ಚಿತ್ರದುರ್ಗ:
ಬೇಸಿಗೆಯಲ್ಲಿ ರಕ್ತದೊತ್ತಡ ಕಡಿಮೆಯಾಗಿ ಚಳಿಗಾಲದಲ್ಲಿ ಜಾಸ್ತಿಯಾಗುತ್ತದೆ. ಅದಕ್ಕಾಗಿ ವಾರಕ್ಕೊಮ್ಮೆಯಾದರೂ ರಕ್ತದೊತ್ತಡವನ್ನು ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕೆಂದು ಮಾಸ್ಟರ್ ಇನ್ ಪಿಸಿಯೋಥೆರಪಿ ಬೀದರ್ ಜಿಲ್ಲೆ ಸ್ಕೌಟ್ಸ್ ಮಾಜಿ ಕಮೀಷನರ್ ಡಾ.ಹನುಮಂತ ಭಾರತಿಶೆಟ್ಟಿ ವೃದ್ದರಿಗೆ ಸಲಹೆ ನೀಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವೃದ್ದಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಆಧ್ಯಾತ್ಮಿಕ ಶಕ್ತಿಯಿಂದ ಆನಂದಮಯ ಸುಖಿ ವೃದ್ದ ಜೀವನಕ್ಕೆ ಸತ್ಪ್ರೇರಣೆ ವಿಷಯ ಕುರಿತು ಉಪನ್ಯಾಸ ನೀಡಿದರು.
ವಯೋವೃದ್ದರು ಹಂತ ಹಂತವಾಗಿ ವ್ಯಾಯಾಮ ಮಾಡುವ ಮೂಲಕ ಶರೀರವನ್ನು ಸರಿಯಾಗಿಟ್ಟುಕೊಳ್ಳಬೇಕು. ಮೊದಲು ನಮ್ಮನ್ನು ನಾವು ಬದಲಾವಣೆ ಮಾಡಿಕೊಂಡಾಗ ಕುಟುಂಬ ಸಮಾಜ ಪರಿವರ್ತನೆಯಾಗುತ್ತದೆ ಎಂದರು
ದೇಹದಲ್ಲಿರುವ ಎಲುಬು, ಕೀಲು, ಮಾಂಸಖಂಡಗಳಿಗೆ ಸ್ವಲ್ಪವಾದರೂ ಕೆಲಸ ಕೊಡಬೇಕು. ನೀರಿನ ಪ್ರಮಾಣವನ್ನು ಶರೀರದಲ್ಲಿ ಇಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ಅರ್ಧ ಲೀಟರ್ ನೀರು ಹೆಚ್ಚಿಗೆ ಕುಡಿಯಬೇಕು. ಊಟಕ್ಕೆ ಮೊದಲು ಐವತ್ತು ಎಂ.ಎಲ್.ನೀರು ಕುಡಿದರೆ ಒಳ್ಳೆಯದು.
ಶ್ವಾಸಕೋಶದ ಆರೋಗ್ಯ ಪ್ರತಿಯೊಬ್ಬರಿಗೂ ಮುಖ್ಯ. ಆಳ ಉಸಿರು ತೆಗೆದುಕೊಂಡು ಆಳವಾಗಿ ಉಸಿರು ಬಿಡಬೇಕು. ಉಬ್ಬಸ ರೋಗದಿಂದ ಬಹಳ ಜನ ಸಾಯುತ್ತಿದ್ದಾರೆ. ಹೃದಯ ಆರೋಗ್ಯ ವೃದ್ದಾಪ್ಯದಲ್ಲಿ ಕಡಿಮೆಯಾಗುತ್ತದೆ. ಊಟದಲ್ಲಿ ದಿನಕ್ಕೆ ಮೂರು ಬಟ್ಟಲು ಹಣ್ಣು ಸೇವಿಸಿದರೆ ನಾರಿನಾಂಶ ದೇಹಕ್ಕೆ ಸಿಗುತ್ತದೆ. ಪೌಷ್ಟಿಕಾಂಶವು ದೇಹಕ್ಕೆ ಅತ್ಯವಶ್ಯಕ ಎಂದು ಹೇಳಿದರು.
ಗ್ಲೋಬಲ್ ಹಾಸ್ಪಿಟಲ್‍ನ ಹೃದ್ರೋಗ ಚಿಕಿತ್ಸಕರು ಹಾಗೂ ರಿಸರ್ಚ್ ಸೆಂಟರ್ ಮೌಂಟ್ ಅಬೂ ರಾಜಸ್ಥಾನದ ಡಾ.ಮಹೇಶ್ ಹೇಮಾದ್ರಿ ಉಪನ್ಯಾಸ ನೀಡುತ್ತ ಶರೀರ ಸದೃಢವಾಗಿರಲು ಕೀಲು ಮತ್ತು ಮಾಂಸ ಖಂಡಗಳನ್ನು ಹಿಗ್ಗಿಸುವ ವ್ಯಾಯಾಮ ಮನುಷ್ಯನಿಗೆ ಬೇಕು. ದೇಹದಲ್ಲಿನ ಪ್ರತಿಯೊಂದು ಮಾಂಸ ಖಂಡ ಕೀಲುಗಳಿಗೆ ದಿನಕ್ಕೆ ಕನಿಷ್ಟ ಒಂದು ಗಂಟೆಯಾದರೂ ವ್ಯಾಯಾಮ ಮಾಡಬೇಕು.
ವಯೋವೃದ್ದರು ಒಂದು ತಿಂಗಳು ಹತ್ತು ನಿಮಿಷ, ಎರಡನೇ ತಿಂಗಳು ಇಪ್ಪತ್ತು ನಿಮಿಷ ಹೀಗೆ ಆರು ತಿಂಗಳವರೆಗೆ ದಿನಕ್ಕೆ ಹತ್ತತ್ತು ನಿಮಿಷ ವ್ಯಾಯಾಮವನ್ನು ಹೆಚ್ಚಿಸುತ್ತಾ ಹೋಗಬೇಕು. ಒಂದೆ ಬಾರಿಗೆ ಒಂದು ಗಂಟೆಗಳ ವ್ಯಾಯಾಮ ಮಾಡುವುದು ಕಷ್ಟವೆನಿಸುತ್ತದೆ ಎಂದರು.
ಲೋಬಿಪಿ, ತಲೆಸುತ್ತು ಇರುವವರು, ಬೆನ್ನುಹುರಿ ನೋವುಳ್ಳವರು, ಎದೆನೋವು ಇರುವವರು ವ್ಯಾಯಾಮ ಮಾಡಬಾರದು. ಕೀಲು ಮಾಂಸ ಖಂಡಗಳಿಗೆ ವ್ಯಾಯಾಮವೇ ಆಹಾರ ಎಂದು ವಯೋವೃದ್ದರಿಗೆ ತಿಳಿಸಿದರು.
ಈಶ್ವರೀಯ ವಿಶ್ವವಿದ್ಯಾಲಯದ ರಶ್ಮಿಅಕ್ಕ, ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ವೈಶಾಲಿ, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಂಕರಪ್ಪ, ನಿವೃತ್ತ ಡಿ.ವೈ.ಎಸ್ಪಿ. ಆಂಜನೇಯ, ಮಲ್ಲಿಕಾರ್ಜುನಾಚಾರ್ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
