ದೇಶದ ಒಳಿತಿಗಾಗಿ ಮೋದಿ ನಾಯಕತ್ವ ಬೇಕು

ಚಿತ್ರದುರ್ಗ;

       ಪ್ರಸ್ತುತ ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಅವರು ದೇಶಕ್ಕೆ ಉತ್ತಮ ಆಡಳಿತ ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ದೇಶವನ್ನು ಸಾಕಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ನೂರಾರು ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ. ಇಂತಹ ನಾಯಕನನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲು ಕೆಲವರು ಹುನ್ನಾರ ನಡೆಸಿದ್ದಾರೆ.

      ಈ ಕುರಿತು ದೇಶದ ಜನರು ಎಚ್ಚೆತ್ತುಕೊಳ್ಳಬೇಕೆಂದು ಬೆಂಗಳೂರಿನ ಲಕ್ಷ್ಯಂ – 2019 ರಾಜ್ಯ ಸಂಚಾಲಕರಾದ ಲತಾ ನರಸಿಂಹಮೂರ್ತಿ ಸಲಹೆ ಮಾಡಿದರು. ಚಿತ್ರದುರ್ಗ ಸಮಗ್ರ ವಿಕಾಸ ಟ್ರಸ್ಟ್ ಹಾಗೂ ಬೆಂಗಳೂರಿನ ಲಕ್ಷ್ಯಂ – 2019 ಇವರ ಸಂಯುಕ್ತಾಶ್ರಯದಲ್ಲಿ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇಶಕ್ಕಾಗಿ ನಾಮ ಜಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

      ನಮ್ಮ ದೇಶಕ್ಕೆ ಉತ್ತಮ ನಾಯಕತ್ವ ಬೇಕಿದೆ. ಅಂತಹ ನಾಯಕತ್ವ ಪ್ರಧಾನಿ ನರೇಂದ್ರ ಮೋದಿಯಿಂದ ದೊರೆತಿದ್ದು, ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕಿದೆ ನಮ್ಮ ದೇಶದ ಪುಣ್ಯ ನದಿಗಳಲ್ಲಿ ಒಂದಾದ ಗಂಗಾನದಿ ಸಾಕಷ್ಟು ಕಲುಷಿತಗೊಂಡಿತ್ತು. ಅದನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ನಮಾಮಿ ಗಂಗೆ ಕಾರ್ಯಕ್ರಮ ಜಾರಿ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು ಅನೇಕ ದಶಕಗಳು ಕಳೆದರೂ ಮಹಿಳೆಯರು ಬಯಲು ಶೌಚಾಲಯಕ್ಕೆ ಹೋಗಬೇಕಿತ್ತು.

     ಅವರ ಮಾನ ರಕ್ಷಣೆಗೆ ಈ ಹಿಂದಿನ ಯಾವುದೇ ಸರ್ಕಾರಗಳು ಚಿಂತನೆ ನಡೆಸಲಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡ ನರೇಂದ್ರ ಮೋದಿ ದೇಶವನ್ನು ಬಯಲುಮುಕ್ತ ಶೌಚಾಲಯ ಮಾಡುವಲ್ಲಿ ಶ್ರಮಿಸಿದರು ಎಂದರು.

     ಇಷ್ಟು ವರ್ಷಗಳ ಕಾಲ ಯಾವುದೇ ಸರ್ಕಾರ ಮಹಿಳೆಯರ ಪರಿಸ್ಥಿತಿಯ ಬಗ್ಗೆ ಗಂಭೀರ ಚಿಂತನೆ ನಡೆಸಿರಲಿಲ್ಲ. ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮ ಜಾರಿಗೊಳಿಸಿದರು. ಹೆಣ್ಣಮಕ್ಕಳು, ಮಹಿಳೆಯರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಇಂತಹ ಮಹಾನ್ ನಾಯಕನನ್ನು ಯಾವುದೇ ಕಾರಣಕ್ಕೂ ಸೋಲಲು ಬಿಡಬಾರದು. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕೆಂದು ಕರೆ ನೀಡಿದರು.

