ಮಧುಗಿರಿ
ಅವಿದ್ಯಾವಂತೆ ವೃದ್ಧೆಯೊಬ್ಬರನ್ನು ಮೂವರು ಆಸಾಮಿಗಳು ಸೇರಿ ಆಧಾರ್ ಹಾಗೂ ಪಹಣಿ ನೀಡಿದರೆ ಸರಕಾರದಿಂದ ಉಚಿತವಾಗಿ 20 ಸಾವಿರ ಹಣ ನೀಡುವುದಾಗಿ ನಯವಾಗಿ ವಂಚಿಸಿ ಜಮೀನೊಂದನ್ನು ವ್ಯಕ್ತಿಯೊಬ್ಬರ ಹೆಸರಿಗೆ ನೋಂದಣಿ ಮಾಡಿಸಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕಸಬ ಹೋಬಳಿಯ ಮಾಡಗಾನಹಟ್ಟಿಯ ವಾಸಿ ಸಣ್ಣೀರಮ್ಮ (60) ಎಂಬ ವೃದ್ಧೆಯನ್ನು ಸರಕಾರದ ವತಿಯಿಂದ ಉಚಿತವಾಗಿ 20 ಸಾವಿರ ಹಣ ನೀಡಲಾಗುವುದು. ಜಮೀನಿನ ಪಹಣಿ ಮತ್ತು ಆಧಾರ್ ಕಾರ್ಡ್ನ್ನು ತಾಲ್ಲೂಕು ಕಚೇರಿಗೆ ತರುವಂತೆ ಹೇಳಿ ಜ. 16 ರಂದು ಉಪನೋಂದಣಿ ಕಚೇರಿಗೆ ಕರೆದು ಕೊಂಡು ಹೋಗಿ ಕೆಲವು ಹಾಳೆಗಳಿಗೆ ರುಜು ಮಾಡಿಸಿ 20 ಸಾವಿರ ನಗದು ಕೊಟ್ಟು ಕಳುಹಿಸಿದ್ದರು.
ನನ್ನ ಹೆಸರಿನಲ್ಲಿದ್ದ ಪುಟ್ಟೇನಹಳ್ಳಿ ಸ.ನಂ 10/4 ರಲ್ಲಿನ 1 ಎಕರೆ 2 ಗುಂಟೆ ಜಮೀನನ್ನು ದೊಡ್ಡಬಳ್ಳಾಪುರದ ಚೆನ್ನಪ್ಪ ಬಿನ್ ಗಂಗಯ್ಯ ಎನ್ನುವವರ ಹೆಸರಿಗೆ ಆರೋಪಿಗಳಾದ ಶ್ರೀನಿವಾಸಪುರದ ಸಿದ್ದಗಂಗಪ್ಪ, ನಾಗರಾಜ, ಇಟಕಲೋಟಿಯ ಗಂಗಾಧರ ಎನ್ನುವವರು ಜಮೀನನ್ನು ನೋಂದಣಿ ಮಾಡಿಸಿ ವೃದ್ದೆಯನ್ನು ವಂಚಿಸಿ ಈ ವಿಷಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ನಿನ್ನ ಪ್ರಾಣ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದರೆಂದು ಸಣ್ಣೀರಮ್ಮ ಆರೋಪಿಸಿದ್ದಾರೆ.
ದಿನಗಳು ಕಳೆದ ನಂತರ ಜಮೀನಿನ ಬಗ್ಗೆ ತಾಲ್ಲೂಕಿನ ಆರ್ ಐ ರವರಿಂದ ಜಮೀನಿನ ಖಾತೆ ಬದಲಾವಣೆಯ ಬಗ್ಗೆ ಮಾಹಿತಿ ತಿಳಿದು ಈ ಬಗ್ಗೆ ನನ್ನ ಮಗ ಮತ್ತು ಅಳಿಯನ ಬಳಿ ಅಳಲು ತೋಡಿಕೊಂಡಿದ್ದರಿಂದ ಅವರು ಮಧುಗಿರಿಯ ಉಪನೋಂದಾಣಿಧಿಕಾರಿಗಳ ಕಚೆÉೀರಿಗೆ ತೆರಳಿ ವಿಚಾರಿಸಿದಾಗ ಜಮೀನು ಮಾರಾಟವಾಗಿರುವ ಬಗ್ಗೆ ತಿಳಿದು ಬಂದಿದೆ. ಆರೋಪಿಗಳಿಂದ ಜಮೀನನ್ನು ಮತ್ತೆ ವಾಪಸ್ಸು ನೀಡಬೇಕೆಂದು ಸಣ್ಣೀರಮ್ಮ ಮಧುಗಿರಿ ಪೊಲೀಸ್ ಠಾಣೆಯ ಮೆಟ್ಟಲೇರಿದ್ದಾರೆ.