ಚಿತ್ರದುರ್ಗ:
ಕಳೆದ ಹತ್ತು ವರ್ಷಗಳಿಂದಲೂ ಕುಂಟುತ್ತ ತೆವಳುತ್ತ ಆಮೆಗತಿಯಲ್ಲಿ ನಡೆಯುತ್ತಿರುವ ಭದ್ರಾಮೇಲ್ದಂಡೆ ಕಾಮಗಾರಿಗೆ ಬಜೆಟ್‍ನಲ್ಲಿ ಐದು ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕು ಇಲ್ಲವಾದಲ್ಲಿ ಪಾದಯಾತ್ರೆ, ರಸ್ತೆ ತಡೆ, ಜಿಲ್ಲೆಯನ್ನು ಬಂದ್ ಮಾಡಿ ಹಳ್ಳಿ ಹಳ್ಳಿಗೆ ಹೋಗಿ ಜನರಿಗೆ ನಿಮ್ಮ ಸುಳ್ಳನ್ನು ತಿಳಿಸಿ ದೊಡ್ಡ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆ, ಮೆಡಿಕಲ್ ಕಾಲೇಜು, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ಆಗ್ರಹಿಸಿ ಭದ್ರಾಮೇಲ್ದಂಡೆ ಕಚೇರಿ ಎದುರು ಬುಧವಾರ ಬಿಜೆಪಿ.ಯಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಟಿ.ಬಿ.ಜಯಚಂದ್ರ, ಹೆಚ್.ಆಂಜನೇಯ, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪನವರೆ ಭದ್ರಾಮೇಲ್ದಂಡೆ ಯೋಜನೆ ಇಂದು ಬರುತ್ತೆ, ನಾಳೆ ಬರುತ್ತೆ, ಇನ್ನು ಮೂರು ತಿಂಗಳೊಳಗೆ ಬರುತ್ತೆ, ಆರು ತಿಂಗಳೊಳಗೆ ಬರುತ್ತೆ ಇನ್ನೇನು ನೀರು ಹರಿದೇ ಬಿಡುತ್ತದೆ ಎಂದು ಬೊಗಳೆ ಬಿಟ್ಟು ಜಿಲ್ಲೆಯ ಜನರನ್ನು ವಂಚಿಸುತ್ತಿದ್ದೀರಲ್ಲ.
ನಿಮಗೆ ನಾಚಿಕೆಯಾಗುವುದಿಲ್ಲವೇ. ಜಿಲ್ಲೆಯ ಲಕ್ಷಾಂತರ ರೈತರ ಕನಸಿನ ಯೋಜನೆ ಭದ್ರಾಮೇಲ್ದಂಡೆ ಕಳೆದ ಹತ್ತು ವರ್ಷಗಳಿಂದಲೂ ಹಣವಿಲ್ಲದೆ ಸೊರಗುತ್ತಿದೆ. ನೂರರಲ್ಲಿ ಶೇ.ಹತ್ತು ಪೈಸೆಯ ಕೆಲಸವೂ ಆಗಿಲ್ಲ. 2018 ಕ್ಕೆ ಯೋಜನೆ ಪೂರ್ಣಗೊಂಡು ಜಿಲ್ಲೆಗೆ ನೀರು ಹರಿಯುತ್ತದೆ ಎಂದು ಯಾವ ಆಧಾರದ ಮೇಲೆ ಹೇಳುತ್ತಿದ್ದೀರ. ಜಿಲ್ಲೆಯ ರೈತರ ಜನರ ತಾಳ್ಮೆ ಪರೀಕ್ಷಿಸುವುದಕ್ಕೂ ಒಂದು ಮಿತಿಯಿರಲಿ. ಮಧ್ಯ ಕರ್ನಾಟಕ ಬಯಲುಸೀಮೆ ಚಿತ್ರದುರ್ಗವನ್ನು ಕಡೆಗಣಿಸುತ್ತ ಉಡಾಫೆ ಉತ್ತರ ನೀಡುತ್ತಿದ್ದರೆ ಮನೆ ಮನೆಯಿಂದ ಹಣ ಎತ್ತಿ ಭದ್ರಾಮೇಲ್ದಂಡೆ ಯೋಜನೆಗೆ ಸರ್ಕಾರಕ್ಕೆ ಕಾಸು ಕೊಡುತ್ತೇವೆ.
ಹೆಚ್.ಡಿ.ಕುಮಾರಸ್ವಾಮಿಯವರೆ ನೀವು ಬರಿ ಹಾಸನ, ಮಂಡ್ಯ, ಮೈಸೂರು, ರಾಂನಗರಕ್ಕೆ ಮುಖ್ಯಮಂತ್ರಿಯಲ್ಲ ಕರ್ನಾಟಕ ರಾಜ್ಯದ ಆರುವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ರೈತರಿದ್ದಾರೆ. ನಾವು ಕೂಡ ಮಣ್ಣಿನ ಮಕ್ಕಳೆ. ಮಾತೆತ್ತಿದರೆ ಕಣ್ಣೀರು ಸುರಿಸಿ ಉಡಾಫೆ ಮಾತಾಡುವುದನ್ನು ನಿಲ್ಲಿಸಿ ನಾಳೆ ಮಂಡಿಸಲಿರುವ ಬಜೆಟ್‍ನಲ್ಲಿ ಭದ್ರಾಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ರೂ.ಗಳನ್ನು ಮೀಸಲಿಡಿ ಎಂದು ಆಗ್ರಹಿಸಿದರು.
ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಮಂತ್ರಿಗಳು, ಶಾಸಕರು ಜಿಲ್ಲೆಗೆ ನೀರು ಹರಿಯಲಿದೆ ಎಂದು ಭಗೀರಥ ಫ್ಲೆಕ್ಸ್ ಹಾಕಿಸಿಕೊಳ್ಳುವುದು ಯಾವ ಪುರಷಾರ್ಥಕ್ಕಾಗಿ ಎಂದು ಪ್ರಶ್ನಿಸಿದ ಕೆ.ಎಸ್.ನವೀನ್ ನೀರಾವರಿ ಯೋಜನೆಗೆ ಇದುವರೆವಿಗೂ ಐದುನೂರು ಎಕರೆ ಭೂಮಿಯನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಆರು ಸಾವಿರ ಎಕರೆಯಷ್ಟು ಭೂಮಿ ಬೇಕು. ಇದುವರೆವಿಗೂ ಯಾವ ಜಿಲ್ಲಾಧಿಕಾರಿ ಯಾದರೂ ಜಿಲ್ಲೆಯ ರೈತರ ಜೊತೆ ಸಭೆ ನಡೆಸಿ ಭೂಮಿಯನ್ನು ಕೇಳಿದ್ದಾರ. ವರ್ಷಗಟ್ಟಲೆ ಏನು ಮಾಡಿಲ್ಲ. ಸುಳ್ಳು ಹೇಳುವುದೇ ಕಾಂಗ್ರೆಸ್ ಮತ್ತು ಜೆಡಿಎಸ್.ನಮ್ಮಿಶ್ರ ಸರ್ಕಾರದ ಸಾಧನೆಯಾಗಿದ ಎಂದು ವ್ಯಂಗ್ಯವಾಡಿದರು.
ಕೃಷಿಗಾಗಿ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತನ ಸಾವಿಗೆ ಕಾಂಗ್ರೆಸ್-ಜೆಡಿಎಸ್.ಸರ್ಕಾರಗಳೇ ಕಾರಣ. ರಾಜ್ಯದ ಮುಖ್ಯಮಂತ್ರಿಯಾಗಿ ಒಂಬತ್ತು ತಿಂಗಳಾದರೂ ಹೆಚ್.ಡಿ.ಕುಮಾರಸ್ವಾಮಿ ಒಮ್ಮೆಯಾದರೂ ಚಿತ್ರದುರ್ಗಕ್ಕೆ ಬಂದಿಲ್ಲ. ರಾಜಕಾರಣ ಮಾಡಲು ಕಲ್ಕತ್ತ ಡೆಲ್ಲಿಗೆ ಹೋಗಲು ಪುರುಸೊತ್ತಿದೆ. ಚಿತ್ರದುರ್ಗಕ್ಕೆ ಬರಲು ಆಗಲ್ಲವೇ ಎಂದು ಖಾರವಾಗಿ ಕುಟುಕಿದೆ ಕೆ.ಎಸ್.ನವೀನ್ ಸುಳ್ಳಿನ ಮೇಲೆ ಜೀವನ ನಡೆಸಬೇಡಿ.
