ಜಾತಿ ಪ್ರಮಾಣಪತ್ರ ನೀಡಲು ಒತ್ತಾಯ

ದಾವಣಗೆರೆ:

       ಜೀವಿತಾವಧಿ ಜಾತಿ ಪ್ರಮಾಣಪತ್ರವಿದ್ದರೂ ಶಾಲಾ-ಕಾಲೇಜುಗಳಲ್ಲಿ ಹೊಸ ಜಾತಿ ಪ್ರಮಾಣಪತ್ರ ನೀಡಬೇಕೆಂದು ಕೇಳುತ್ತಿರುವ ಹಿನ್ನೆಲೆಯಲ್ಲಿ ಭೋವಿ ವಿದ್ಯಾರ್ಥಿಗಳಿಗೆ ತಕ್ಷಣವೇ ಜಾತಿ ಪ್ರಮಾಣಪತ್ರ ನೀಡಬೇಕೆಂದು ಆಗ್ರಹಿಸಿ, ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ಚಟೋಬನಳ್ಳಿ ಗ್ರಾಮದ ಭೋವಿ ಸಮುದಾಯದವರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

       ಇಲ್ಲಿನ ಅಶೋಕ ರಸ್ತೆಯಲ್ಲಿರುವ ಕಾಮ್ರೇಡ್ ಪಂಪಾಪತಿ ಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ತಾಲ್ಲೂಕಿನ ಚಟ್ಟೋಬನಹಳ್ಳಿ ಗ್ರಾಮದ ಕೆಲ ವಿದ್ಯಾರ್ಥಿಗಳು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ್ದಾರೆ. ಅವರಿಗೆ ಸರ್ಕಾರದ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಪ.ಜಾತಿ ಪ್ರಮಾಣ ಪತ್ರ ಸಲ್ಲಿಸುವ ಅವಶ್ಯಕತೆ ಇದೆ. ಈ ವಿದ್ಯಾರ್ಥಿಗಳಿಗೆ ಈಗಾಗಲೇ ಸರ್ಕಾರದಿಂದ ಜೀವಿತಾವಧಿ ಪ್ರಮಾಣ ಪತ್ರ ನೀಡಲಾಗಿದೆ. 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೆಲವು ಶಾಲಾ ಕಾಲೇಜುಗಳಲ್ಲಿ ಜನಾಂಗದ ವಿದ್ಯಾರ್ಥಿಗಳಿಗೆ ಹೊಸದಾಗಿ ಪಡೆದ ಪಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಲು ಸೂಚಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕುತ್ತು ಬಂದಿದೆ ಎಂದು ಆರೋಪಿಸಿದರು.

       ಕಳೆದ ಎರಡು ವರ್ಷಗಳಿಂದ ಪಜಾತಿ ಜನಾಂಗದ ಪ್ರಮಾಣ ಪತ್ರ ನೀಡುವಂತೆ ದಾವಣಗೆರೆ ತಹಶೀಲ್ದಾರ್ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಪ್ರಮಾಣ ಪತ್ರ ಕೊಡಲು ನಿರಾಕರಿಸಲಾಗುತ್ತಿದೆ. ಆದ್ದರಿಂದ ಪ.ಜಾತಿ (ಭೋವಿ) ಪ್ರಮಾಣಪತ್ರವನ್ನು ಪರಿಶೀಲಿಸಿ, ಕೂಡಲೇ ಜೀವಿತಾವಧಿ ಪ್ರಮಾಣ ಪತ್ರ ನೀಡಬೇಕೆಂದು ಮನವಿ ಮಾಡಿದರು.

       ಪ್ರತಿಭಟನೆಯಲ್ಲಿ ಮುಖಂಡರಾದ ಹೆಚ್.ಕೆ.ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷ ಆವರಗೆರೆ ವಾಸು, ಆವರಗೆರೆ ಚಂದ್ರು, ಐರಣಿ ಚಂದ್ರು, ಪದ್ಮ, ನೀಲಮ್ಮ, ಈಶ್ವರಿ, ರೇಖಾ, ಪ್ರೇಮಾ, ಉಮಾ, ತಂಗವೇಲು, ಶಿವಣ್ಣ, ಉಷಾ, ಮಾಲತಿ, ರಾಧಿಕ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link