ಅಸಂಘಟಿತ ಕಾರ್ಮಿಕರಿಗೆ ಪ್ರಶಸ್ತಿ ನೀಡಲು ನಿರ್ಧಾರ

ಚಿತ್ರದುರ್ಗ

    ಇದೇ ಮೊದಲ ಬಾರಿಗೆ ಅಸಂಘಟಿತ ವಲಯದ ವಿವಿಧ ವೃತ್ತಿ ಆಧಾರಿತ ಕಾರ್ಮಿಕರಿಗೆ ‘ಕಾರ್ಮಿಕ ಸಮ್ಮಾನ್’ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರಶಸ್ತಿಗಾಗಿ ಅರ್ಜಿ ಸ್ವೀಕರಿಸಿ, ಪರಿಶೀಲಿಸಿ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

    ಕಾರ್ಮಿಕ ಸಮ್ಮಾನ್ ಪ್ರಶಸ್ತಿಗಾಗಿ ಆಯ್ಕೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ಜಿಲ್ಲಾ ತ್ರಿಪಕ್ಷೀಯ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರನ್ನು ಕೇಂದ್ರವಾಗಿರಿಸಿಕೊಂಡು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ‘ಅಸಂಘಟಿತ ಕಾರ್ಮಿಕರ ದಿನ’ ಆಚರಣೆ ಮಾಡಲು ಹಾಗೂ ಅಸಂಘತಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ ‘ಕಾರ್ಮಿಕ ಸಮ್ಮಾನ್’ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು, ಪ್ರತಿ ವರ್ಷ ಮಾರ್ಚ್ 01 ರಂದು ಅಸಂಘತಿತ ಕಾರ್ಮಿಕ ದಿನ ಎಂದು ಆಚರಣೆ ಮಾಡಲು ತೀರ್ಮಾನಿಸಿದೆ. ಇದೇ ದಿನದಂದು ಘೋಷಿತ ಅಸಂಘಟಿತ ವಲಯದ ಕಾರ್ಮಿಕರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು

     ಅಸಂಘಟಿತ ಕಾರ್ಮಿಕ ವಲಯದ ಪೈಕಿ 13 ವಲಯಗಳಿಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಸಾರಿಗೆ ಕಾರ್ಮಿಕರು, ಹಮಾಲರು, ಟೈಲರ್‍ಗಳು, ಚಿಂದಿ ಆಯುವವರು, ಕಟ್ಟಡ ಕಾರ್ಮಿಕರು, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಭಟ್ಟಿ ಕಾರ್ಮಿಕರು, ಮೆಕ್ಯಾನಿಕ್‍ಗಳು, ಮನೆ ಕೆಲಸದವರು ಈ ವೃತ್ತಿ ವಲಯದ ಕಾರ್ಮಿಕರಿಗೆ ಕಾರ್ಮಿಕ ಸಮ್ಮಾನ್ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯಲ್ಲಿ ಎರಡು ವಿಭಾಗಗಳಿದ್ದು, ಶ್ರಮ ಸನ್ಮಾನ ಪ್ರಶಸ್ತಿ ಹಾಗೂ ವಿಶೇಷ ಪುರಸ್ಕಾರ ಪ್ರಶಸ್ತಿಗೆ ಕಾರ್ಮಿಕರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು

        ಶ್ರಮ ಸನ್ಮಾನ ಪ್ರಶಸ್ತಿಯನ್ನು ಜಿಲ್ಲೆಯ ಒಬ್ಬರು ಕಾರ್ಮಿಕರಿಗೆ 01 ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರ ಒಳಗೊಂಡಿದೆ. ವಿಶೇಷ ಪುರಸ್ಕಾರ ಪ್ರಶಸ್ತಿಯನ್ನು ಪ್ರತಿ ವಲಯದ 10 ಕಾರ್ಮಿಕರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿಯು 01 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರ ಒಳಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು

       ಪ್ರಶಸ್ತಿಗಾಗಿ ಕಾರ್ಮಿಕರನ್ನು ಆಯ್ಕೆ ಮಾಡುವ ಸಲುವಾಗಿ, ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ನಮೂನೆಯನ್ನು ಆಯಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅದೇ ಕಚೇರಿಗೆ ಫೆ. 20 ರ ಒಳಗಾಗಿ ಸಲ್ಲಿಸಬೇಕು.

       ಕಾರ್ಮಿಕ ಇಲಾಖೆಯಿಂದ ಪೂರೈಸಿದ ಕ್ರಮ ಸಂಖ್ಯೆ ಹೊಂದಿರುವ ಅರ್ಜಿ ನಮೂನೆಯಲ್ಲಿ ಮಾತ್ರವೇ ಸಲ್ಲಿಸಬೇಕು. ಜೆರಾಕ್ಸ್ ಮಾಡಿದ ಅಥವಾ ಅರ್ಜಿ ನಮೂನೆಯ ಪ್ರತಿಯಲ್ಲಿ ಸಲ್ಲಿಸುವ ಅರ್ಜಿಯನ್ನು ಪರಿಗಣಿಸುವುದಿಲ್ಲ. ಈ ಕುರಿತು ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು. ಕಾರ್ಮಿಕ ಸಂಘಟನೆಗಳು ಪ್ರಶಸ್ತಿ ಕುರಿತು ತಮ್ಮ ಹಂತದಲ್ಲಿ ವ್ಯಾಪಕ ಪ್ರಚಾರ ಕೈಗೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಅರ್ಜಿ ಸಲ್ಲಿಸುವಂತೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

       ಆಯ್ಕೆ ಸಮಿತಿ ರಚನೆ : ಕಾರ್ಮಿಕ ಸಮ್ಮಾನ್ ಪ್ರಶಸ್ತಿ ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತ್ರಿಪಕ್ಷೀಯ ನಿರ್ವಹಣ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಜಿಪಂ ಸಿಇಒ ಉಪಾಧ್ಯಕ್ಷರಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳು, ಲೋಕೋಪಯೋಗಿ, ಕೆಆರ್‍ಐಡಿಎಲ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ನಿರ್ಮಿತಿ ಕೇಂದ್ರ, ಸಣ್ಣ ನೀರಾವರಿ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಕೌಶಲ್ಯ ಅಧಿಕಾರಿಗಳು, ಅಸಂಘಟಿತ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಮಾಲೀಕ ಸಂಘಟನೆಗಳ ಪ್ರತಿನಿಧಿಗಳು ಸಮಿತಿಯ ಸದಸ್ಯರುಗಳಾಗಿದ್ದು, ಜಿಲ್ಲಾ ಕಾರ್ಮಿಕ ಅಧಿಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಇದೇ ಮೊದಲ ಬಾರಿಗೆ ಅವರ ಶ್ರಮ ಮತ್ತು ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲು ಉದ್ದೇಶಿಸಿರುವ ಸರ್ಕಾರದ ಕ್ರಮ ನಿಜಕ್ಕೂ ಶ್ಲಾಘನೀಯ. ಪ್ರಶಸ್ತಿ ಆಯ್ಕೆಯಲ್ಲಿ ಅರ್ಹರನ್ನು ಗುರುತಿಸಿ, ಪ್ರಶಸ್ತಿ ನೀಡುವಂತೆ ಮನವಿ ಮಾಡಿದರು.

       ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಜಿಲ್ಲಾ ಪ್ರಭಾರ ಕಾರ್ಮಿಕ ಅಧಿಕಾರಿ ಎನ್.ಹೆಚ್. ರಮೇಶ್, ಕಾರ್ಮಿಕ ನಿರೀಕ್ಷಕ ಡಿ. ರಾಜಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link