ತಿಪಟೂರು :
ಸವಿತಾ ಸಮಾಜದವರಿಗೆ ರಾಜ್ಯ ಸರ್ಕಾರ ಬಜೆಟ್ನಲ್ಲಿ ನೆರವು ಕಲ್ಪಿಸಲು ಕೋರಿ ಸವಿತಾ ಸಮಾಜದ ಮುಖಂಡರು ಗ್ರೇಡ್-2 ತಹಶೀಲ್ದಾರ್ ಸಿ.ವಿ.ರವಿಕುಮಾರ್ಗೆ ಶುಕ್ರವಾರ ಮನವಿ ಸಲ್ಲಿಸಿದರು.
ನಗರದ ತಾಲ್ಲೂಕು ಕಛೇರಿಯ ಗ್ರೇಡ್-2 ತಹಶೀಲ್ದಾರ್ಗೆ ಮನವಿ ಸಲ್ಲಿಸಿದ ಸಮಾಜದ ಮುಖಂಡ ಟಿ.ಸಿ.ಗೋವಿಂದರಾಜು ಮಾತನಾಡಿ, ನಮ್ಮ ಸಮಾಜವು ಅನಾದಿ ಕಾಲದಿಂದಲೂ ಶೋಷಣೆಗೆ ಒಳಪಟ್ಟಿದ್ದು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ನೆರೆಯ ಆಂಧ್ರ ಸರ್ಕಾರ ಸವಿತಾ ಸಮಾಜದ ಅಭಿವೃದ್ದಿಗೆ ಪ್ರತ್ಯೇಕವಾಗಿ ನಿಗಮ ಮತ್ತು ಸೆಲೂನ್ಗಳಿಗೆ 150 ಯೂನಿಟ್ ಉಚಿತ ವಿದ್ಯುತ್ ಬಳಕೆಗೆ ಅನುಕೂಲ ಕಲ್ಪಿಸಿದ್ದು ನಮ್ಮ ರಾಜ್ಯದಲ್ಲಿಯೂ ಅದೇ ರೀತಿ ಪ್ರತ್ಯೇಕ ನಿಗಮ ಮಾಡಿ ಮಂಗಳ ವಾದ್ಯ ಮತ್ತು ಕ್ಷೌರಿಕ ವೃತ್ತಿಗೆ ಪ್ರೋತ್ಸಾಹ ನೀಡಬೇಕು.
ಸರ್ಕಾರಿ ಮಳಿಗೆಗಳಲ್ಲಿ ಸೆಲೂನ್ಗಳಿಗೆ ಕಡಿಮೆ ದರದಲ್ಲಿ ಬಾಡಿಗೆ ನೀಡುವುದು, ಕ್ಷೌರಿಕ ವೃತ್ತಿ ಮಾಡುತ್ತಿರುವ ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಮತ್ತು ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಕ್ಷೇಮ ನಿಧಿ ಸ್ಥಾಪಿಸುವುದು, ಕಳೆದ ಬಜೆಟ್ನಲ್ಲಿ ಘೋಷಿಸಿದ ಕ್ಷೌರಿಕರಿಗೆ ಸ್ಮಾರ್ಟ್ಕಾರ್ಡ್ ಕೂಡಲೇ ವಿತರಣೆ ಮಾಡುವುದು, ರಾಜಕೀಯ ಅಧಿಕಾರ ನೀಡುವುದು, ದೇವರಾಜ ಅರಸು ನಿಗಮದಲ್ಲಿ ಸವಿತಾ ಸಮಾಜ ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳಿಗೆ ನೀಡಿರುವ 50ಸಾವಿರ ರೂಗಳನ್ನು ಸಾಲಮನ್ನಾ ಮಾಡಬೇಕು. ಅತಿ ಹಿಂದುಳಿದ ವರ್ಗಗಳನ್ನು ವಿಂಗಡಿಸಿ ಮೀಸಲಾತಿ ನೀಡುವುದು ಸೇರಿದಂತೆ ಎಲ್ಲಾ ರೀತಿಯ ಕ್ರಮಕೈಗೊಂಡು ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಟಿ.ಎಂ.ವರದರಾಜು, ಎಸ್.ಕುಮಾರ್, ಮೂರ್ತಿ, ಎಂ.ಆರ್.ರವಿಕುಮಾರ್ ಮತ್ತಿತರರಿದ್ದರು.