ನಗರದಲ್ಲಿ ಕಾಂಗ್ರೇಸ್ ಪ್ರತಿಭಟನೆ…!!!

ತುಮಕೂರು

      ಹಣ ಹಾಗೂ ಅಧಿಕಾರದ ಆಮಿಷ ತೋರಿಸಿ ಕುದುರೆ ವ್ಯಾಪಾರ ಮಾಡುತ್ತಿರುವ ಬಿಜೆಪಿ ಪಕ್ಷದ ಮುಖಂಡರಿಗೆ ಧಿಕ್ಕಾರ ಎಂದು ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು.

       ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಬಿಜೆಪಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದ ಮೈತ್ರಿ ಸರ್ಕಾರವು ಉತ್ತಮ ಆಡಳಿತ ನೀಡುತ್ತಿದೆ. ಇದನ್ನು ಸಹಿಸಲಾರದ ಬಿಜೆಪಿ ವರಿಷ್ಠರು ಹಾಗೂ ನಾಯಕರು ಆಪರೇಷನ್ ಕಮಲ ಹೆಸರಿನಲ್ಲಿ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದರು.

       ಕಳೆದ 8 ತಿಂಗಳಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದನ್ನು ಸಹಿಸಿಕೊಳ್ಳದ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕರು, ಕಳೆದ ಎರಡು ಮೂರು ತಿಂಗಳಿಂದ ಆಪರೇಷನ್ ಕಮಲ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಯಾರೇ ಕೇಳಿದರೂ ನಾವು ಮಾಡುತ್ತಿಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದಾರೆ. ಈ ಕುರಿತಂತೆ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರು ಪತ್ರಿಕಾಗೋಷ್ಠಿ ಮಾಡಿ ಯಡಿಯೂರಪ್ಪ ನಡೆಸಿದ ಮಾತುಕತೆ ನಡೆಸಿದ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆದರೂ ಇದನ್ನು ಒಪ್ಪದ ಯಡಿಯೂರಪ್ಪನವರು ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದು ಒಳ್ಳೆಯ ನಡೆತೆಯಲ್ಲ. ಅವರು ರಾಜಕೀಯ ನಿವೃತ್ತಿ ಮಾಡಲಿ ಎಂದು ಒತ್ತಾಯಿಸಿದರು.

       ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ದಿನೇಶ್ ಗುಂಡೂರಾವ್ ಅವರನ್ನು ಧರ್ಮದ ಹೆಸರಿನಲ್ಲಿ ಅವಮಾನ ಮಾಡಿದ್ದರು. ಶಾಸಕರಿಗೆ ಹಣ, ಅಧಿಕಾರದ ಆಮಿಷ ತೋರಿಸಿದರು. ಮುಂಬೈನ ಹೋಟೆಲ್‍ನ ಬಿಲ್‍ಗಳನ್ನು ಚುಕ್ತ ಮಾಡಿದವರು ಯಾರು? ಚನ್ನಪಟ್ಟಣದ ಮಾಜಿ ಶಾಸಕ ಯೋಗೀಶ್ವರ್ ಅವರು ಒಂದು ತಿಂಗಳಿನಿಂದ ಮುಂಬೈಗೆ ಓಡಾಡಿದ್ದಾರೆ. ಮಲ್ಲೇಶ್ವರಂನ ಶಾಸಕ ಡಾ.ಅಶ್ವತ್ಥನಾರಾಯಣ ಎಷ್ಟು ಬಾರಿ ಮುಂಬೈಗೆ ಹೋಗಿ ಬಂದಿದ್ದಾರೆ. ಯಾವ ಯಾವ ಶಾಸಕರ ಸಂಪರ್ಕ ಮಾಡಿದ್ದಾರೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ.

