ನವದೆಹಲಿ:
ಪಾಕಿಸ್ತಾನ ಸಾಕಿ ಸಲಹಿದ ಉಗ್ರರು ಭಾರತೀಯ ಸೈನಿಕರ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರ ನಾಶ ಮಾಡಬೇಕು ಎಂಬುದು ಅನೇಕರ ಒತ್ತಾಯ. ಇದಕ್ಕೂ ಮೊದಲೇ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಶಾಕ್ ನೀಡಿದೆ. ಆಮದು ಸುಂಕವನ್ನು ಶೇ.200 ಏರಿಕೆ ಮಾಡುವ ಮೂಲಕ ಬಿಸಿ ಮುಟ್ಟಿಸಿದೆ.
India has withdrawn MFN status to Pakistan after the Pulwama incident. Upon withdrawal, basic customs duty on all goods exported from Pakistan to India has been raised to 200% with immediate effect. #Pulwama
— Arun Jaitley (@arunjaitley) February 16, 2019
ಈ ಬಗ್ಗೆ ಟ್ವೀಟ್ ಮಾಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ ನಂತರ ಪಾಕಿಸ್ತಾನಕ್ಕೆ ನೀಡಲಾದ ಹೆಚ್ಚು ನೆರವು ನೀಡುವ ರಾಷ್ಟ್ರ(ಎಂಎನ್‍ಎಫ್) ಟ್ಯಾಗ್ ತೆಗೆದು ಹಾಕುತ್ತಿದ್ದೇವೆ. ಹಾಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ರಫ್ತಾಗುವ ವಸ್ತುಗಳ ಮೇಲೆ ಅವರು ಶೇ. 200 ತೆರಿಗೆ ಕಟ್ಟಬೇಕು. ಇದು ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಹೇಳಿದ್ದಾರೆ.
ಭಾರತವು ಸಿಮೆಂಟ್, ತಾಜಾ ಹಣ್ಣು, ಪೆಟ್ರೋಲಿಯಂ ಉತ್ಪನ್ನಗಳು, ಖನಿಜ, ಅದಿರು ಮತ್ತು ಚರ್ಮದ ಉತ್ಪನ್ನಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದರಿಂದ ಪಾಕಿಸ್ತಾನದ ಮೇಲೆ ರೂ. 3,482 ಕೋಟಿ ಆರ್ಥಿಕ ಹೊರೆ ಬೀಳಬಹುದು ಎಂದು ಅಂದಾಜಿಸಿಲಾಗಿದೆ. ಇದು ಪಾಕಿಸ್ತಾನಕ್ಕೆ ಸಂಕಷ್ಟ ತಂದೊಡ್ಡಿದೆ.
ಪುಲ್ವಾಮಾ ದಾಳಿ ನಂತರ ಭದ್ರತೆ ವಿಚಾರದ ಕುರಿತು ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭದ್ರತಾ ಸಂಸದೀಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಭಾರತ ಬಿಸಿ ಮುಟ್ಟಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