ಜಿಲ್ಲಾ ತಂಬಾಕು ನಿಯಂತ್ರಣ ತಂಡದಿಂದ ಕ್ಷಿಪ್ರ ದಾಳಿ

ದಾವಣಗೆರೆ 

      “ಧೂಮಪಾನ ಮುಕ್ತ ನಗರ” ವೆಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಣಜಿ, ಅಣಜಿ ಸರ್ಕಲ್ ಮತ್ತು ನಾಗರಕಟ್ಟೆಗಳಲ್ಲಿ ಇಂದು ಜಿಲ್ಲಾ ತಂಬಾಕು ನಿಯಂತ್ರಣ ತಂಡದಿಂದ ತಂಬಾಕು ದಾಳಿ ನಡೆಸಲಾಯಿತು.

        ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನೆ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾಗೂ ಪೊಲೀಸ್ ಇಲಾಖೆ ಇವರ ಸಹಯೋಗದೊಂದಿಗೆ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

         ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಇವರ ನೇತೃತ್ವದಲ್ಲಿ ತಂಡ ರಚಿಸಿಕೊಂಡು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಅಧಿನಿಯಮ-2003 ಸೆಕ್ಷನ್ 4 ರಲ್ಲಿ 8 ಪ್ರಕರಣ, ಮತ್ತು 6ಎ ಅಡಿಯಲ್ಲಿ 16 ಪ್ರಕರಣ, 6ಬಿ ಅಡಿಯಲ್ಲಿ 2 ಪ್ರಕರಣ ಸೇರಿದಂತೆ ಒಟ್ಟು 26 ಪ್ರಕರಣಗಳನ್ನು ದಾಖಲಿಸಿ, ರೂ. 2440/- ಗಳನ್ನು ದಂಡದ ರೂಪದಲ್ಲಿ ಸ್ಥಳದಲ್ಲಿಯೇ ಸಂಗ್ರಹಿಸಲಾಯಿತು.

        ತಂಡವು ಅಣಜಿ, ಅಣಜಿ ಸರ್ಕಲ್ ಮತ್ತು ನಾಗರಕಟ್ಟೆ ಸುತ್ತಮುತ್ತಲಿನ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್, ಪಾನ್‍ಶಾಪ್, ಬಸ್ ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿದರು. ಹಾಗೂ ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲೀಕರುಗಳು ಧೂಮಪಾನ ನಿಷೇಧದ ಬಗ್ಗೆ ಪ್ರದರ್ಶಿಸಬೇಕಾದ ಫಲಕಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲು ತಾಕೀತು ಮಾಡಿದರು.

         ಕೋಟ್ಪಾ ಕಾಯಿದೆಯ ಸೆಕ್ಷನ್ 6ಎ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರುವುದು ಹಾಗೂ ಮಕ್ಕಳಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡಿಸುವುದನ್ನು ನಿಷೇಧಿಸಿರುವುದರ ಬಗ್ಗೆ, ಹಾಗೂ ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ 100 ಯಾರ್ಡ್ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಿರುವುದು, ಸೆಕ್ಷನ್ 4 ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧ ಮತ್ತು ತಂಬಾಕು ಉತ್ಪನ್ನಗಳ ಪ್ಯಾಕ್‍ಗಳ ಮೇಲೆ ಎಚ್ಚರಿಕೆ ಚಿನ್ಹೆ ಇಲ್ಲದೆ ಮಾರಾಟ ಮಾಡುವುದನ್ನು ನಿಷೇಧ ಇರುವ ಬಗ್ಗೆ ತಂಡದ ಸದಸ್ಯರು ಮಾಹಿತಿ ನೀಡಿದರು.

         ತಂಬಾಕು ನಿಯಂತ್ರಣ ತನಿಖಾ ತಂಡದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಯೋಜನೆಯ ಜಿಲ್ಲಾ ಸಂಯೋಜಕ ಸತೀಶ್ ಕಲಿಹಾಳ, ಹಿರಿಯ ಆರೋಗ್ಯ ಸಹಾಯಕರಾದ ಲೋಕೇಶ್, ವೆಂಕಟಾಚಲ್, ಸಮಾಜ ಕಾರ್ಯಕರ್ತರಾದ ದೇವರಾಜ್ ಕೆ.ಪಿ, ಕಿರಿಯ ಆರೋಗ್ಯ ಸಹಾಯಕ ಅಶೋಕ್ ಎಸ್, ಅಣಜಿ ಉಪ ಠಾಣೆಯ ಎಎಸ್‍ಐ ನರಸಿಂಹ ರೆಡ್ಡಿ, ಪೇದೆ ನಾಗರಾಜಯ್ಯ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link