ಮೈಸೂರು ಸಿಲ್ಕ್ ಸೀರೆಗಳ ಮಾರಾಟ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಚಾಲನೆ

ಚಿತ್ರದುರ್ಗ   
       
       ರಾಜ್ಯದ ಮೈಸೂರು ಸಿಲ್ಕ್ ಸೀರೆಗಳು ಆಕರ್ಷಕ ಡಿಸೈನ್ ಹೊಂದಿರುವುದರ ಜೊತೆಗೆ ಗುಣಮಟ್ಟಕ್ಕೂ ಖ್ಯಾತಿ ಪಡೆದಿವೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
 
       ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಈ ಬಾರಿ ಚಿತ್ರದುರ್ಗ ನಗರದ ಮದಕರಿ ನಾಯಕ ಸರ್ಕಲ್ ಬಳಿಯ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಹಾಲ್ (ಐಎಂವಿ) ನಲ್ಲಿ ಫೆ. 7 ರಿಂದ 11 ರವರೆಗೆ ಹಮ್ಮಿಕೊಂಡಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
        ರಾಜ್ಯದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ತಯಾರಿಸುವ ಮೈಸೂರು ಸಿಲ್ಕ್ ಸೀರೆಗಳು ಉತ್ತಮ ಗುಣಮಟ್ಟಕ್ಕಾಗಿ ಖ್ಯಾತಿಯನ್ನು ಪಡೆದಿವೆ.  ಈ ಮೊದಲು ಸೀರೆಗಳು ಕನಿಷ್ಟ 9 ರಿಂದ 10 ಸಾವಿರ ದರ ಇತ್ತು.  ಆದರೆ ಇದೀಗ ನಿಗಮವು ಮಧ್ಯಮ ವರ್ಗದವರೂ ಮೈಸೂರು ಸಿಲ್ಕ್ ಸೀರೆಗಳನ್ನ ಖರೀದಿಸಲು ಎನ್ನುವ ಉದ್ದೇಶದಿಂದ ಕನಿಷ್ಟ ದರವನ್ನು 5 ಸಾವಿರಕ್ಕೆ ಇಳಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.  
       ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಸೀರೆಗಳಿಗೂ ಕೂಡ ವ್ಯಾಪಕ ಬೇಡಿಕೆ ಇದ್ದು, ಇವೂ ಕೂಡ ಉತ್ತಮ ಗುಣಮಟ್ಟಕ್ಕೆ ಹೆಸರಾಗಿವೆ.  ಜಿಲ್ಲೆಯ ಬ್ರಾಂಡ್ ಆಗಿರುವ ಮೊಳಕಾಲ್ಮೂರು ಸೀರೆಗೂ ಉತ್ತಮ ಮಾರುಕಟ್ಟೆ ವ್ಯವಸ್ಥೆಯಾಗುವಂತಾಗಬೇಕು.  ಜಿಲ್ಲೆಯಲ್ಲಿ ನಿಗಮವು ಹಮ್ಮಿಕೊಂಡಿರುವ ಸೀರೆಗಳ ಮಾರಾಟ ಮೇಳದಲ್ಲಿ ಒಳ್ಳೆಯ ವ್ಯವಹಾರ ನಡೆದು, ಯಶಸ್ವಿಯಾಗಲಿ ಎಂದರು.
         ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾರಾಟ ಅಧಿಕಾರಿ ಭಾನುಪ್ರಕಾಶ್ ಮಾತನಾಡಿ, ಪ್ರತಿ ವರ್ಷದಂತೆ ಜಿಲ್ಲೆಯಲ್ಲಿ ಈ ಬಾರಿಯೂ ಶೇ. 25 ರ ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆಗಳ ಮಾರಾಟ ಮೇಳವನ್ನು ಆಯೋಜಿಸಿದೆ.  
         ಕಳೆದ ವರ್ಷ ಸುಮಾರು 150 ಸೀರೆಗಳು ಮಾರಾಟಗೊಂಡು ಅಂದಾಜು 50 ಲಕ್ಷ ವ್ಯವಹಾರ ನಡೆಸಲಾಗಿತ್ತು.  ಮೈಸೂರ್ ಸಿಲ್ಕ್‍ಗೆ ಬಳಸಲಾಗುವ ಜರಿಯು ಪರಿಶುದ್ಧ ಚಿನ್ನದ್ದಾಗಿದ್ದು, ವಿನ್ಯಾಸಗಳು ಸಾಂಪ್ರದಾಯಿಕ ಮತ್ತು ಆಧುನೀಕತೆಯಿಂದ ಕೂಡಿವೆ.  ರಾಜ್ಯದ ಪರಂಪರೆಗೂ ಖ್ಯಾತಿ ನೀಡಿದೆ.  
          ಅಜ್ಜಿಯಿಂದ ಮಗಳಿಗೆ, ಮೊಮ್ಮಗಳಿಗೆ ಸೀರೆಗಳು ಹಸ್ತಾಂತರವಾಗಿರುವಂತಹ ಉದಾಹರಣೆಗಳು ಸಾಕಷ್ಟಿವೆ. ಸುಮಾರು 40 ರಿಂದ 50 ವರ್ಷಗಳಷ್ಟು ಹಳೆಯದಾದ ಮೈಸೂರು ಸಿಲ್ಕ್ ಸೀರೆಗಳು ಇಂದಿಗೂ ಉತ್ತಮ ಗುಣಮಟ್ಟ ಹೊಂದಿದ್ದು, ಇಂತಹ ಸೀರೆ ಹೊಂದಿದವರನ್ನು ಗುರುತಿಸಿ, ಅವರಿಗೆ ಬಹುಮಾನ ನೀಡುವ ಕಾರ್ಯಕ್ರಮ ಕೂಡ ನಿಗಮ ಮಾಡುತ್ತಿದೆ.
          ಮೈಸೂರು ಸಿಲ್ಕ್ ಸೀರೆಯ ಬ್ರ್ಯಾಂಡ್ ಅನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಮೊಕದ್ದಮೆ ದಾಖಲಿಸಿ, ಶಿಕ್ಷೆಗೆ ಗುರಿಪಡಿಸುವ ಕಾರ್ಯವನ್ನು ನಿಗಮವು ಮಾಡುತ್ತಿದೆ.  ಒಟ್ಟಾರೆ ಮೈಸೂರು ಸಿಲ್ಕ್ ಸೀರೆಯ ಗುಣಮಟ್ಟದ ಬಗ್ಗೆ ಜನರಲ್ಲಿ ವಿಶ್ವಾಸ ಹಾಗೂ ನಂಬಿಕೆ ಇದೆ.  
         ಇದನ್ನು ಉಳಿಸುವ ನಿಟ್ಟಿನಲ್ಲಿ ನಿಗಮವು ಕಾರ್ಯ ಮಾಡುತ್ತಿದೆ.  ಮೈಸೂರು ಸಿಲ್ಕ್ ಸೀರೆಗಳು ಆಕರ್ಷಕ ಹಾಗೂ ಉತ್ತಮ ಗುಣಮಟ್ಟದ್ದಾಗಿರುವುದರಿಂದ, ಬೇಡಿಕೆ ಹೆಚ್ಚು ಇದೆ.  ಬೇಡಿಕೆಗೆ ಅನುಗುಣವಾಗಿ ಸೀರೆಗಳನ್ನು ಪೂರೈಸುವುದು ಕಷ್ಟಸಾಧ್ಯ ವಾಗಿದೆ .  ಸರ್ಕಾರಿ ನೌಕರರಿಗೆ ಕಂತುಗಳ ಆಧಾರದಲ್ಲಿ ಸೀರೆ ಖರೀದಿಸಲು ಅವಕಾಶ ಒದಗಿಸಲಾಗಿದೆ. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ನಗರದಲ್ಲಿ ಏರ್ಪಡಿಸಿರುವ ಮೈಸೂರು ಸಿಲ್ಕ್ ಸೀರೆಗಳ ಮಾರಾಟ ಮೇಳದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link