ಚಿತ್ರದುರ್ಗ
ಸವಿತ ಸಮುದಾಯದ ಮಕ್ಕಳನ್ನು ಕೇವಲ ಕುಲಕಸುಬಿಗೆ ಸೀಮಿತಗೊಳಿಸದೆ, ಶಿಕ್ಷಣ ಕೊಡಿಸುವ ಕಡೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಎನ್.ಚಂದ್ರಶೇಖರ್ ಕರೆ ನೀಡಿದರು
ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದಲ್ಲಿ ಮಂಗಳವಾರದಂದು ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಸಮಾಜ ಅಭಿವೃದ್ದಿ ಕಾಣಬೇಕಾದರೆ ಶಿಕ್ಷಣ ಅತೀ ಮುಖ್ಯ. ನಮ್ಮ ಸಮಾಜ ಅರ್ಥಿಕ, ಸಾಮಾಜಿ ಹಾಗೂ ಶೈಕ್ಷಣಿಕವಾಗಿಯೂ ಹಿಂದುಳಿದೆ. ಇಂದಿನ ಬದಲಾದ ಸಮಾಜದಲ್ಲಿಯೂ ನಮ್ಮ ಸಮಾಜದ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಈ ಕಾರಣಕ್ಕಾಗಿ ಸವಿತ ಸಮಾಜ ಶಿಕ್ಷಣದ ಮೂಲಕ ಅಭಿವೃದ್ದಿ ಕಾಣಬೇಕು ಎಂದು ಸಲಹೆ ನೀಡಿದರು
ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಶಕ್ತಿ ಇಲ್ಲ. ಬಡತನ ಕಾರಣಕ್ಕಾಗಿ ಕುಲಕಸುಬಿಗೆ ತೊಡಗಿಸುತ್ತಿದ್ದಾರೆ. ಇದು ಬದಲಾಗಬೇಕು. ಮಕ್ಕಳಶಿಕ್ಷಣಕ್ಕೂ ಹೆಚ್ಚು ಆದ್ಯತೆ ಕೊಡಿಸುವ ವ್ಯವಸ್ಥೆ ಆಗಬೇಕಿದೆ. ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ಎನ್. ಚಂದ್ರಶೇಖರ್ ನುಡಿದರು
ವಿಶೇಷ ಉಪನ್ಯಾಸ ನೀಡಿದ ಕಲಬುರ್ಗಿ ಜಿಲ್ಲೆಯ ಅಫಜಲಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾದ ಡಾ. ರೇಖಾ ನರಸಿಂಹರಾವ್ ಭಾರತೀಯ ಸಮಾಜದ ನಾಲ್ಕು ವೇದಗಳಲ್ಲಿ ಬರುವಂತ ಸಾಮವೇದವನ್ನು ತಯಾರಿಸಿದ ಮಹಾನ್ ಪುರುಷ ಸವಿತಾ ಮಹರ್ಷಿಗಳು. ಇವರು ಹಲವು ಬಗೆಯ ವೇದ ಉಪನಿಷತ್ತುಗಳನ್ನು ರಚಿಸಿ ಸಮಾಜದ ಬದಲಾವಣೆಗೆ ಶ್ರಮಿಸಿದ ಪ್ರಮುಖರಲ್ಲಿ ಒಬ್ಬರು ಎಂದು ಹೇಳಿದರು.
ಜಾತಿಗಳು ಹುಟ್ಟಿದ್ದು ಕುಲಕಸಬುಗಳ ಆದಾರದಲ್ಲಿ. ಅದೇ ವ್ಯವಸ್ಥೆಯಡಿ ಸವಿತಾ ಸಮಾಜವು ಹಲವು ಹೆಸರುಗಳಿಂದ ಕರೆಯಲ್ಪಟ್ಟು ಕ್ಷೌರಿಕ ವೃತ್ತಿಯನ್ನು ತನ್ನ ಕುಲ ಕಸುಬಾಗಿಸಿಕೊಂಡಿದ್ದು, ಸಮುದಾಯದ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಭಾರತೀಯ ಸಮಾಜದ ನಾಲ್ಕು ವೇದಗಳಲ್ಲಿ ಬರುವಂತ ಸಾಮವೇದವನ್ನು ತಯಾರಿಸಿದ ಮಹಾನ್ ಪುರುಷ ಸವಿತಾ ಮಹರ್ಷಿ. ಇವರು ಹಲವು ಬಗೆಯ ವೇದ ಉಪನಿಷತ್ತುಗಳನ್ನು ರಚಿಸಿ ಸಮಾಜದ ಬದಲಾವಣೆಗೆ ಶ್ರಮಿಸಿದವರಲ್ಲಿ ಪ್ರಮುಖರು. ಬನಾರಸ್‍ನಲ್ಲಿ ಸವಿತಾ ಸಮಾಜದವರನ್ನು ಯಾಜಿಕ್ ಅಂತ ಕರೆಯಲಾಗುತ್ತದೆ. ಯಾಜಿಕ್ ಅಂದರೆ ಬ್ರಾಹ್ಮಣರ ಸಮಕಾಲಿನವರು ಎಂಬರ್ಥ ನೀಡುತ್ತಿದ್ದು ಯಜ್ಞ ಯಾಗಾದಿಗಳನ್ನು ಮಾಡುವವರ ಸಾಲಿನಲ್ಲಿ ಸವಿತಾ ಸಮುದಾಯ ನಿಲ್ಲುತ್ತದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ವಿವಿಧ ಹೆಸರಿನಲ್ಲಿ ಅಸೂಯೆ ಹುಟ್ಟಿಸುವ ಪದಗಳಿಂದ ಕರೆಯಲ್ಪಡುವ ಸ್ಥಿತಿಯಲ್ಲಿ ಈ ಸಮಾಜವಿದೆ. ಇತಿಹಾಸದ ಪುಟಗಳಲ್ಲಿ ನಮ್ಮ ಸಮುದಾಯವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಾಹಿತಿಯನ್ನು ಪಸರಿಸುವ ಹಾಗೂ ಪಂಜನ್ನು ಹಿಡಿಯುವ ಮಹತ್ತರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿತ್ತು. ಆದರೆ ನಮ್ಮ ಸಮಾಜ ಭಜಂತ್ರಿ, ಕ್ಷೌರಿಕ, ಎಂಬ ನಾನಾ ಹೆಸರುಗಳಿಂದ ಕರೆಸಿಕೊಳ್ಳಲಾಗುತ್ತಿದೆ, ಆದ್ದರಿಂದ ಸರ್ಕಾರ ಕಾನೂನು ನಿಯಮದ ಪ್ರಕಾರ ಅವಹೇಳನಕಾರಿ ಹೆಸರುಗಳ ಬಳಕೆಯನ್ನು ನಿಷೇಧಿಸಬೇಕೆಂದು ಅವರು ಮನವಿ ಮಾಡಿದರು.
ಚಂದ್ರವಳ್ಳಿ ಶಾಸನದಲ್ಲಿ ಸವಿತಾ ಸಮುದಾಯದ ಪುರಾವೆಗಳು ಕಂಡುಬರುತ್ತವೆ ಕುಲ ಕಸುಬನ್ನು ಮೂಲ ವೃತ್ತಿಯಾಗಿಸಿ ಕೊಂಡಿರುವ ಸಮಾಜ, ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿಯುತ್ತಿದೆ. ಮಹಿಳಾ ಶಿಕ್ಷಣ ತೀರಾ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಸಮುದಾಯದವರು ವೃತ್ತಿ ಹಾಗೂ ಅಭಿವೃದ್ಧಿಯ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಅವರು ಹೇಳಿದರು.
ತಾಲ್ಲೂಕು ಪಂಚಾಯತ್ ಅಧ್ಯಕ್ಷ ಲಿಂಗರಾಜು ಮಾತನಾಡಿ ಸವಿತಾ ಸಮುದಾಯವು ಬಹುದಿನಗಳಿಂದ ಸವಿತಾ ಮಹರ್ಷಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುವಂತೆ ಬೇಡಿಕೆ ಸಲ್ಲಿಸುತ್ತಾ ಬಂದಿತ್ತು. ಈ ಕಾರ್ಯವನ್ನು ಇಂದಿನ ಸರ್ಕಾರ ನೆರವೇರಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆಯನ್ನು ಅರ್ಪಿಸುವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಹಾಗೆಯೇ ಶೋಷಿತ ಸಮಾಜವಾಗಿರುವುದರಿಂದ ಒಗ್ಗಟ್ಟಿನಿಂದ ಶ್ರಮಿಸಿ, ಸಮುದಾಯಕ್ಕೆ ಅಗತ್ಯವಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿಸುವ ಜವಾಬ್ದಾರಿ ಸಮಾಜದ ಜನಪ್ರತಿನಿಧಿಗಳ ಮೇಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಉದ್ಘಾಟಿಸಿದರು, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಸವಿತಾ ಸಮಾಜದ ಮುಖಂಡರಾದ ಶ್ರೀನಿವಾಸ್, ವೆಂಕಟೇಶ್, ಮಾರಣ್ಣ, ಕವಿತಾ, ಕಿರಣ್ ಕುಮಾರ್, ಕೆಪಿ ಎಂ ಗಣೇಶಯ್ಯ ಮತ್ತಿತರರು ಉಪಸ್ಥಿತರಿದ್ದರು.