್ರಿಕೆಗಳ ಸಂಪಾದಕರಾದ ಶ್ರೀನಿವಾಸ ರೆಡ್ಡಿ, ಸೊಗಡು ವೆಂಕಟೇಶ್, ದಿನಪತ್ರಿಕೆ ಹಂಚಿಕೆದಾರರ ಸಂಘದ ಗೌರವಾಧ್ಯಕ್ಷ ನರಸಿಂಗರಾವ್, ಅಧ್ಯಕ್ಷ ಬಿ ಆರ್ ಚಲುವರಾಜು, ಉಪಾಧ್ಯಕ್ಷ ಎನ್ ಪಿ ರಂಗಮುತ್ತಯ್ಯ, ಕಾರ್ಯದರ್ಶಿ ಎನ್ ವಾಸುದೇವ್, ಖಜಾಂಚಿ ಮಹಾದೇವಯ್ಯ ಹಾಗೂ ಪದಾಧಿಕಾರಿಗಳು, ಪತ್ರಿಕೆ ವತರಕರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap