ಮಹಿಳೆಯರು ಸಮಾಜಮುಖಿಯಾಗಲಿ : ಶಾಸಕ ಜ್ಯೋತಿಗಣೇಶ್ ಆಶಯ

ತುಮಕೂರು

      ನಗರದ ಬಾಲಭವನ ಆವರಣದಲ್ಲಿ ಶನಿವಾರ ಮಹಿಳೆಯರ ಕಲರವ. ವಿವಿಧ ವೇಷ ಭೂಷಣ ತೊಟ್ಟ ಮಹಿಳೆಯರು ಕಲಾಪ್ರದರ್ಶನ ನೀಡಿ ರಂಜಿಸಿದರು. ಗೀತೆ ಗಾಯನ ನೃತ್ಯದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು.

       ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಡೆದ ಮಹಿಳಾ ಸಾಂಸ್ಕತಿಕ ಉತ್ಸವದಲ್ಲಿ ಹಬ್ಬದ ಸಂಭ್ರಮ ಮೆರೆದಿತ್ತು.ಶಾಸಕ ಜಿ ಬಿ ಜ್ಯೋತಿಗಣೇಶ್ ಕಾರ್ಯಕ್ರಮ ಉದ್ಘಾಟಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ಪುರುಷ ಪ್ರಧಾನ ಸಮಾಜವೆಂಬುದು ಸಮಾನತೆಯತ್ತ ಬದಲಾಗುತ್ತಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಅರ್ಹತೆ, ಸಾಮಥ್ರ್ಯದ ಮೂಲಕ ಸಾಧನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಅನೇಕ ಮಹಿಳೆಯರು ಉನ್ನತ ಸ್ಥಾನ ನಿಭಾಯಿಸುತ್ತಿದ್ದಾರೆ, ದೊಡ್ಡ ದೊಡ್ಡ ಉದ್ದಿಮೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಎಂದರು.

       ಆದರೂ ಕೆಲವು ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಶಿಕ್ಷಣ, ಸ್ವಾವಲಂಬನೆಯಿಂದ ವಂಚಿತರಾಗುತ್ತಿದ್ದಾರೆ. ಎಲ್ಲಾ ಹೆಣ್ಣುಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬಂದು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು ಎಂದು ಶಾಸಕರು ಕರೆ ನೀಡಿದರು.

         ಮಹಿಳೆಯರು ತಮ್ಮ ಹಕ್ಕು ಏನೆಂದು ತಿಳಿಯಬೇಕು ಸಕಾರದ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಸಶಕ್ತರಾಗಬೇಕು, ಸಬಲೀಕರಣಗೊಂಡು ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜ ಬದಲಾವಣೆಗೆ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ನಗರಪಾಲಿಕೆ ಮೇಯರ್ ಲಲಿತಾರವೀಶ್, ಎಷ್ಟೇ ನಿಯಂತ್ರಣಾ ಕ್ರಮ ತೆಗೆದುಕೊಂಡರೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು,

        ಉಪಮೇಯರ್ ರೂಪಶ್ರೀ, ಸಿನಿಮಾ, ಟಿವಿಗಳ ಅಬ್ಬರದಲ್ಲಿ ಕೊಚ್ಚಿಹೋಗುತ್ತಿರುವ ನಮ್ಮ ಕಲೆ ಸಂಸ್ಕøತಿಯನ್ನು ಮಹಿಳೆಯರು ಉಳಿಸಿ ಬೆಳೆಸಬೇಕು ಎಂದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ, ನಮ್ಮಲ್ಲಿ ಮಹಿಳೆಗೆ ಪೂಜ್ಯ ಸ್ಥಾನ ನೀಡಲಾಗಿದೆ ಅದಕ್ಕೆ ಪೂರಕವಾಗಿ ಮಹಿಳೆಯು ತಮ್ಮ ಸ್ಥಾನ ಮಾನ ಕಾಪಾಡುವ ಜೊತೆಗೆ ಸಮಾಜಮುಖಿಯಾಗಿ ಸಮಾಜದ ಅಭಿವೃದ್ದಿಗೆ ಸಹಕರಿಸಬೇಕು ಎಂದರು.

        ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ ಹ ರಮಾಕುಮಾರಿ, ಮಹಿಳೆಯರು ಒಂದುಗೂಡಿದರೆ ಪ್ರಬಲ ಶಕ್ತಿಯಾಗಿ ಗಟ್ಟಿಗೊಳ್ಳಬಹುದು ಎಂದರು.

       ಮನೆ ಮಕ್ಕಳು, ಒಡವೆ ಬಟ್ಟೆಗೂ ಮೀರಿ ಹೆಣ್ಣು ಮಕ್ಕಳು ಚಿಂತನೆ ಮಾಡಬೇಕು. ಹೆಚ್ಚು ಹೆಚ್ಚು ಓದುವ ಮೂಲಕ ಜ್ಞಾನ ಬೆಳೆಸಿಕೊಂಡು ಸಾಮಾಜಿಕ ಜಾಗೃತಿ ಮೂಡಿಸಿಕೊಳ್ಳಬೇಕು, ಸಮಾಜಮುಖಿ ಆಲೋಚನೆ ಬೆಳೆಸಿಕೊಂಡು ಉನ್ನತ ಸ್ಥಾನ ಪಡೆದು ಸಾರ್ಥಕ ಹೆಜ್ಜೆ ಗುರುತು ಮೂಡಿಸಬೇಕು ಎಂದು ಕರೆ ನೀಡಿದರು.ನಗರಪಾಲಿಕೆ ಸದಸ್ಯೆ ಚಂದ್ರಕಲಾ, ಧರ್ಮಸ್ಥಳ ಸಂಸ್ಥೆಯ ಸಂಚಾಲಕ ಚನ್ನಕೇಶವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜು, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಅಪಿನಕಟ್ಟೆ, ಪತ್ರಕರ್ತ ಉಗಮ ಶ್ರೀನಿವಾಸ್ ಮೊದಲಾದವರು ಭಾಗವಹಿಸಿದ್ದರು.

       ನಂತರ ಜಲ್ಲಾ ಕಸಾಪ ಅಧ್ಯಕ್ಷೆ ಬಾ ಹ ರಮಾಕುಮಾರಿ ಅಧ್ಯಕ್ಷತೆಯಲ್ಲಿ ವಿಚಾರ ಗೋಷ್ಠಿ ನಡೆಯಿತು. ಮಹಿಳಾ ಸಬಲೀಕರಣ ಮತ್ತು ಮೂಢನಂಬಿಕೆ ಕುರಿತು ಸಾಮಾಜಿಕ ಕಾರ್ಯಕರ್ತೆ ಕೆ ಆರ್ ಸೌಮ್ಯ, ಮಹಿಳಾ ಅಭಿವೃದ್ಧಿಗೆ ಸರ್ಕಾರದ ಸೌಲಭ್ಯಗಳು ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅಂಬಿಕಾ ವಿಚಾರ ಮಂಡಿಸಿದರು.ಸಂಜೆ ಉಪನ್ಯಾಸಕಿ ಡಾ. ಗೀತಾ ವಸಂತ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಏರ್ಪಾಟಾಗಿತ್ತು. ಜಿಲ್ಲೆಯ ಹಲವು ಕವಯತ್ರಿಯರು ತಮ್ಮ ಕವನ ವಾಚನ ಮಾಡಿದರು.

          ಮಹಿಳಾ ಸಾಂಸ್ಕತಿಕ ಉತ್ಸವದ ಅಂಗವಾಗಿ ವಿವಿಧ ಮಹಿಳಾ ತಂಡಗಳಿಂದ ಭಜನೆ, ನೃತ್ಯ, ರಂಗಗೀತೆ, ಭಾವಗೀತೆ, ಜಾನಪದಗೀತೆ, ಭರತನಾಟ್ಯ, ಕೋಲಾಟ, ಲಂಬಾಣಿ ನೃತ್ಯ, ನಾಟಕ, ಸೋಬಾನೆ ಪದ ಮುಂತಾದ ಕಲಾ ಪ್ರದರ್ಶ ನಡೆದವು.
ಕಾರ್ಯಕ್ರಮಕ್ಕೆ ಮೊದಲು ಬಿಜಿಎಸ್ ವೃತ್ತದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನ ಮೆರವಣಿಗೆಯ ಸಂಭ್ರಮ ಹೆಚ್ಚಿಸಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap