ದಾವಣಗೆರೆ:
ಹೆಚ್ಚುತ್ತಿರುವ ಜಾಗತಿಕ ತಾಪಮಾನ ಪಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.
ನಗರದ ಶಿವಯೋಗಿ ಮಂದಿರದಲ್ಲಿ ಬಸವಕೇಂದ್ರ ಮುರುಘರಾಜೇಂದ್ರ ವಿರಕ್ತ ಮಠ, ಶಿವಯೋಗಾಶ್ರಮ ಟ್ರಸ್ಟ್ ಆಶ್ರಯದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ `ಧರೆ ಹೊತ್ತಿ ಉರಿದೆಡೆ? ಜಾಗತಿಕ ತಾಪಮಾನ ಮತ್ತು ಜನಜೀವನ’ ವಿಷಯ ಕುರಿತ ವಿಚಾರಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಯುವುದು ಅತಿ ದೊಡ್ಡ ಸವಾಲಾಗಿದೆ. ಅದನ್ನು ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಕೇವಲ ಒಂದು ಡಿಗ್ರಿ ಸೆಲ್ಸಿಯಸ್ ಉಷ್ಣತೆ ಹೆಚ್ಚಾದರೂ ಅದರಿಂದ ದೊಡ್ಡ ಪ್ರಮಾಣದಲ್ಲಿ ಅನಾಹುತವಾಗಲಿದೆ. ತಾಪಮಾನ ಹೆಚ್ಚಾಗುತ್ತಾ ಹೋಗುವಂತೆ ಹಿಮ ಕರಗಿ ಸಮುದ್ರ ಮಟ್ಟ ಹೆಚ್ಚಾಗಲಿದೆ. ಇದರಿಂದ ಕಡಲ ತೀರದ ಜನವಸತಿ ಪ್ರದೇಶಗಳು ಮುಳುಗಡೆಯಾಗುವ, ಆಹಾರ ಉತ್ಪಾದನೆಯಲ್ಲಿ ಕುಸಿತ ಕಾಣುವ, ಮಳೆಯಲ್ಲಿ ಏರುಪೇರಾಗುವ ಹಾಗೂ ಜೀವ ಸಂಕುಲಗಳಿಗೆ ತೊಂದರೆಯಾಗುವ ಸಾಧ್ಯತೆಯೂ ಹೆಚ್ಚಿದೆ ಎಂದು ನುಡಿದರು.
ಜಾಗತೀಕರಣದ ಪ್ರಭಾವದಿಂದ ಹೆಚ್ಚುತ್ತಿರುವ ಆಧುನೀಕರಣ, ಯಾಂತ್ರೀಕರಣ ಹಾಗೂ ಕೈಗಾರಿಕೀಕರಣದ ನೀತಿಗಳು ಜಾತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿವೆ. ಅಲ್ಲದೆ, ಅರಣ್ಯ ನಾಶ ಹಾಗೂ ಜನಸಂಖ್ಯಾ ಸ್ಫೋಟವೂ ತಾಪಮಾನ ಏರಿಕೆಗೆ ಕಾರಣವಾಗಿದೆ ಎಂದು ಶ್ರೀಗಳು, ತಾಪಮಾನ ನಿಯಂತ್ರಣಕ್ಕೆ ಇಂಗಾಲ ಹೊರಸೂಸುವಿಕೆ ಮೇಲೆ ಕಡಿವಾಣ ಹಾಕಬೇಕು. ವಾತಾವರಣದ ಶಾಖ ಹೆಚ್ಚಿಸುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳನ್ನು ಕಡಿಮೆ ಮಾಡಿ, ಜಲ, ಸೌರ ಹಾಗೂ ಪವನ ವಿದ್ಯುತ್ ಘಟಕಗಳಿಗೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ವಿಶ್ವವಿದ್ಯಾಲಯದ ಮತ್ತು ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ. ಸಿ.ಎಚ್. ಮುರಗೇಂದ್ರಪ್ಪ, ಮಹಾಲಿಂಗಪ್ಪ ಮಾಸ್ತರ್ ಉಪಸ್ಥಿತರಿದ್ದರು. ಗಿರೀಶ್ ದೇವರಮನಿ ಸ್ವಾಗತಿಸಿದರು.