ಶಿರಾ
ಗ್ರಂಥಾಲಯದಲ್ಲಿರುವ ಜ್ಞಾನ ಸಂಪನ್ಮೂಲಗಳನ್ನು ಗರಿಷ್ಠ ಮಟ್ಟವಾಗಿ ಬಳಸುವ ಮುಖಾಂತರ ತಮ್ಮ ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಿಗೆ ಓದುವುದರ ಜೊತೆಗೆ ಜ್ಞಾನಾರ್ಜನೆಗಾಗಿ ಓದಬೇಕು ಎಂದು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಬಾಬು ತಿಳಿಸಿದರು.
ನಗರದ ಸರ್ಕಾರಿ ಪ್ರ.ದ. ಕಾಲೇಜಿನಲ್ಲಿ ನಡೆದ ವಿವಿಧ ವಿಭಾಗಗಳ ಪುಸ್ತಕ ಪ್ರದರ್ಶನ ಸಪ್ತಾಹ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದುವ ಪ್ರತಿಯೊಂದು ಕ್ಷಣದಲ್ಲೂ ಮನನ ಮಾಡಿಕೊಳ್ಳುವುದನ್ನು ಕರಗತ ಮಾಡಿಕೊಂಡಾಗ ಓದಿನ ಅಂಶಗಳು ಸ್ಮರಣೆಯಲ್ಲಿ ಉಳಿಯಲು ಸಾಧ್ಯ. ಕೇವಲ ಒಂದು ವಿಷಯಕ್ಕೆ ಅಧ್ಯಯನ ಮಾತ್ರ ಸೀಮಿತವಾಗದೆ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು. ವಿಶ್ವವಿದ್ಯಾಲಯದ ಮಟ್ಟದ ಶಿಕ್ಷಣ ವಿಶ್ವ ಮಟ್ಟದ ಶಿಕ್ಷಣವಾಗಿರುತ್ತದೆ. ನಿಘಂಟುಗಳನ್ನು ಓದುವ ಮೂಲಕ ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಮೂಲಕ ಉತ್ತಮ ಸಂವಹನ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ತಿಮ್ಮನಹಳ್ಳಿ ವೇಣುಗೋಪಾಲ್ ಮಾತನಾಡಿ, ಗ್ರಂಥಾಲಯದ ಪುಸ್ತಕಗಳ ಪರಿಚಯ ಆಗಬೇಕು. ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳನ್ನು ಬರೆಯುವ ಗೈಡ್ ಮಾದರಿಯಲ್ಲಿ ಇರುವಂತಹ ಪುಸ್ತಕಗಳಿಗೆ ಜೊತು ಬೀಳಬಾರದು. ಹಲವಾರು ಪರಾಮರ್ಶನ ಗ್ರಂಥಗಳನ್ನು ಓದುವ ಮೂಲಕ ಜ್ಞಾನದ ಪರಿಧಿಯನ್ನು ವಿಸ್ತರಿಸಿ ಕೊಳ್ಳಬೇಕು ಎಂದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ. ನಾಗಭೂಷಣಯ್ಯ ಮಾತನಾಡಿ, ಗ್ರಂಥಾಲಯ ಮತ್ತು ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವಂತೆ ಹೇಳಿದ ಮೊದಲ ಶಿಕ್ಷಣ ಮಂತ್ರಿ ಮೌಲನಾ ಆಜಾದ್ ರವರ ಮಾತನ್ನು ನೆನಪಿಸಿದರು.
ಗ್ರಂಥಪಾಲಕರಾದ ಆರ್. ಬಂಡಿರಂಗನಾಥ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಧರಣೇಂದ್ರ ಕುಮಾರಿ ವಂದಿಸಿದರು, ಪ್ರಾಧ್ಯಾಪಕರಾದ ಗೋವಿಂದರಾಜು, ಡಾ.ಚಿಕ್ಕಣ್ಣ , ಸುಷ್ಮಾ, ನಳಿನ, ಹೇಮಲತಾ ಬಿ ಆರ್. ಮುಂತಾದವರು ಉಪಸ್ಥಿತರಿದ್ದರು. ಕಲಾ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಸಾಧಿಕಾ ಬಾನು ಕಾರ್ಯಕ್ರಮವನ್ನು ನಿರೂಪಿಸಿದರು.