       ಇಷ್ಟೆಲ್ಲಾ ಇದ್ದರೂ ಬಿಜೆಪಿಯವರು ನಾವು ಏನೂ ಮಾಡಿಲ್ಲ ಎಂದು ಸುಳ್ಳು ಹೇಳುತ್ತಾ ನುಣುಚಿಕೊಳ್ಳುತ್ತಿದ್ದಾರೆ.ಬಿಜೆಪಿ ಮುಖಂಡರು ಸಭಾಪತಿಗೆ 50 ಕೋಟಿ ಆಫರ್ ಮಾಡಿದ್ದಾರೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರಿಗೆ 100 ಕೋಟಿ ಆಫರ್ ನೀಡ್ತಿದ್ದಾರೆ. ಇದೆಲ್ಲದಕ್ಕೂ ಹಣ ಎಲ್ಲಿಂದ ಬರುತ್ತಿದೆ. ಮೋದಿಯವರು ಹೇಳಿದಂತೆ ಕಪ್ಪುಹಣವನ್ನು ತಂದು ಇವರಿಗೆ ಕೊಡಲಿದ್ದಾರೆಯೇ ಅಥವಾ ಇನ್ನಾವುದೇ ಬೇರೆ ಮೂಲಗಳಿಂದ ಹಣ ಪಡೆಯುತ್ತಿದ್ದಾರೆಯೇ ಎಂಬುದು ತಿಳಿಯುತ್ತಿಲ್ಲ.

       ಅಲ್ಲದೆ ನ್ಯಾಯಾಧೀಶರನ್ನೇ ಕೊಂಡುಕೊಂಡಿದ್ದೇವೆ ಎಂದೆಲ್ಲಾ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ವಿರೋಧ ಪಕ್ಷದ ಕರ್ತವ್ಯ, ನೈತಿಕತೆಯಿಂದ ಬಜೆಟ್ ಮಂಡನೆ ಮಾಡುವಾಗ ಭಾಗವಹಿಸಬೇಕಿತ್ತು. ಆದರೆ ದಾಖಲಾತಿಗಳು ನೀಡಿಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿ ಹೋಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರು.

         ಅಧಿಕಾರ ನಡೆಸುತ್ತಿರುವ ಪಕ್ಷವನ್ನು ಅಸ್ಥಿರಗೊಳಿಸುವುದಕ್ಕೆ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ರಚನೆ ಮಾಡಲು ಆಗದಿದ್ದಾಗ ಕೈ ಕಟ್ಟಿಕೊಂಡು ಸುಮ್ಮನಿರುವುದರ ಬದಲಿಗೆ ನೀಚ ಕೆಲಸಕ್ಕೆ ಇಳಿಯುವುದು ಸಮಂಜಸವಲ್ಲ. ಬದಲಿಗೆ ವಿರೋಧ ಪಕ್ಷದ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪನವರು ರಾಜಿನಾಮೆ ನೀಡಿದರೆ ಒಳ್ಳೆಯದು. ಶಾಸಕರಿಗೆ 50, 100 ಕೋಟಿ ನೀಡುವುದಾಗಿ ಆಮಿಷ ಒಡ್ಡುವುದು ಖಂಡನೀಯ. ಇಂತಹ ಕೃತ್ಯಗಳನ್ನು ಮಾಡಿರುವುದಲ್ಲದೆ ನಾವು ಮಾಡಿಲ್ಲ ಎಂದು ಹೇಳಿಕೊಳ್ಳುವುದರಿಂದ ಸತ್ಯ ಸುಳ್ಳಾಗದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದರು.

          ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಬಿ.ಕೆಂಚಮಾರಯ್ಯ, ಮುಷ್ತಾಕ್ ಅಹಮ್ಮದ್, ನಯಾಜ್ ಅಹಮ್ಮದ್ ಸೇರಿದಂತೆ ಯುವ ಘಟಕದ ಪದಾಧಿಕಾರಿಗಳು, ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು, ಮಹಿಳಾ ಘಟಕದವರು, ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದು ಬಿಜೆಪಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap