2017ರ ವಿವಿ ತಿದ್ದುಪಡಿ ಮಸೂದೆ ರದ್ದತಿಗೆ ಆಗ್ರಹ

ದಾವಣಗೆರೆ:

       ತರಾತುರಿಯಲ್ಲಿ ಮಂಡಿಸಿರುವ 2017ರ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆಯನ್ನು ರದ್ದು ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

       ನಗರದ ಎಸಿ ಕಚೇರಿ ಎದುರು ಎಬಿವಿಪಿ ಮುಖಂಡರ ನೇತೃತ್ವದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಉಪ ವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡರು, ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆನ್ನುವುದು ಸಂವಿಧಾನದ ಆಶಯವಾಗಿದೆ .

       ಆದರೆ, ಸರ್ಕಾರಗಳ ವಿದ್ಯಾರ್ಥಿ ವಿರೋಧಿ ನೀತಿಗಳಿಂದಾಗಿ ಪ್ರಸ್ತುತ ಶಿಕ್ಷಣವು ಮಾರಾಟದ ಸರಕಾಗಿ ಮಾರ್ಪಟ್ಟಿದೆ. ಹೀಗಾಗಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಗಗನಕುಸುಮವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಶಿಕ್ಷಣ ಸಚಿವರು ಯಾವುದೇ ತಯಾರಿ ಇಲ್ಲದೇ, ತರಾತುರಿಯಲ್ಲಿ ಸಾಕಷ್ಟು ಗೊಂದಲಗಳಿಂದ ಕೂಡಿದ ಮಸೂದೆಯನ್ನು ಮಂಡಿಸಿ ಅಂಗೀಕಾರಗೊಳಿಸಿರುವುದರಿಂದ ಉನ್ನತ ಶಿಕ್ಷಣದ ಅಧಃಪತನವಾಗುವ ಅಪಾಯವಿದೆ. ವಿಶ್ವ ವಿದ್ಯಾನಿಲಯದ ತಿದ್ದುಪಡಿ ಮಸೂದೆಯನ್ನು 2017ಯನ್ನು ತರಾತುರಿಯಲ್ಲಿ ಮಂಡಿಸಿರುವುದು ವಿಶ್ವವಿದ್ಯಾಲಯಗಳ ಸ್ಥಾಪನೆಯ ಉದ್ದೇಶ ಹಾಗೂ ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದೆ. ರಾಜಕೀಯ ಹಿಡಿತ ಹೊಂದುವ ಉದ್ದೇಶದಿಂದ ಈ ಮಸೂದೆ ಜಾರಿಯಾಗಿದೆ ಎಂದು ಆರೋಪಿಸಿದರು.

       ಶಿಕ್ಷಣ ಕ್ಷೇತ್ರಕ್ಕೆ ಮಾರಕವಾಗಲಿರುವ ವಿಶ್ವ ವಿದ್ಯಾನಿಲಯದ ತಿದ್ದುಪಡಿ ಮಸೂದೆಯನ್ನು 2017ಯನ್ನು ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಹಾಗೂ ರಾಜ್ಯಪಾಲರು ಈ ಕಾಯ್ದೆಯನ್ನು ಒಪ್ಪದೆ ತಿರಸ್ಕರಿಸಬೇಕೆಂದು ಆಗ್ರಹಿಸಿದರು.ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆ ನೀಡದೆ, ರಾಜ್ಯಕ್ಕೆ ಸಮಗ್ರ ಶಿಕ್ಷಣ ನೀತಿಯನ್ನು ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ಹಾಗೂ ಉನ್ನತ ಶಿಕ್ಷಣಕ್ಕಾಗಿ ಸಾಮಾಜಿಕ ಅಭಿಪ್ರಾಯವನ್ನು ರೂಪಿಸಬೇಕು. ರಾಜ್ಯ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಮಹಾವಿದ್ಯಾಲಯಗಳಲ್ಲಿ ಶೇ.50ರಷ್ಟು ಖಾಲಿ ಇರುವ ಅಧ್ಯಾಪಕ ಹಾಗೂ ಸಿಬ್ಬಂದಿಯನ್ನು ತಕ್ಷಣವೇ ಭರ್ತಿ ಮಾಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಎಬಿವಿಪಿ ಕಾರ್ಯದರ್ಶಿ ರಾಕೇಶ್, ಪ್ರದೀಪ್, ಯೋಗಾನಂದ್, ಗಗನ್, ಕಿರಣ್ ಕುಮಾರ್, ಭಾರತಿ, ಚೈತ್ರ, ಕಿರಣ್ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link