      ದೇಶಕ್ಕಾಗಿ ನಾಮ ಜಪ ಕಾರ್ಯಕ್ರಮವನ್ನು ನಾಡಿನ ವಿವಿಧೆಡೆಗಳಲ್ಲಿ ನಡೆಸಲಾಗುತ್ತಿದೆ. ಗುಲ್ಬರ್ಗ, ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ನಾನಾ ಕಡೆಗಳಲ್ಲಿ ನಡೆಸಲಾಗಿದೆ. ಆರಂಭದಲ್ಲಿ ಕಾರ್ಯಕ್ರಮಕ್ಕೆ ಜನರು ಬರುವ ಕುರಿತು ಆತಂಕವಿತ್ತು. ಈಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸುತ್ತಿದ್ದಾರೆ. ಯಾವುದಾದರೂ ಕೆಲಸಕ್ಕೆ ಮನೆ ಬಿಟ್ಟು ಹೊರಗೆ ಬಾರದ ಹೆಣ್ಣುಮಕ್ಕಳು ದೇಶಕ್ಕಾಗಿ ನಾಮ ಜಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲ ಕೆಲಸಗಳನ್ನು ಬದಿಗೊತ್ತಿ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ಈ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಹಾಗಾಗಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸೇರಿಕೊಂಡು ಒಂದಷ್ಟು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ 8880996996 ಸಂಖ್ಯೆಗೆ ಮಿಸ್‍ಕಾಲ್ ನೀಡಬೇಕು. ಆ ಮೂಲಕ ಹೆಚ್ಚಿನ ಸಂಖ್ಯೆಯ ಜನರನ್ನು ಈ ಕಾರ್ಯಕ್ರಮಕ್ಕೆ ಜೋಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಚಿತ್ರದುರ್ಗ ಸಮಗ್ರ ವಿಕಾಸ ಟ್ರಸ್ಟ್ ಮುಖ್ಯಸ್ಥೆ ಸುಜಯ ಶಿವಪ್ರಕಾಶ್, ಶಶಿರೇಖಾ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ದಗ್ಗೆ ಶಿವಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ನಗರಸಭೆ ಸದಸ್ಯ ಹರೀಶ್ ಸ್ವಾಗತಿಸಿದರು. ನಾಗರಾಜ್ ಬೇದ್ರೆ ಕಾರ್ಯಕ್ರಮ ನಿರೂಪಿಸಿದರು.

        ಅರ್ಚಕರ ಸಂಘದ ಅಧ್ಯಕ್ಷ ರಮೇಶ್, ಶ್ರೀರಾಮ ಜಯ ರಾಮ, ಜಯ ಜಯ ರಾಮ ಗಾಯನ ಹಾಗೂ ಕೆಲವು ಶ್ಲೋಕಗಳನ್ನು ಹೇಳಿಕೊಡುವ ಮೂಲಕ ಸಂಕಲ್ಪ ನೆರವೇರಿಸಿದರು. ದೇಶಕ್ಕಾಗಿ ನಾಮ ಜಪ ಕಾರ್ಯಕ್ರಮದಲ್ಲಿ ವಾಸವಿ ಭಜನಾ ಮಂಡಳಿ, ಹರಿವಾಯು ಭಜನಾ ಮಂಡಳಿ, ಬ್ರಹ್ಮ ಚೈತನ್ಯ ಭಜನಾ ಮಂಡಳಿ, ಸರಸ್ವತಿ ಭಜನಾ ಮಂಡಳಿ, ಶಂಖರಲಿಂಗ ಭಜನಾ ಮಂಡಳಿ, ವಿಶ್ವಕರ್ಮ ಮಹಿಳಾ ಮಂಡಳಿ, ವೀರಶೈವ ಮಹಿಳಾ ಮಂಡಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap