ತಿಪಟೂರು :
ತಾಲ್ಲೂಕಿನಾದ್ಯಂತ ಇರುವಂತಹ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ತಾಲ್ಲೂಕು ಪಂಚಾಯತಿ ಕಛೇರಿಯಲ್ಲಿ ಸಹಾಯವಾಣಿ ಕೇಂದ್ರ (ಹೆಲ್ಪ್ಲೈನ್ ಕೇಂದ್ರ)ವನ್ನು ತೆರೆಯಲಾಗಿದೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಮದನ್ ಮೋಹನ್ ತಿಳಿಸಿದರು.
ನಗರದ ತಾಲ್ಲೂಕು ಕಛೇರಿಯ ಆವರಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಹಾಯವಾಣಿ ಕೇಂದ್ರ (ಹೆಲ್ಪ್ಲೈನ್ ಕೇಂದ್ರ)ವನ್ನು ಪ್ರತ್ಯೇಕ ಕೊಠಡಿಯಲ್ಲಿ, ಪ್ರತ್ಯೇಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ತಾಲ್ಲೂಕಿನ ಯಾವುದೇ ಕ್ಷೇತ್ರಗಳಿಂದ ಸಮಸ್ಯೆಗಳನ್ನು ತಿಳಿಸಿದರೇ ಕೂಡಲೇ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸಹಾಯವಾಣಿಯ ಸಂಖ್ಯೆಗೆ 08134-251095ಗೆ ಕರೆಮಾಡುವಂತೆ ಕೋರಿದರು. ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳು ವಿಫಲಗೊಂಡ ಗ್ರಾಮಗಳು ಕಂಡುಬಂದರೆ ತಾ.ಪಂ.ಅಧಿಕಾರಿಗಳ ತಂಡ ರಚಿಸಿ ಸ್ಥಳ ಪರಿಶೀಲನೆ ನಡೆಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕುಡಿಯುವ ನೀರಿನ ಆಹಾಕಾರ ಎದುರಿಸುತ್ತಿರುವ 8 ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ತಹಶೀಲ್ದಾರ್ ಆರತಿ ಮಾತನಾಡಿ ಬರ ನಿರ್ವಹಣೆಯನ್ನು ಎದುರಿಸಲು ತಾಲ್ಲೂಕು ಆಡಳಿತ ಸಿದ್ಧವಾಗಿದ್ದು ಸದ್ಯ ಹೊನ್ನವಳ್ಳಿ, ಕಸಬಾ ಹೋಬಳಿಗಳಲ್ಲಿ ಮುಂದಿನ ದಿನಗಳಲ್ಲಿ ಬರ ಎದುರಾಗುವ ಸಾಧ್ಯತೆಯಿದ್ದು ಮುಂಜಾಗ್ರತೆಯನ್ನು ವಹಿಸಲು ಸಿದ್ಧವಿದ್ದು ಜನ ಜಾನುವಾರುಗಳ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಬ್ಯಾಂಕ್ ತೆರೆಯುವ ಮುಖಾಂತರ ಸಮಸ್ಯೆ ಉಂಟಾಗದಂತೆ ಚಿಂತಿಸಲಾಗಿದೆ. ಮತದಾರರ ಪಟ್ಟಿಯಲ್ಲಿನ ಮತದಾರರ ಗುರುತಿನ ಚೀಟಿಗಳಲ್ಲಿ ಲೋಪದೋಷಗಳೇನಾದರೂ ಇದ್ದರೆ ತಾಲ್ಲೂಕು ಕಛೇರಿಯ ಚುನಾವಣೆ ಶಾಖೆಯಲ್ಲಿ ತಿದ್ದುಪಡಿ ಮಾಡಿಸಿಕೊಳ್ಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ ರಾಜೇಂದ್ರ, ಬೆಸ್ಕಾಂ ಎಇಇ ಜಯಪ್ಪ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