ಹರಪನಹಳ್ಳಿ:
ಕಳೆದ 10 ವರ್ಷಗಳಿಂದ ಆಮೆಗತಿಯಲ್ಲಿ ಸಾಗಿರುವ ಪಟ್ಟಣದ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬುಧವಾರ ನಡೆದ ಇಲ್ಲಿಯ ಪುರಸಭಾ ಸಾಮಾನ್ಯ ಸಭೆಯಲ್ಲಿ ಪಕ್ಷ ಬೇಧ ಮರೆತು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಾಜಿ ಅಧ್ಯಕ್ಷ ಮೆಹಬೂಬ್ ಸಾಹೇಬ್ `ಒಳಚರಂಡಿ ಕಾಮಗಾರಿಗೆ ಕ್ರಿಯಾ ಯೋಜನೆಗಿಂತ 64 ಲಕ್ಷ ಹೆಚ್ಚು ಖರ್ಚು ಮಾಡಿದ್ದೀರಿ, ಕೆಲವು ಕಡೆ ಕಾಮಗಾರಿ ಆಗದೆ ಹಣ ಪಾವತಿ ಮಾಡಲಾಗಿದೆ. ಕೆಲವು ಕಡೆ ಕಳಪೆ ಕಾಮಗಾರಿ ಆಗಿದೆ’ ಎಂದು ಸಂಬಂಧಪಟ್ಟ ಇಂಜಿನಿಯರ್ ಗೆ ತರಾಟೆಗೆ ತೆಗೆದುಕೊಂಡರು.
`ಹಿಂದಿನ ಸಭೆಯಲ್ಲಿ ಒಳಚರಂಡಿ ಕಾಮಗಾರಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಒತ್ತಾಯಿಸಲಾಗಿತ್ತು. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪುರಸಭಾ ಅಧಿಕಾರಿಗಳನ್ನು ಪ್ರಶ್ನಿಸಿದರು. ಇವರ ಮಾತಿಗೆ ಕವಿತಾ ವಾಗೀಶ, ಬೂದಿ ನವೀನ, ಡಂಕಿ ಇರ್ಮಾನ್ , ಕೃಷ್ಣ, ವಿಜಯಲಕ್ಷ್ಮಿ , ವೆಂಕಟೇಶ ಮತ್ತಿತರರು ದನಿಗೂಡಿಸಿದರು. ನಜೀರ ಅಹ್ಮದ್ `ಉದ್ದೇಶ ಪೂರ್ವಕವಾಗಿ ಕ್ರಿಯಾಯೋಜನೆ ಹೆಚ್ಚಿಸಿಕೊಂಡು ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ’ ಎಂದು ದೂರಿದರು.
ಆಗ ಅಧ್ಯಕ್ಷ ಎಚ್.ಕೆ. ಹಾಲೇಶ್ ಮಾತನಾಡಿ, `ಯುಜಿಡಿ ಕಾಮಗಾರಿ ಕುರಿತು ಸಂಬಂಧಪಟ್ಟ ಮುಖ್ಯ ಇಂಜಿನಿಯರ್ ಗೆ ಪತ್ರ ಬರೆದಿದ್ದೇವೆ. ಈಗ ಇನ್ನೊಂದು ಪತ್ರ ಬರೆಯುತ್ತೇವೆ. ಅವರಿಂದ ಉತ್ತರ ಬಂದ ನಂತರ ಈ ಕಾಮಗಾರಿಯ ಹೆಚ್ಚುವರಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಕುರಿತು ಚರ್ಚಿಸೋಣ’ ಎಂದರು.
ಗದ್ದಲ-ವಾಗ್ವಾದ:
`ಈ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಪಟ್ಟಣದ ವಿವಿಧ ವೃತ್ತಗಳಿಗೆ ಮಹನೀಯರ ಹೆಸರುಗಳನ್ನು ನಾಮಕರಣ ಮಾಡುವ ಕುರಿತು ಸಾರ್ವಜನಿಕರ ಆಕ್ಷೇಪಣೆ ಕೇಳಲಾಗಿ, ಪ್ರವಾಸಿ ಮಂದಿರ ವೃತ್ತ, ಹಳೆ ಬಸ್ ನಿಲ್ದಾಣ ವೃತ್ತ, ತೆಗ್ಗಿನಮಠ ವೃತ್ತ ಈ ಮೂರು ವೃತ್ತಗಳಿಗೆ ಆಕ್ಷಪಣೆ ಬಂದಿವೆ’ ಎಂದು ಅಧ್ಯಕ್ಷ ಎಚ್ .ಕೆ. ಹಾಲೇಶ್ ಹೇಳಿದರು.
ನಂತರ ದೀರ್ಘ ಚರ್ಚೆ, ನಡೆಯಿತು. ವಾಗ್ವಾದ ಜರುಗಿತು. ಕೆಲವರು ಐ.ಬಿ. ವೃತ್ತಕ್ಕೆ ಕಿತ್ತೂರು ರಾಣಿ ಚನ್ನಮ್ಮ, ಇನ್ನೂ ಕೆಲವರು ಡಾ.ಬಿ.ಆರ್ .ಅಂಬೇಡ್ಕರ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ ಹೀಗೆ ತಮ್ಮ ತಮ್ಮ ವಾದ ಮಂಡಿಸಿದರು. ಕೆಲವರು ಮುಂದಿನ ಸಭೆಗೆ ತರಲು ಒತ್ತಾಯಿಸಿದರು.
ಕೈ ಎತ್ತುವ ಮೂಲಕ ಮತಕ್ಕೆ ಹಾಕಿದಾಗ ಅಂಬೇಡ್ಕರ ವೃತ್ತ ಎಂಬ ಹೆಸರಿಗೆ ಬಹುಮತ ಬಂದಿತು, ಇದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಹಳೆ ಬಸ್ ನಿಲ್ದಾಣ ವೃತ್ತಕ್ಕೆ ಟಿಪ್ಪು ಸುಲ್ತಾನ್ ಹಾಗೂ ವೀರಭದ್ರೇಶ್ವರ ವೃತ್ತ ಈ ಎರಡರಲ್ಲಿ ವೀರಭದ್ರೇಶ್ವರ ವೃತ್ತ ಎಂದು ಹೆಸರಿಡಲು ಬಹುಮತ ಸಿಕ್ಕಿತು. ಅಂತಿಮವಾಗಿ ಐ.ಬಿ.ವೃತ್ತ, ಹಳೆ ಬಸ್ ನಿಲ್ದಾಣ ಹಾಗೂ ತೆಗ್ಗಿನಮಠ ವೃತ್ತಕ್ಕೆ ನಾಮಕರಣ ಮಾಡುವ ಪ್ರಸ್ತಾಪವನ್ನು ಅಧ್ಯಕ್ಷರ ಅಭಿಪ್ರಾಯದಂತೆ ಮುಂದೂಡಲಾಯಿತು.ಉಪಾಧ್ಯಕ್ಷ ಸತ್ಯನಾರಾಯಣ, ಮುಖ್ಯಾಧಿಕಾರಿ ನಾಗರಾಜನಾಯ್ಕ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
