ಚಳ್ಳಕೆರೆ
ಮಕ್ಕಳನ್ನು ಅನಾರೋಗ್ಯಕ್ಕೆ ಈಡು ಮಾಡುವ ಪ್ರಾಣಕ್ಕೆ ಅಪಾಯವನ್ನುಂಟು ಮಾಡುವ ಜಂತು ಹುಳುಗಳನ್ನು ನಿವಾರಣೆ ಮಾಡುವ ಆರೋಗ್ಯ ಇಲಾಖೆಯ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಶುಕ್ರವಾರ ನಗರ ಸರ್ಕಾರಿ ಮಾದರಿ ಹಿರಿಯ ಬಾಲಕಿಯರ ಪಾಠಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಜಂತು ಹುಳ ನಿವಾರಣಾ ಮಾತ್ರೆಯನ್ನು ನೀಡುವ ಮೂಲಕ ಚಾಲನೆ ನೀಡಿದರು.
ಆರೋಗ್ಯ ಇಲಾಖೆ ಶಾಲೆಯಲ್ಲಿ ಕಲಿಯುವ ಮಕ್ಕಳ ಆರೋಗ್ಯದ ವಿಚಾರದಲ್ಲಿ ಹೆಚ್ಚು ಕಾಳಜಿಯನ್ನು ವಹಿಸಿತ್ತಿದ್ದು, ಈಗಾಗಲೇ ತಾಲ್ಲೂಕಿನಾದ್ಯಂತ ಹಲವಾರು ಶಾಲೆಗಳಲ್ಲಿ ಜಂತು ರೋಗ ನಿಯಂತ್ರಣ ಮಾತ್ರೆಗಳನ್ನು ವಿತರಣೆ ಮಾಡುತ್ತಿದ್ದಾರೆ. ತಾಲ್ಲೂಕಿನಾದ್ಯಂತ ಒಟ್ಟು 36 ಸಾವಿರ ಮಕ್ಕಳಿಗೆ ಈ ಮಾತ್ರೆ ವಿತರಣೆ ಮಾಡುವ ಯೋಜನೆಯನ್ನು ತಾಲ್ಲೂಕು ಆರೋಗ್ಯ ಇಲಾಖೆ ರೂಪಿಸಿದ್ದು, ಎಲ್ಲಾ ಮಕ್ಕಳು ಈ ಮಾತ್ರೆಯನ್ನು ಪಡೆದು ಜಂತು ಹುಳು ಬಾಧೆಯಿಂದ ಮುಕ್ತರಾಗಲಿ ಎಂದು ಆಶಿಸುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಫೆ.8 ಮತ್ತು 14 ಈ ಉಚಿತ ಮಾತ್ರೆಯನ್ನು ನೀಡಲಾಗುವುದು. ಈ ಮಾತ್ರೆಗಳ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ. ಬದಲಾಗಿ ಹೊಟ್ಟೆಯಲ್ಲಿರುವ ಜಂತು ಹುಳುಗಳು ಸತ್ತು ಹೊರ ಬರುತ್ತವೆ. ಜಂತು ಹುಳುಗಳು ಹೊಟ್ಟೆಯಲ್ಲಿದ್ದರೆ ಮಕ್ಕಳು ವಿಪರೀತ ತೊಂದರೆ ಅನುಭವಿಸುತ್ತಾರೆ. ಆರೋಗ್ಯ ಇಲಾಖೆಯ ಈ ಕಾರ್ಯಕ್ರಮಕ್ಕೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಶಾಲಾ ಶಿಕ್ಷಕರು ಹೆಚ್ಚು ಸಹಕಾರ ನೀಡುವಂತೆ ಮನವಿ ಮಾಡಿದರು.
ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಈ ಮಾತ್ರೆಗಳನ್ನು ವಿತರಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದ್ದು, ನಗರಸಭೆಯೂ ಸಹ ಈ ಕಾರ್ಯಕ್ಕೆ ಸಹಕಾರ ನೀಡಲಿದೆ. ಮಕ್ಕಳ ಆರೋಗ್ಯದ ಬಗ್ಗೆ ನೈಜ್ಯ ಕಾಳಜಿ ಹೊಂದಿರುವ ಈ ಇಲಾಖೆಯ ಕಾರ್ಯವನ್ನು ಎಲ್ಲರು ಸ್ವಾಗತಿಸಬೇಕು. ನಗರಸಭೆ ಆಡಳಿತ ಇಲಾಖೆ ಸಿಬ್ಬಂದಿಗೆ ಅಗತ್ಯವಿರುವ ಕೆಲವೊಂದು ಸೌಲಭ್ಯಗಳನ್ನು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್.ಮಂಜಪ್ಪ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಆರ್.,ಮಾರುತೇಶ್, ಕ್ಷೇತ್ರ ಹಿರಿಯ ಆರೋಗ್ಯಾಧಿಕಾರಿ ಡಿ.ಚಿದಾನಂದಪ್ಪ, ಸಹಾಯಕ ಅಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.