ಲೋಕಸಭೆಗೆ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ಕೊಡಿ

ಚಿತ್ರದುರ್ಗ:

      ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೇಟ್ ನೀಡಬೇಕು. ಒಂದು ವೇಳೆ ಹೊರಗಿನವರಿಗೆ ಟಿಕೇಟ್ ನೀಡಿದ್ದೇ ಆದಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುತ್ತೇವೆ ಎಂದು ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಸವಾಲು ಎಸೆದರು.

       ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ ಸಂವಿಧಾನ ಜಾರಿಯಾಗುವ ಸ್ಥಳ ಲೋಕಸಭೆಗೆ ಚಿತ್ರದುರ್ಗ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಹೊರಗಿನವರನ್ನು ಗೆಲ್ಲಿಸಿ ಕಳಿಸಿರುವುದು ದೊಡ್ಡ ದುರಂತ. ಅದಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮತದಾರರು ತಮ್ಮ ಮತಗಳನ್ನು ಅಡವಿಡಬಾರದು. ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕದವರು ಹೋರಾಟ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ.

       ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗವನ್ನು ಮೊದಲಿನಿಂದಲೂ ಕಡೆಗಣಿಸಲಾಗುತ್ತಿದೆ. ಜಿಲ್ಲೆಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅನ್ಯಾಯವಾಗುತ್ತಿರುವುದನ್ನು ನೋಡಿಕೊಂಡು ಪ್ರತಿ ಚುನಾವಣೆಯಲ್ಲಿಯೂ ಸುಮ್ಮನಿರಲು ಆಗುವುದಿಲ್ಲ. ಎಂದು ಕಿಡಿಕಾರಿದರು.

       ಬಸವನಾಗಿದೇವಸ್ವಾಮಿ ಪಕ್ಕದಲ್ಲಿಯೇ ಕುಳಿತು ಒಂದೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಹಿರಿಯೂರಿನ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಯಾರು ಅರ್ಹರು ಟಿಕೇಟ್ ತರುತ್ತಾರೋ ಅವರ ಪರವಾಗಿ ಕೆಲಸ ಮಾಡುತ್ತೇವೆ. ಅಪ್ಪಿತಪ್ಪಿಯೂ ಸ್ಥಳೀಯರಿಗೆ ಟಿಕೇಟ್ ನೀಡಿ ಎಂದು ಯಾರನ್ನು ಒತ್ತಾಯಿಸುವುದಿಲ್ಲವೆಂದಾಗ ಕೆಲವು ಕಾಲ ಪತ್ರಿಕಾಗೋಷ್ಟಿಯಲ್ಲಿ ವೇದಿಕೆಯಲ್ಲಿ ಕುಳಿತಿದ್ದವರ ನಡುವೆ ಮಾತಿನ ಗೊಂದಲವೇರ್ಪಟಿತ್ತು.

       ಚಿತ್ರದುರ್ಗ ಮೀಸಲು ಕ್ಷೇತ್ರದಲ್ಲಿ ಯಾರು ಸಮರ್ಥರಿರುತ್ತಾರೋ ಅವರಿಗೆ ಪಕ್ಷದ ಹೈಕಮಾಂಡ್ ಟಿಕೇಟ್ ಕೊಡಲಿ. ಸಮರ್ಥವಾಗಿ ಜನಸೇವೆ ಮಾಡುವವರಿಗೆ ನಮ್ಮ ಬೆಂಬಲವಿದೆಯೇ ವಿನಃ ಸ್ಥಳೀಯರು ಹೊರಗಿನವರು ಎನ್ನುವ ಪ್ರಶ್ನೆಯಿಲ್ಲ ಎಂದು ಖಡಕ್‍ಆಗಿ ಹೇಳಿದರು.
ದಲಿತ ಸಂಘರ್ಷ ಸಮಿತಿ ಎನ್.ನಾರಾಯಮೂರ್ತಿ ಬಣದ ಜಿಲ್ಲಾಧ್ಯಕ್ಷ ಬೀರಾವರ ಪ್ರಕಾಶ್ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರನ್ನು ಕರೆತಂದು ಗೆಲ್ಲಿಸಿಕೊಂಡ ಕೆಲವರು ಈ ಬಾರಿಯಾದರೂ ಸ್ಥಳೀಯರನ್ನು ಗಣನೆಗೆ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

       ದಲಿತ ಸಂಘರ್ಷ ಸಮಿತಿ ಎಂ.ಎಸ್.ಬಣದ ರಾಜ್ಯಾಧ್ಯಕ್ಷ ಕುಂಚಿಗನಹಾಳ್ ಮಹಲಿಂಗಪ್ಪ ಮಾತನಾಡಿ ನಾಲ್ಕು ಬಾರಿ ಹೊರಗಿನವರಿಗೆ ಟಿಕೇಟ್ ನೀಡಿ ಸ್ಥಳೀಯರನ್ನು ಕಡೆಗಣಿಸಲಾಗಿದೆ. ಈ ಸಾರಿ ಸ್ಥಳೀಯರಿಗೆ ಟಿಕೇಟ್ ನೀಡಿ ಜಿಲ್ಲೆಯ ಅಭಿವೃದ್ದಿಗೆ ಗಮನ ಕೊಡಿ ಎಂದು ವಿವಿಧ ಪಕ್ಷಗಳ ನಾಯಕರುಗಳಿಗೆ ಒತ್ತಾಯಿಸಿದರು.

        ವಂದೆಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡುತ್ತ ಪ್ರತಿ ಲೋಕಸಭಾ ಚುನಾವಣೆಯಲ್ಲಿಯೂ ಹೊರಗಿನವರಿಗೆ ಟಿಕೇಟ್ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಿತ್ರದುರ್ಗ ಜಿಲ್ಲೆಗೆ ಅನ್ಯಾಯ ಮಾಡಿಕೊಂಡು ಬರುತ್ತಿವೆ. ಭದ್ರಾಮೇಲ್ದಂಡೆ ಯೋಜನೆ, ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿರುವ ಸ್ಥಳೀಯರನ್ನು ಗುರುತಿಸಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಟಿಕೇಟ್ ನೀಡಲಿ ಎಂದು ವಿವಿಧ ಪಕ್ಷಗಳ ನಾಯಕರುಗಳಲ್ಲಿ ಮನವಿ ಮಾಡಿದರು.
ಉಮೇಶ್, ಕಣಿವೆಮಾರಮ್ಮ ಯುವಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link