ನವದೆಹಲಿ:
ದೇಶದಲ್ಲಿ ಅತ್ಯಂತ ಚರ್ಚೆಗೆ ಕಾರಣವಾಗಿರುವ ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿ ಭಾಗಿಯಾಗಿದೆ ಎಂದು ಮಾಧ್ಯಮವೊಂದು ನೀಡಿದೆ ಎನ್ನಲಾದ ತನಿಖಾ ವರದಿಯನ್ನು ಇಟ್ಟುಕೊಂಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪ್ರಧಾನ ಮಂತ್ರಿ ಕಚೇರಿ ರಫೆಲ್ ವಿಚಾರವಾಗಿ ನಡೆದ ರಹಸ್ಯ ಸಮಾನಾಂತರವಾಗಿ ಮಾತುಕತೆ ನಡೆಸಿದೆ ಎಂದು ಪತ್ರಿಕಾ ವರದಿ ಬಂದಿರುವ ಹಿನ್ನೆಲೆಯಲ್ಲಿ ರಫೆಲ್ ಹಗರಣದಲ್ಲಿ ನರೇಂದ್ರ ಮೋದಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ರಾಹುಲ್ ಗಾಂಧಿ ನೇರಾನೃರವಾಗಿ ಆರೋಪ ಮಾಡಿದ್ದಾರೆ.
ನಾವು ಕಳೆದ ಒಂದು ವರ್ಷದಿಂದ ಹೇಳುತ್ತಾ ಬಂದಿರುವ ಸತ್ಯವನ್ನು ಇಂದು ದೇಶದ ಪ್ರಮುಖ ಪತ್ರಿಕೆಯೇ ತನಿಖೆ ನಡೆಸಿ ವರದಿ ಮಾಡಿದೆ. ಪ್ರಧಾನಿ ಮೋದಿ ಸ್ವತಃ ಸಮಾನಾಂತರ ಒಪ್ಪಂದ ನಡೆಸಿದ್ದಾರೆ ಎಂದು ಮಾಧ್ಯಮದ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಧಾನ ಮಂತ್ರಿಗಳು ಮಾತುಕತೆಯಲ್ಲಿ ಏಕೆ ಭಾಗಿಯಾಗಿದ್ದಾರೆ, ದೇಶದ ಜನತೆಯ ಹಿತಕ್ಕಾಗಿಯೇ, ಖಂಡಿತಾ ಅಲ್ಲ, ಅನಿಲ್ ಅಂಬಾನಿಗೋಸ್ಕರ. ಅದರರ್ಥ ಚೌಕಿದಾರ ಒಬ್ಬ ಕಳ್ಳ. ಮೋದಿಯವರು ವಾಯುಪಡೆಯಿಂದ 30 ಸಾವಿರ ಕೋಟಿ ರೂಪಾಯಿ ಕದ್ದು ಅದನ್ನು ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಚೌಕಿದಾರ ಎಂದು ಮೋದಿಯವರು ಬಹುಶಃ ಅವರ ಬಗ್ಗೆಯೇ ಹೇಳಿಕೊಳ್ಳುತ್ತಾರೆ. ಅವರಲ್ಲಿ ಎರಡು ಬಗೆಯ ವ್ಯಕ್ತಿತ್ವವಿರಬೇಕು. ಒಂದು ದಿನ ಚೌಕಿದಾರನಾಗುವ ಮೋದಿ ಮತ್ತೊಂದು ದಿನ ಚೋರ್ ಆಗುತ್ತಾರೆ. ಅವರು ಸ್ಕೀಝೋಫ್ರೀನಿಯಾದಿಂದ ಬಳಲುತ್ತಿರಬೇಕು ಎಂದು ಕಿಡಿಕಾರಿದ್ದಾರೆ.