ಬಡ ಜಿಲ್ಲೆ ಚಿತ್ರದುರ್ಗದವರು ಸಾಲ ಸೂಲ ಮಾಡಿ ಮಂಗಳೂರು, ಮಣಿಪಾಲ್, ಬೆಂಗಳೂರು ಆಸ್ಪತ್ರೆಗೆ ಹೋಗಬಾರದೆಂಬ ಕಾರಣಕ್ಕಾಗಿ ಬಿಜೆಪಿ.ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದರೂ ಹಿಂದಿನ ಕಾಂಗ್ರೆಸ್ ಹಾಗೂ ಈಗಿನ ಸಮ್ಮಿಶ್ರ ಸರ್ಕಾರ ಕಾಲೇಜಿಗೆ ಒಂದು ಪೈಸೆಯನ್ನು ಬಿಡುಗಡೆಗೊಳಿಸಲ್ಲ. ನೋಡಲ್ ಅಧಿಕಾರಿಯನ್ನು ನೇಮಿಸಿಲ್ಲ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಯನ್ನು ಜಾರಿಗೆ ತಂದಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಕಣ್ಣಿಗೆ ಕಾಣಲ್ಲ. ಇನ್ನು ಉಡಾಫೆ, ಅಪಹಾಸ್ಯದ ಮಾತುಗಳನ್ನು ನಿಲ್ಲಿಸದಿದ್ದರೆ ದೊಡ್ಡ ಹೋರಾಟ ಆರಂಭಿಸಿ ಬೆಂಗಳೂರುವರೆಗೆ ಬಂದು ಚುರುಕುಮುಟ್ಟಿಸುತ್ತೇವೆ ಎಂದು ಬೆದರಿಕೆ ಹಾಕಿದರು.
ಚಿತ್ರದುರ್ಗ ಲೋಕಸಭಾ ಚುನಾವಣಾ ಉಸ್ತುವಾರಿ ಟಿ.ಜಿ.ನರೇಂದ್ರನಾಥ್ ಮಾತನಾಡಿ ಜೆಡಿಎಸ್.ನ ಅಪ್ಪ ಮಕ್ಕಳು ವಾಮಮಾರ್ಗದಿಂದ ಅಧಿಕಾರ ಹಿಡಿಯಲು ತಂತ್ರಗಾರಿಕೆ ರೂಪಿಸುತ್ತಾರೆ ವಿನಃ ರಾಜ್ಯದ ಯಾವ ಜಿಲ್ಲೆಗಳ ಅಭಿವೃದ್ದಿ ಕಡೆ ನಿಗಾಹರಿಸುವುದಿಲ್ಲ. ಹಾಸನ, ಮಂಡ್ಯ, ಮೈಸೂರು, ರಾಮನಗರಕ್ಕೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆಂದು ಹಾಸ್ಯವಾಡಿದರು.
ಸಾರ್ವಜನಿಕರಿಂದ ದೇಣಿಗೆ ಸಂಗ್ರಹ: ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆ, ಮೆಡಿಕಲ್ ಕಾಲೇಜು, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಹಣವಿಲ್ಲದಿರುವುದರಿಂದ ಧರಣಿ ನಿರತ ಬಿಜೆಪಿ.ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ವೃತ್ತ ಹಾಗೂ ಸುತ್ತಮುತ್ತಲು ಸಂಚರಿಸಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು.
ವ್ಯಾಪಾರ ವಹಿವಾಟುದಾರರು, ಆಟೋಚಾಲಕರು, ವಕೀಲರು, ಸಾರ್ವಜನಿಕರು ರಾಜ್ಯ ಸಮ್ಮಿಶ್ರ ಸರ್ಕಾರದ ದಿವಾಳಿತನವನ್ನು ಧಿಕ್ಕರಿಸಿ ಕೈಲಾದ ದೇಣಿಗೆ ನೀಡಿ ಭದ್ರಾಮೇಲ್ದಂಡೆ ಜಿಲ್ಲೆಗೆ ಹರಿದು ಬರಲಿ ಎಂದು ಆಶಿಸಿದರು.
