ದಾವಣಗೆರೆ:
ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸಬೇಕೆಂಬ ಮನವಿಯನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ಪುರಸ್ಕರಿಸದೇ, ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಸಿಕೊಡಬೇಕೆಂದು ಜಗಳೂರು ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಎಲ್.ಬಿ.ಭೈರೇಶ್ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ರಾಜಕೀಯ ಲಾಭ ಪಡೆಯಲು ಹಾಗೂ ಸ್ವಾರ್ಥಕ್ಕಾಗಿ ಜಗಳೂರು ತಾಲೂಕನ್ನು ಮರಳಿ ಚಿತ್ರದುರ್ಗ ಜಿಲ್ಲೆಗೆ ಸೇರಿಸಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಯಾರ ಒತ್ತಡಕ್ಕೂ ಮಣಿಯದೇ, ಅಭಿವೃದ್ಧಿಯ ದೃಷ್ಟಿಯಿಂದ ಜಗಳೂರನ್ನು ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಸಬೇಕೆಂದು ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆಗೆ ಮರಳಿ ಜಗಳೂರು ತಾಲೂಕು ಮರಳಿ ಸೇರ್ಪಡೆಯಾದರೆ, ಭದ್ರಾ ಮೇಲ್ದಂಡೆ ಯೋಜನೆಯ ಅನುಕೂಲ ಜಗಳೂರು ತಾಲೂಕಿನ ಜನರಿಗೆ ಆಗಲಿದೆ ಎಂಬ ಆಸೆಯನ್ನು ಸಾರ್ವಜನಿಕರಲ್ಲಿ ಬಿತ್ತುವ ಮೂಲಕ ಜನರ ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ. ಭದ್ರಾ ಮೇಲ್ದಂಡೆಯಿಂದ ಕಸಬಾ ಹೋಬಳಿಯ ಕೆಲವೇ ಕೆಲವು ಹಳ್ಳಿಗಳಿಗೆ ಅನುಕೂಲ ಆಗಬಹುದೇ ಹೊರತು, ಇಡೀ ತಾಲೂಕಿನ ವ್ಯಾಪ್ತಿಯ ಗ್ರಾಮಗಳಿಗೆ ಅನುಕೂಲ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಅವರು ಅವಿಭಜಿತ ಚಿತ್ರದುರ್ಗ ಜಿಲ್ಲೆಯನ್ನು ವಿಂಗಡಿಸಿ, ಅಲ್ಲಿಂದ ಜಗಳೂರು ತಾಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಿದ್ದರು. ಅಂದಿನಿಂದ ಇಂದಿನ ವರೆಗೂ ಜಗಳೂರು ತಾಲೂಕು ಶೈಕ್ಷಣಿಕವಾಗಿ ಸೇರಿದಂತೆ ಎಲ್ಲಾ ಕ್ಷೆತ್ರಗಳ ಅಭಿವೃದ್ಧಿಯಲ್ಲೂ ದಾಪುಗಾಲು ಹಾಕುತ್ತಿದೆ ಎಂದರು.
ಕೆಲವರ ಮನವಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಜಗಳೂರು ತಾಲೂಕನ್ನು ಹಿಂದುಳಿದ ಜಿಲ್ಲೆಯಾಗಿರು ಚಿತ್ರದುರ್ಗಕ್ಕೆ ಸೇರಿಸಿದರೆ, ಯಾವುದೇ ಹೆಚ್ಚುವರಿ ಅನುದಾನ ಸಿಗದೇ ಚಿತ್ರದುರ್ಗದಂತೆಯೇ ಅಭಿವೃದ್ಧಿಯಲ್ಲಿ ಹಿನ್ನೆಡೆ ಸಾಧಿಸುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆದರೆ, ಮುಂದುವರೆದ ಜಿಲ್ಲೆಯಾಗಿರುವ ದಾವಣಗೆರೆ ಜಿಲ್ಲೆಯಲ್ಲಿಯೇ ಜಗಳೂರು ಮುಂದುವರೆದರೆ, ಬರದನಾಡೆಂಬ ಶಾಶ್ವತ ಹಣೆಪಟ್ಟಿ ಹೊತ್ತಿರುವ ಜಗಳೂರಿಗೆ ಸರ್ಕಾರದಿಂದ ವಿಶೇಷ ಅನುದಾನ ಹರಿದು ಬರುವುದರ ಜತೆಗೆ ತಾಲೂಕಿನ ಅಭಿವೃದ್ಧಿ ಸಾಧ್ಯವಾಗಲಿದೆ. ಅಲ್ಲದೆ, ಕಳೆದ 20 ವರ್ಷಗಳಿಂದ ಜಗಳೂರು ತಾಲೂಕಿನ ಜನರು ದಾವಣಗೆರೆ ಜಿಲ್ಲೆಯ ಜನರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಲ್ಲದೇ, ಸಾರ್ವಜನಿಕರ ಕಚೇರಿ ಕೆಲಸ, ಮಾರುಕಟ್ಟೆ, ರೈತರ ವ್ಯಾಪಾರ ಸೇರದಂತೆ ಹಲವು ಕಾರಣಗಳಿಂದ ಅನುಕೂಲಕರವಾಗಿರಲಿದೆ ಎಂದು ಹೇಳಿದರು.
ಈ ಎಲ್ಲಾ ಕಾರಣಗಳಿಂದ ಜಗಳೂರು ತಾಲೂಕನ್ನು ಯಾವುದೇ ಕಾರಣಕ್ಕೂ ಚಿತ್ರದುರ್ಗ ಜಿಲ್ಲೆಗೆ ಸೇರಿಸದೇ, ದಾವಣಗೆರೆ ಜಿಲ್ಲೆಯಲ್ಲೇ ಉಳಿಸಬೇಕು. ಅಕಸ್ಮಾತ್ ಮುಖ್ಯಮಂತ್ರಿಗಳು ಯಾರ ಒತ್ತಡಕ್ಕಾದರೂ ಮಣಿದು ಜಗಳೂರನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ, ತಾಲೂಕಿನ ಜನತೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ಸುಭಾಷ್ ಚಂದ್ರಬೋಸ್, ವೈ.ಎನ್.ಮಂಜುನಾಥ್, ಅಣಬೂರು ಮಠದ ಕೊಟ್ರೇಶ, ಎನ್.ಉಮೇಶ, ಟಿ.ಜಿ.ಅರವಿಂದ ಮತ್ತಿತರರು ಹಾಜರಿದ್ದರು.