ಭಾವೈಕ್ಯತೆ ಬೆಸೆಯುವ ಸಾಮೂಹಿಕ ವಿವಾಹ

ದಾವಣಗೆರೆ:

      ಹಿಂದೆ ಅಲಕ್ಷಿತ ಸಮುದಾಯಗಳಿಗೆ ಸೀಮಿತವಾಗಿದ್ದ, ಸಾಮೂಹಿಕ ಕಲ್ಯಾಣ ಮಹೋತ್ಸವವು ಜಾತಿ, ಜಾತಿಗಳ ಮಧ್ಯೆ ಭಾವೈಕ್ಯತೆ ಬೆಸೆಯುವ ವೇದಿಕೆಯಾಗಿ ಪರಿವರ್ತನೆಯಾಗಿದೆ ಎಂದು ಚಿತ್ರದುರ್ಗ ಮಾದಾರ ಗುರುಪೀಠದ ಶ್ರೀಬಸವ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

        ನಗರದ ಹದಡಿ ರಸ್ತೆಯಲ್ಲಿರುವ ಮಾಗನೂರು ಬಸಪ್ಪ ಕಾಂಪೌಂಡ್‍ನಲ್ಲಿ ಭಾನುವಾರ ಭೀಮಸಮುದ್ರದ ಜಿ. ಮಲ್ಲಿಕಾರ್ಜುನಪ್ಪ ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸುಮಾರು ಮೂರು ದಶಕಗಳ ಹಿಂದೆ ಸಾಮೂಹಿಕ ಕಲ್ಯಾಣ ಮಹೋತ್ಸವವು ಕೇವಲ ಅಲಕ್ಷಿತ ಮತ್ತು ನಿರ್ಲಕ್ಷಿತ ಸಮುದಾಯಗಳಿಗೆ ಮಾತ್ರ ವೇದಿಕೆಯಾಗಿತ್ತು. ಆದರೆ, ಇದು ಕಾಲಕ್ರಮೇಣ ಇಂದು ಜಾತಿ-ಜಾತಿಗಳ ಮಧ್ಯೆ ಭಾವೈಕ್ಯತೆ ಬೆಳೆಸುವ ವೇದಿಕೆಯಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

       ಹಿಂದೆ ಆರ್ಥಿಕ ಸ್ಥಿತಿವಂತರಲ್ಲದ ಜನರು ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಆದರೆ, ಈಗ ಯಾವುದೇ ಮಥ-ಪಂಥಗಳಿಗೆ ಸೀಮಿತವಾಗದೇ ಸಾಮೂಹಿಕ ವಿವಾಹಗಳು ನಡೆಯುತ್ತಿವೆ. ಇಂಥ ಕಲ್ಯಾಣ ಮಹೋತ್ಸವಕ್ಕೆ ಹೊಸ ರೂಪ ಕೊಟ್ಟು ಜನಪ್ರಿಯಗೊಳಿಸಿದ ಕೀರ್ತಿ ಶ್ರೀಧರ್ಮಸ್ಥಳ ಸಂಸ್ಥೆಗೆ ಸಲ್ಲಲಿದೆ. ಈಗ ಮಠಮಾನ್ಯಗಳು ಈ ಕಾರ್ಯಕ್ರಮಗಳನ್ನು ಮುಂದುರೆಸಿಕೊಂಡು ಹೋಗುತ್ತಿವೆ ಎಂದರು.

      ಸಾಮೂಹಿಕ ಕಲ್ಯಾಣ ಮಹೋತ್ಸವ ಆರ್ಥಿಕವಾಗಿ ಹಿಂದುಳಿದ ಜನರಿಗೆ ತುಂಬಾ ಅನುಕೂಲಕರವಾಗಿವೆ ಎಂದ ಅವರು, ಗಳಿಸಿದ ಸಂಪತ್ತು ಕೃಢೀಕರಣ ಆಗಬಾರದು. ಬದಲಿಗೆ ಸದ್ವಿನಿಯೋಗವಾಗಬೇಕು. ಈ ನಿಟ್ಟಿನಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

         ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಮಾತನಾಡಿ, ಒಳಿತನ್ನು ಮಾಡುವುದೇ ಧರ್ಮವಾಗಿದೆ. ಮನುಷ್ಯ ಪರೋಪಕಾರ ಜೀವನ ನಡೆಸುವುದರಿಂದ ಬದುಕು ಸಾರ್ಥಕಗೊಳ್ಳಲಿದೆ. ಈ ಕಾರ್ಯಕ್ರಮದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳು ಪರಸ್ಪರ ಅನೂನ್ಯರಾಗಿ ಪ್ರೀತಿಯಿಂದ ಜೀವನ ನಡೆಸುವ ಮೂಲಕ ಉತ್ತಮ ಜೀವನ ನಿರ್ವಹಣೆ ಮಾಡಬೇಕೆಂದು ಸಲಹೆ ನೀಡಿದರು.

         ಅಧ್ಯಕ್ಷತೆ ವಹಿಸಿದ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಈ ಸಂಸ್ಥೆಯಿಂದ ಈಗಾಗಲೇ ಪಠ್ಯ ಪುಸ್ತಕ ವಿತರಣೆ, ಆರೋಗ್ಯ ಶಿಬಿರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಗಳನ್ನು ಆಯೋಜಿಸಲಾಗಿದೆ. ಈ ಬಾರಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.

