ಪ್ರಕಾಶ್ ರೈ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸದಂತೆ ಮನವಿ

ದಾವಣಗೆರೆ:

       ಬರುವ ಲೋಕಸಭಾ ಚುನಾವಣೆಯಲ್ಲಿ ಬಹುಭಾಷಾ ನಟ, ಪ್ರಗತಿಪರ ಚಿಂತಕ ಪ್ರಕಾಶ್ ರೈ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಇವರ ವಿರುದ್ಧ ಯಾವುದೇ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಬೆಂಬಲಿಸಬೇಕೆಂದು ದೇಶಕ್ಕಾಗಿ ನಾವು ಬಳಗದ ರಾಜ್ಯ ಸಂಚಾಲಕ ಅನೀಸ್ ಪಾಷ ಮನವಿ ಮಾಡಿದರು.

        ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕಾಶ್ ರೈ ಅವರು ಕೇವಲ ಪ್ರತಿಭಾವಂತ ಕಲಾವಿದರಷ್ಟೇಯಲ್ಲ. ನಾಡು, ನುಡಿ ಮತ್ತು ಜನಸಾಮಾನ್ಯರ ಕುರಿತು ಅಪಾರ ಕಾಳಜಿ ಹೊಂದಿರುವ ಸಂವೇದನಾಶೀಲ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಇವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಯಾವ ಪಕ್ಷಗಳು ಸಹ ಅಭ್ಯರ್ಥಿಗಳನ್ನು ಹಾಕದೇ, ರೈ ಅವರನ್ನು ಬೆಂಬಲಿಸಬೇಕೆಂದು ಹೇಳಿದರು.

         ಲೋಕಸಭೆಯಲ್ಲಿ ಪ್ರಜ್ಞಾವಂತ, ವಿಚಾರವಂತರು ಇರಬೇಕೆಂಬ ಉದ್ದೇಶದಿಂದ ಪ್ರಕಾಶ್ ರೈ ಅವರನ್ನು ಬೆಂಬಲಿಸುತ್ತಿದ್ದೇವೆ. ಇವರನ್ನು ಗೆಲ್ಲಿಸಲಿಕ್ಕಾಗಿ ಸುಮಾರು 200 ಸಂಘಟನೆಗಳು ಮತ್ತು 400ಕ್ಕೂ ಹೆಚ್ಚು ಲೇಖಕರು ಸೇರಿಕೊಂಡು ದೇಶಕ್ಕಾಗಿ ನಾವು ಎಂಬ ಗೆಳೆಯರ ಬಳಗ ರಚಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

         ಪ್ರಕಾಶ್ ರೈ ಈಗಾಗಲೇ ವೃತ್ತಿ ಬದುಕಿನ ಜತೆಗೆ ಸಾಮಾಜಿಕ ಜವಾಬ್ದಾರಿ ಹೊತ್ತಿದ್ದಾರೆ. ಅನೇಕ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಲಕ್ಷಿತ ಸಮುದಾಯದ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಪ್ರಜಾತಂತ್ರದ ಆಶಯ ಎತ್ತಿ ಹಿಡಿದು ಜನರಲ್ಲಿ ಎಚ್ಚರ ಮೂಡಿಸಲು ರಾಜ್ಯಾದ್ಯಂತ ಸಮಾವೇಶಗಳ ಮೂಲಕ ಪ್ರಯತ್ನಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಬೆಂಬಲಿಸುವ ಸಲುವಾಗಿ ಇತರೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಬಾರದು ಎಂದು ಮನವಿ ಮಾಡಿದರು.

        ರಾಜಕಾರಣ ಇಂದು ಜಾತಿ, ಹಣ, ಹೆಂಡ, ಧರ್ಮಗಳಿಂದ ಕೂಡಿದೆ. ಬಂಡವಾಳಿಗರಿಗೆ ರಕ್ಷಣೆ ದೊರಕುತ್ತಿದೆ. ಸ್ವಾರ್ಥ ಹಿತಾಸಕ್ತಿ, ಅಧಿಕಾರ ರಾಜಕಾರಣ, ಹಪಾಹಪಿತನ ಇವೆಲ್ಲವನ್ನು ಮೀರಿದ ರಾಜಕಾರಣ ಬೇಕಾಗಿದೆ. ಪ್ರಜಾಪ್ರಭುತ್ವ ರಕ್ಷಣೆಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ರೈ ಅವರಂತ ಸದಾಶಯವುಳ್ಳ ವ್ಯಕ್ತಿಗಳನ್ನು ಗೆಲ್ಲಿಸುವುದು ಅತ್ಯಂತ ಅವಶ್ಯ ಹಾಗೂ ಅನಿವಾರ್ಯವೂ ಆಗಿದೆ ಎಂದು ಹೇಳಿದರು.

       ಸುದ್ದಿಗೋಷ್ಠಿಯಲ್ಲಿ ಬಳಗದ ಇಸ್ಮಾಯಿಲ್ ದೊಡ್ಡಮನಿ, ವಿಜಯಕುಮಾರ್, ಮೌಲಾ ನಾಯ್ಕ, ಅಬ್ದುಲ್ ಸಮದ್, ಎಸ್.ಕೆ.ಆದಿಲ್ ಖಾನ್, ಸತೀಶ್ ಅರವಿಂದ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link