ಭದ್ರಾಮೇಲ್ದಂಡೆ ಕಚೇರಿಗೆ ನುಗ್ಗಲು ಧರಣಿನಿರತರು ಮುಂದಾಗಿದ್ದ ಸುಳಿವನ್ನು ಮೊದಲೇ ಅರಿತ ಭದ್ರಾ ಇಂಜಿನಿಯರ್‍ಗಳು ಮೈಕೊಡವಿಕೊಂಡು ಧರಣಿನಿರತರ ಬಳಿ ಬಂದ ಅಹವಾಲು ಸ್ವೀಕರಿಸಿ ನಿಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಕಳಿಸಿಕೊಡುತ್ತೇವೆಂದು ಭರವಸೆ ನೀಡಿ ನೀರಾವರಿ ಯೋಜನೆಗೆ ಪೂರ್ಣಗೊಳ್ಳಲು ಕನಿಷ್ಟ ಹತ್ತು ಸಾವಿರ ಕೋಟಿ ರೂ.ಬೇಕಾಗುತ್ತದೆ. ನಂತರ ನಿಮಗೆ ಸಂಪೂರ್ಣ ಮಾಹಿತಿಯನ್ನು ಮಾಧ್ಯಮದ ಮೂಲಕ ನೀಡುತ್ತೇವೆಂದು ಆಶ್ವಾಸನೆ ನೀಡಿದರು.
ಸಹ ಪ್ರಭಾರಿ ಜಿ.ಎಂ.ಸುರೇಶ್, ಒ.ಬಿ.ಸಿ.ಮೋರ್ಚ ರಾಜ್ಯ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕ ಲೋಕಸಭಾ ಆಕಾಂಕ್ಷಿ ಮಾನಪ್ಪ ವಜ್ಜಾಲ್, ಮುಖಂಡರಾದ ವೆಂಕಟಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ಜೈಪಾಲ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ನಾಗರಾಜ್‍ಬೇದ್ರೆ, ಖಜಾಂಚಿ ನರೇಂದ್ರ, ರೈತ ಮೋರ್ಚ ಜಿಲ್ಲಾಧ್ಯಕ್ಷ ಡಿ.ರಮೇಶ್, ಸುರೇಶ್ ಸಿದ್ದಾಪುರ, ಸಂಪತ್‍ಕುಮಾರ್, ಟೈಗರ್ ತಿಪ್ಪೇಸ್ವಾಮಿ, ಶಿವಣ್ಣಾಚಾರ್, ಬುರುಡೆಕಟ್ಟೆ ರಾಜೇಶ್, ಓ.ಬಿ.ಸಿ.ಪ್ರವೀಣ್, ರೇಖ, ಶ್ಯಾಮಲಶಿವಪ್ರಕಾಶ್, ಜಿತೇಂದ್ರ, ಕೇಶವಮೂರ್ತಿ, ನಲ್ಲಿಕಟ್ಟೆ ಜಗದೀಶ್, ಅಸ್ಗರ್, ಸಾಮಿಲ್‍ಶಿವಣ್ಣ, ನಾಗರಾಜ್, ರಾಜುಶಿವನಕೆರೆ, ಗೋವಿಂದರಾಜು, ಸತ್ಯನಾರಾಯಣ,ಸ ಶೈಲಜಾರೆಡ್ಡಿ, ಇಂಧುಮತಿ, ಜಯಕುಮಾರಿ, ವಿಜಯಲಕ್ಷ್ಮಿ, ರೀನವೀರಭದ್ರಪ್ಪ,
ಜಯಶೀಲಮಹೇಶ್ವರಪ್ಪ ಇನ್ನು ಮುಂತಾದವರು ಧರಣಿಯಲ್ಲಿ ಭಾಗವಹಿಸಿದ್ದರು.