ಚಳ್ಳಕೆರೆ
ಕಳೆದ ಹಲವಾರು ದಶಕಗಳಿಂದ ಸಮಾಜದಲ್ಲಿ ನೋವು ಕಂಡ ಕುಟುಂಬಗಳಿಗೆ ಸಾಂತ್ವನ ಹೇಳುವುದಲ್ಲದೆ ಆರ್ಥಿಕ ನೆರವನ್ನೂ ಸಹ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ನೀಡುತ್ತಾ ಬಂದಿದೆ. ಪೂಜ್ಯ ಶ್ರೀವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ನಗರದ ವೆಂಕಟೇಶ್ವರ ನಗರದಲ್ಲಿ ಜ.2ರಂದು ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 35 ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ನಮ್ಮ ಗ್ರಾಮಾಭಿವೃದ್ಧಿ ಯೋಜನೆಯಿಂದ 1.77 ಲಕ್ಷ ಹಣವನ್ನು ಮಂಜೂರಾಗಿದ್ದು, ವೈಯಕ್ತಿಕವಾಗಿ ಮಂಜೂರಾದ ಎಲ್ಲರಿಗೂ ಮಂಜೂರಾತಿ ಪತ್ರಗಳನ್ನು ನೀಡಿ ಫೆ.4ರ ಸೋಮವಾರ ಕಚೇರಿಯಲ್ಲಿ ಹಣ ಪಡೆಯುವಂತೆ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಸೀತಾರಾಮಶೆಟ್ಟಿ ತಿಳಿಸಿದರು.
ಅವರು, ಶನಿವಾರ ಬಳ್ಳಾರಿ ರಸ್ತೆಯ ಲಿಡ್ಕರ್ ಸಂಸ್ಥೆಯ ಸನ್ನಿಹದಲ್ಲಿ ತಾತ್ಕಾಲಿಕವಾಗಿ 35 ಶೆಡ್ಗಳನ್ನು ನಿರ್ಮಿಸಿದ್ದು, ಅಲ್ಲಿ ವಾಸಿಸುವ ನೊಂದ ಕುಟುಂಬದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಇಂತಹ ಘಟನೆಗಳು ಮನಸಿಗೆ ಹೆಚ್ಚು ನೋವುಂಟು ಮಾಡುತ್ತವೆ ಆದರೂ ಅನಿವಾರ್ಯವಾಗಿ ನಡೆಯುವ ಇಂತಹ ಘಟನೆಗಳ ಸಂದರ್ಭದಲ್ಲಿ ಎಲ್ಲರೂ ಧೈರ್ಯದಿಂದ ಇರಬೇಕು. ನಮ್ಮ ಸಮಾಜದಲ್ಲಿ ಮೊದಲಿಂದಲೂ ನೊಂದ ಕುಟುಂಬಗಳಿಗೆ ನೆರವಾಗುವ ಔದಾರ್ಯವನ್ನು ಸಂಸ್ಥೆ ಬೆಳೆಸಿಕೊಂಡು ಬಂದಿದೆ ಎಂದರು.
ಜಿಲ್ಲಾ ನಿರ್ದೇಶಕ ಬಿ.ಗಣೇಶ್ ಮಾತನಾಡಿ, ಘಟನೆ ನಡೆದ ದಿನವೇ ಇಲ್ಲಿನ ತಾಲ್ಲೂಕು ಯೋಜನಾಧಿಕಾರಿ ಮಾಹಿತಿ ನೀಡಿದ್ದು, ಕೂಡಲೇ ಕೇಂದ್ರ ಕಚೇರಿಗೆ ವರದಿ ನೀಡಿದ್ದು, ಪರಿಶೀಲನೆ ನಂತರ ನೊಂದ ಕುಟುಂಬಗಳಿಗೆ ಪರಿಹಾರ ಧನವನ್ನು ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ನಿಮ್ಮೆಲ್ಲರ ಕುಟುಂಬಗಳಿಗೆ ಸ್ವಲ್ಪಮಟ್ಟದಲ್ಲಿ ನೆರವನ್ನು ನೀಡಲಾಗಿದೆ. ಮುಂದಿನ ನಿಮ್ಮೆಲ್ಲರ ಜೀವನ ಸುಖಕರವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ನೇತಾಜಿ ಪ್ರಸನ್ನ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಮ್ಮೆಲ್ಲರಿಗೂ ಆತ್ಮಸ್ಥೈರ್ಯ ತುಂಬಲು ಪ್ರಾಮಾಣಿಕವಾಗಿ ಪ್ರಯತ್ನಿಸಿದೆ. ನಿಮ್ಮೆಲ್ಲರ ಸಂಕಷ್ಟಗಳ ಬಗ್ಗೆ ಸ್ವಷ್ಟ ಅರಿವಿದೆ. ಸಂಸ್ಥೆ ನೀಡುವ ಹಣವನ್ನು ಸದ್ವಿನಿಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ದುರಂತ ನಡೆದ ಕೇವಲ ಒಂದೇ ತಿಂಗಳಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಎಲ್ಲಾ 35 ಕುಟುಂಬಗಳಿಗೂ ತಾತ್ಕಾಲಿಕ ನೆಲೆಯನ್ನು ಒದಗಿಸಲಾಗಿದೆ. ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ ಮತ್ತು ಮಿತ್ರವೃಂದ ತಾಲ್ಲೂಕು ಆಡಳಿತ, ನಗರಸಭೆ ಸಹಕಾರದೊಂದಿಗೆ ನೊಂದ ಸುಮಾರು 100ಕ್ಕೂ ಹೆಚ್ಚು ಜನರಿಗೆ ಒಂದು ತಿಂಗಳಿನಿಂದ ಪ್ರತಿನಿತ್ಯ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಿದೆ.
ರೋಟರಿಕ್ಲಬ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಗೃಹಪಯೋಗಿ ವಸ್ತುಗಳನ್ನು ಕುಟುಂಬಕ್ಕೆ ನೀಡಿದ್ಧಾರೆ. ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆ ನಗದು ಹಣ ನೀಡುವುದರಿಂದ ಎಲ್ಲರೂ ಹಣವನ್ನು ಜಾಗೃತೆಯಿಂದ ಬಳಸಿಕೊಳ್ಳಬೇಕು, ಬೆಸ್ಕಾಂ ಇಲಾಖೆ ಪ್ರತಿಯೊಂದು ಕುಟುಂಬದಿಂದ ಕಡಿಮೆ ಶುಲ್ಕವನ್ನು ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ಧರಿಸಿದ್ದು, ಈ ಹಣ ಬೆಸ್ಕಾಂ ಪಾವತಿಸಿ ನೀವೆಲ್ಲರೂ ಕಷ್ಟದ ಕತ್ತಲೆಯಿಂದ ನೆಮ್ಮದಿಯ ಬದುಕಿನತ್ತ ಹೆಜ್ಜೆ ಇಡಬೇಕೆಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ, ತಾಲ್ಲೂಕು ಯೋಜನಾಧಿಕಾರಿ ಚನ್ನಪ್ಪಗೌಡ, ಒಕ್ಕೂಟದ ಅಧ್ಯಕ್ಷೆ ಹಸೀನಾಭಾನು, ಒಕ್ಕೂಟದ ಮುಖ್ಯಸ್ಥೆ ಸುಮಿತ್ರ, ಹೊನ್ನೂರುಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
