ದಾವಣಗೆರೆ:
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾಗಿರುವ ವೀರ ಯೋಧರಿಗೆ ದಾವರಣಗೆರಯಲ್ಲಿ ಶನಿವಾರವು ವಿವಿಧ ಸಂಘಟನೆಗಳು ಕಂಬನಿ ಮಿಡಿದಿವೆ.
ಸಿಪಿಐ ಶ್ರದ್ಧಾಂಜಲಿ:
ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಭಾರತ ಕಮ್ಯುನಿಷ್ಟ್ ಪಕ್ಷದ ಕಾರ್ಯಕರ್ತರು, ಕೆಲ ನಿಮಿಷ ಮೌಚಾನಾಚರಣೆ ಆಚರಿಸುವ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಭಾರತೀಯ ಸೈನಿಕರ ಜತೆಯಲ್ಲಿ ನೇವಾಗಿ ಸೆಣಸಾಡಲು ಸಾಧ್ಯವಿಲ್ಲದ, ಉಗ್ರರು ಸಿಆರ್ಪಿಎಫ್ ಯೋಧರು ತೆರಳುತ್ತಿದ್ದ ಬಸ್ ಅನ್ನು ಗುರಿ ಮಾಡಿಕೊಂಡು ಸ್ಪೋಟಕ ತುಂಬಿದ್ದ ಜೀಪ್ವೊಂದನ್ನು ಡಿಕ್ಕಿ ಪಡಿಸುವ ಮೂಲಕ 44 ಸೈನಿಕರ ಹತ್ಯೆ ಮಾಡುವ ಮೂಲಕ ಪಶಾಚಿಕ ಕೃತ್ಯವನ್ನು ಮೆರೆದಿರುವುದು ಅತ್ಯಂತ ಹೇಡಿತನದ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರವು ದೇಶದ ಭದ್ರತೆಗೆ ಒತ್ತು ನೀಡುವುದರ ಜೊತೆಗೆ ದೇಶ ಕಾಯುವ ಸೈನಿಕರಿಗೆ ಸಂಪೂರ್ಣ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡರುಗಳಾದ ಆನಂದರಾಜ್, ಆವರಗೆರೆ ಚಂದ್ರು, ಹೆಚ್.ಜಿ.ಉಮೇಶ್, ಆವರಗೆರೆ ವಾಸು, ಐರಣಿ ಚಂದ್ರು, ಶಾರದಮ್ಮ, ಸರೋಜ, ವಿಶಾಲಕ್ಷಿ, ಸಿ.ರಮೇಶ್, ಸುರೇಶ್ ಯರಗುಂಟೆ, ಲಕ್ಷ್ಮಣ, ಶಿವಮೂರ್ತಿ ಮತ್ತಿತರರು ಹಾಜರಿದ್ದರು.
ಹೋರಾಟ ಸಮಿತಿ:
ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿದ ಕರ್ನಾಟಕ ಮಾನವ ಹಕ್ಕುಗಳ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಉಗ್ರರ ಪ್ರತಿಕೃತಿ ತಯಾರಿಸಿ, ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಗಾಂಧಿ ವೃತ್ತಕ್ಕೆ ಮೆರವಣಿಗೆಯ ಮೂಲಕ ತೆರಳಿ, ಭಯೋತ್ಪಾದಕರ ಪ್ರತಿಕೃತಿ ದಹಿಸಿ ಕಿಡಿಕಾರಿದರು.
ಸಮಿತಿಯ ಅಧ್ಯಕ್ಷ ಬಿ. ಕಲ್ಲೇಶಪ್ಪ, ಉಪಾಧ್ಯಕ್ಷ ಬಿ. ದುಗ್ಗಪ್ಪ, ಅಶೋಕ್, ಪ್ರಕಾಶ್, ತರಕಾರಿ ರುದ್ರೇಶ್, ಭಜನೆ ಮಲ್ಲಪ್ಪ, ಸಿದ್ದೇಶ್, ವಾದೋನಿ, ನಾಗರತ್ನಮ್ಮ, ಬಸಮ್ಮ, ಮಮತಮ್ಮ, ರುದ್ರಮ್ಮ, ಶಕುಂತಲಮ್ಮ, ಕವಿತಮ್ಮ ಮತ್ತಿತರರಿದ್ದರು.
ವಕೀಲರ ನಮನ:
ಭಾರತೀಯ ಸೈನಿಕರ ಹತ್ಯೆ ನಡೆಸಿರುವ ಉಗ್ರರ ಪೈಶಾಚಿಕ ಕೃತ್ಯ ಖಂಡಿಸಿ, ದಾವಣಗೆರೆ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ, ಮೇಣದ ಬತ್ತಿ ಬೆಳಗಿಸುವ ಮೂಲಕ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ಕಾಶ್ಮೀರದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ನಡೆಸಿ, ಸುಮಾರು 44 ಸೈನಿಕರನ್ನು ಬಲಿ ಪಡೆದಿರುವುದು ಅತ್ಯಂತ ಹೇಯಕೃತ್ಯವಾಗಿದೆ. ಕೇಂದ್ರ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತವಾಗುವ ಮೂಲಕ ಉಗ್ರರನ್ನು ಕಾನೂನಿನ ವ್ಯಾಪ್ತಿಯಲ್ಲಿ ತನಿಖೆ ಮಾಡಿ ಕಠಿಣ ಶಿಕ್ಷೆ ವಿಧಿಸುವುದರ ಜತೆಗೆ ಯೋಧರಲ್ಲಿ ಆತ್ಮಸ್ಥೈರ್ಯ ತುಂಬಬೇಕೆಂದು ಆಗ್ರಹಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪನವರ ಮೂಲಕ ಕೇಂದ್ರ ಸರ್ಕಾರಕ್ಕೆ ವಕೀಲರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ದಿವಾಕರ್.ಹೆಚ್., ಬಿ.ಎನ್.ಲಿಂಗರಾಜ್, ಎಸ್.ಬಸವರಾಜ್, ಗಣೇಶ್ ಕುಮಾರ್, ವಸುಂಧರಾ, ಅನೀಸ್ ಪಾಷಾ, ಎ.ಸಿ.ರಾಘವೇಂದ್ರ ಮತ್ತಿತರರು ಹಾಜರಿದ್ದರು.