        ನವದಂಪತಿಗಳು ಪ್ರೀತಿ, ವಿಶ್ವಾಸದಿಂದ ಜೀವನ ನಡೆಸಬೇಕು. ತಂದೆ-ತಾಯಿಂದರನ್ನು ವೃದ್ಧಾಶ್ರಮಕ್ಕೆ ಅಟ್ಟದೇ, ಮಮತೆಯಿಂದ ನೋಡಿಕೊಳ್ಳಬೇಕು. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾದವರಿಗೆ ಸರ್ಕಾರದ ಸೌಲಭ್ಯ ದೊರೆಯಲಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

         ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಪುಣ್ಯ ಪಡೆದವರು ಮಾತ್ರ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಾರೆ. ಹೆಚ್ಚು ಹಣ ಖರ್ಚುಮಾಡಿ ದುಂದು ವೆಚ್ಚ ಮಾಡುವುದಕ್ಕಿಂತ ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ಹಣ ಉಳಿಯುತ್ತದೆ. ಹೆಣ್ಣು ಮಕ್ಕಳಿಗೆ ಆಸೆ ಜಾಸ್ತಿ ಇದ್ದು, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಆರೋಗ್ಯವಂತ ಮಕ್ಕಳನ್ನು ಪಡೆಯಿರಿ ಎಂದು ಶುಭ ಹಾರೈಸಿದರು.

        ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆ ಆಗುವುದು ಸಂತೋಷದ ಸಂಗತಿಯಾಗಿದೆ. ನವದಂಪತಿ ಬದುಕನ್ನು ಸಂತೋಷದಿಂದ ಆಹ್ವಾನಿಸಬೇಕು. ಕಷ್ಟ, ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಅರ್ಥಪೂರ್ಣವಾಗಿ ಬದುಕು ಕಟ್ಟಿಕೊಳ್ಳಬೇಕು. ಹೆಂಡ್ತಿ ಬಂದ ಮೇಲೆ ತಂದೆ-ತಾಯಿಯನ್ನು ಕಡೆಗಣಿಸದೇ, ಕಾಪಾಡಬೇಕೆಂದು ಸಲಹೆ ನೀಡಿದರು.

           ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ರೈತರು ತಮ್ಮ ಮಕ್ಕಳ ಮದುವೆಗೆ ಸಾಲ ಮಾಡಿಕೊಂಡು ಕೊನೆಗೆ ಅದನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಹೀಗಿರುವಾಗ ಇಂದ ಸಾಮೂಹಿಕ ವಿವಾಹ ಮಹೋತ್ಸವಗಳು ಆರ್ಥಿಕವಾಗಿ ಹಿಂದುಳಿದವರಿಗೆ ಒಂದು ಅವಕಾಶ ಇದ್ದಂತೆ. ಅದನ್ನು ಈ ಸಂಸ್ಥೆ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.

          ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ಸಂಸದ ಜಿ.ಎಂ. ಸಿದ್ಧೇಶ್ವರ ಅವರು ಲೋಕಸಭಾ ಸದಸ್ಯರಾಗಿ ಈ ಜಿಲ್ಲೆಯ ಪ್ರತಿಯೊಂದು ಗ್ರಾಮಗಳನ್ನು ನೋಡಿದ್ದಾರೆ. ಅವರ ನೇತೃತ್ವದಲ್ಲಿ ಜಿಲ್ಲೆಯ ಆರು ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಜಿಲ್ಲಾ ಪಂಚಾಯ್ತಿಯ ಅಧಿಕಾರಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಆದ್ದರಿಂದ ಇವರನ್ನು ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಮತದಾರ ಗೆಲಿಸಿದರೆ, ನಾನು ನನ್ನ ಕ್ಷೇತ್ರದಲ್ಲಿ 500 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುತ್ತೇನೆ ಎಂದರು.

          ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಶಿವಯೋಗಿಸ್ವಾಮಿ ಮಾತನಾಡಿ, ಸಂಸಾರದಲ್ಲಿ ಭಿನ್ನಾಭಿಪ್ರಾಯ ಸಹಜವಾಗಿದೆ. ನಿಮ್ಮ ವಿಚಾರ ಸರಿಯಾಗಿದ್ದರೇ ಸುಮ್ಮನೆ ಇರೀ, ನೀವು ತಪ್ಪು ಮಾಡಿದ್ದರೆ ಕ್ಷಮೆ ಕೇಳಿ. ಹೀಗಾದರೆ ಸಂಸಾರದಲ್ಲಿ ಭಿನ್ನಾಭಿಪ್ರಾಯ ಇರುವುದಿಲ್ಲ ಎಂದು ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದವರು ಮುಂದಿನ ವರ್ಷ ಇಷ್ಟೋತ್ತಿಗೆ ಮೃತ್ಯುಂಜಯ್ಯ ನರ್ಸಿಂಗ್ ಹೋಂಗೆ ಸೇರಿಸಿ ಎಂದು ಹೇಳಿದರು.

          ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 45 ವಧು-ವರರು ನವ ಜೀವನಕ್ಕೆ ಕಾಲಿಟ್ಟರು. ಕಾರ್ಯಕ್ರಮದಲ್ಲಿ ಆವರಗೊಳ್ಳ ಪುರರ್ವ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪೌಂಡೇಷನ್‍ನ ಸಲಹಾ ಸಮಿತಿ ಅಧ್ಯಕ್ಷ ಕೆ.ಬಿ. ಶಂಕರನಾರಾಯಣ, ಖಜಾಂಚಿ ಎಂ.ಆರ್.ಪ್ರಭುದೇವ್, ಕಾರ್ಯದರ್ಶಿ ಗು.ರುದ್ರಯ್ಯ, ಧನಂಜಯ ಕಡ್ಲೇಬಾಳ್, ಜಗದೀಶ್, ಕೊಂಡಜ್ಜಿ ಜಯಪ್ರಕಾಶ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link