ದಾವಣಗೆರೆ
ಸತತ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಎಸ್.ಅಶ್ವತಿ ಅವರು ಪೋಷಕರನ್ನು ಒಪ್ಪಿಸಿ, ಪ್ರೇಮಿಗಳ ದಿನವಾದ ಗುರುವಾರ ಕೇರಳದ ಕೋಯಿಕ್ಕೋಡ್‍ನ ಟಾಗೋರ್ ಸಭಾಂಗಣದಲ್ಲಿ ಕೇರಳ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕೃಷ್ಣರಾವ್, ಪಾರ್ವತಿ ದಂಪತಿಯ ಪುತ್ರರಾಗಿರುವ ಡಾ.ಬಗಾದಿ ಗೌತಮ್‍ರವರು 2009ನೇ ಬ್ಯಾಚ್ ಅಧಿಕಾರಿಯಾಗಿದ್ದರೆ, ಕ್ಯಾಲಿಕಟ್‍ನ ಹಿರಿಯ ವಕೀಲ ಸೆಲ್ವರಾಜ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ಪುಷ್ಪಾ ಅವರ ಪುತ್ರಿಯಾಗಿರುವ ಎಸ್.ಅಶ್ವತಿಯವರು 2913ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದಾರೆ.
ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಬಗಾದಿ ಗೌತಮ್ ಕಳೆದ ನಾಲ್ಕು ತಿಂಗಳ ಹಿಂದೆ ದಾವಣಗೆರೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದಿದ್ದರೆ, ಉಡುಪಿಯಲ್ಲಿ ಕೆಲಸ ಮಾಡಿದ್ದ ಅಶ್ವತಿಯವರು ಕಳೆದ ಎರಡು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲಾ ಪಂಚಾಯತ್‍ನ ಸಿಇಒಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೀಗಾಗಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿ ನಾಲ್ಕು ತಿಂಗಳಲ್ಲೆ ಮದುವೆಯೇ? ಎಂಬ ಪ್ರಶ್ನೆ ಜನರಲ್ಲಿ ಮನೆ ಮಾಡಿದೆ. ಆದರೆ, ವಾಸ್ತವದಲ್ಲಿ ಇವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಉಭಯ ಕುಟುಂಬಗಳ ಮಧ್ಯೆ ಬಾಂಧವ್ಯ ಬೆಸೆಯುವಲ್ಲಿ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಿ.ಎಸ್.ರಮೇಶ್ ಮತ್ತು ಕುಟುಂಬ ಮಹತ್ವದ ಪಾತ್ರ ವಹಿಸಿದೆ.
ಮದುಮಗಳಾಗಿರುವ ಅಶ್ವತಿ ಅವರು ಕಾಂಚಿಪುರಂ ರೇಷ್ಮೆ ಸೀರೆ ಹಾಗೂ ಕೆಂಪು ಬಣ್ಣದ ಬ್ಲೌಸ್ ಹಾಗೂ ಬಂಗಾರದ ಒಡವೆಗಳನ್ನು ಧರಿಸಿ ಸಂಭ್ರಮಿಸಿದರೆ, ಮದುಮಗ ಬಗಾದಿ ಗೌತಮ್ ಬಿಳಿಪಂಚೆ, ಬಿಳಿ ಅಂಗಿ ಹಾಗೂ ಶಾಲು ಧರಿಸಿದ್ದರು. ಗುರುವಾರ ಬೆಳಿಗ್ಗೆ 10.30ರ ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಡುವ ಮೂಲಕ ಪ್ರೀತಿಗೆ ಯಾವುದೇ ಪ್ರಾಂತ, ಭಾಷೆಗಳ ಹಂಗಿಲ್ಲ ಎಂಬುದನ್ನು ತೋರಿಸಿಕೊಟ್ಟ ಮಾದರಿ ಜೋಡಿಗಳಾಗಿದ್ದಾರೆ.
ಈ ಐಎಎಸ್ ಜೋಡಿ ಅಧಿಕಾರಿಗಳ ವಿವಾಹಕ್ಕೆ ಜಿಪಂ, ಜಿಲ್ಲಾಡಳಿತದ ಅಧಿಕಾರಿ, ಸಿಬ್ಬಂದಿ ದಂಡೇ ತೆರಳಿದೆ. ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ದಂಪತಿ, ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಜಿ.ಎಸ್.ಷಡಕ್ಷರಪ್ಪ, ತಾಪಂ ಇಓ ಎಲ್.ಎಸ್.ಪ್ರಭುದೇವ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ, ನಿವೃತ್ತ ಅಧಿಕಾರಿ ಜಿ.ಟಿ.ರಾಮಕೃಷ್ಣ ಸೇರಿದಂತೆ ದಾವಣಗೆರೆ ಜಿಲ್ಲೆಯಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಮದುವೆಗೆ ತೆರಳಿ ನವ ಜೋಡಿಗೆ ಶುಭ ಹಾರೈಸಿದರು.
ಬಗಾದಿ ಗೌತಮ್ ತಂದೆ ಕೃಷ್ಣರಾವ್, ತಾಯಿ ಪಾರ್ವತಿ , ಅಶ್ವತಿ ತಂದೆ ಸೆಲ್ವರಾಜ್, ತಾಯಿ ಪುಷ್ಪಾ ಹಾಗೂ ಕುಟುಂಬ ವರ್ಗ, ಬಂಧು-ಬಳಗ ನವ ಜೋಡಿಗಳ ವಿವಾಹಕ್ಕೆ ಸಾಕ್ಷಿಕರಿಸಿದರು.