ನೆಲಮಂಗಲ :
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಹಿಂಭಾಗದ ಖಾಸಗಿ ಕಂಪನಿಯೊಂದಕ್ಕೆ ಸೇರಿದ ಆಯಿಲ್ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಭಾರಿ ಅಗ್ನಿ ಅನಾಹುತ ಉಂಟಾಗಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸದೆ, ಸೀಸ್ ಆಗಿದ್ದ ಯುನೈಟೆಟ್ ಪೇಂಟ್ಸ್ ಎಂಬ ಕಂಪನಿಗೆ ಸೇರಿದ್ದ ಆಯಿಲ್ ಗೋದಾಮಿನಲ್ಲಿ ಮಂಗಳವಾರ ಬೆಳಿಗ್ಗೆ 11.30ರ ವೇಳೆ ಅಗ್ನಿ ಅವಘಡ ಸಂಭವಿಸಿದೆ.
ಸುಮಾರು 4500 ಆಯಿಲ್ ಡ್ರಮ್‍ಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಗೋದಾಮು ಧಗ ಧಗ ಹೊತ್ತಿ ಉರಿಯುತ್ತಿದೆ.ಸೀಸ್ ಆಗಿದ್ದ ಕಂಪನಿಯಾಗಿದ್ದರಿಂದ ಕಳೆದ ಎರಡು ವರ್ಷಗಳಿಂದಲೂ ಕಾರ್ಯ ನಿರ್ವಹಿಸದೆ ಇದು ಸ್ಥಗಿತಗೊಂಡಿತ್ತು.
ಹೀಗಾಗಿ ಕಂಪನಿ ಸುತ್ತ ಅತಿಯಾದ ಹುಲ್ಲು ಬೆಳೆದಿದ್ದರಿಂದ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಸುಮಾರು 20 ಅಗ್ನಿಶಾಮಕ ತಂಡಗಳು ಆಗಮಿಸಿ ಸಂಜೆಯವರೆಗೆ ಶ್ರಮಿಸಿ ಬೆಂಕಿ ನಂದಿಸಿವೆ.ಗೋದಾಮಿನಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಬೆಂಕಿ ಹೊತ್ತಿಕೊಂಡ ಕೂಡಲೇ ಸುತ್ತಮತ್ತಲಿದ್ದವರನ್ನು ದೂರ ಕಳುಹಿಸಿ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದರು.