ತುರುವೇಕೆರೆ
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತನ್ನ ಅಧಿಕಾರಾವಧಿಯಲ್ಲಿ ಶ್ರೀಮಂತರಿಗೆ ಮತ್ತು ಪಕ್ಷದ ಬೆಂಬಲಿಗರಿಗೆ ಮಾತ್ರ ಬಗರ್‍ಹುಕುಂ ಯೋಜನೆಯಲ್ಲಿ ಭೂಮಿಯನ್ನು ಮಂಜೂರು ಮಾಡಿ ಅರ್ಹ ಫಲಾನುಭವಿಗಳಿಗೆ ವಂಚಿಸಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ತನಿಖೆಯ ಹಂತದಲ್ಲಿದೆ. ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದು ಶಾಸಕ ಮಸಾಲಜಯರಾಮ್ ಮಾಜಿ ಶಾಸಕರಿಗೆ ತಿರುಗೇಟು ನೀಡಿದರು.
ಪಟ್ಟಣದ ಕೆಎಸ್‍ಆರ್‍ಟಿಸಿ ಡಿಪೋ ಆವರಣದಲ್ಲಿ ಸುಮಾರು 150 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಶಾಸಕ ಮಸಾಲಜಯರಾಮ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನಿನ್ನೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಶಾಸಕ ಮಸಾಲಜಯರಾಮ್ ಬಗರ್‍ಹುಕುಂ ಸಾಗುವಳಿ ಪತ್ರ ನೀಡಲು ರಾಜಕೀಯ ಮಾಡುತ್ತಿದ್ದಾರೆಂದು ಆರೋಪಕ್ಕೆ ಪ್ರತಿಕ್ರಿಯಿಸಿ ಮಾಜಿ ಶಾಸಕ ತನ್ನ ಹಿಂಬಾಲಕರಿಗೆ ಅಕ್ರಮವಾಗಿ ಬಗರ್‍ಹುಕುಂ ಭೂಮಿಯನ್ನು ಮಂಜೂರು ಮಾಡಿರುವ ದಾಖಲೆ ಪತ್ರಗಳನ್ನು ಪ್ರದರ್ಶಿಸಿ ಸೋಪ್ಪನಹಳ್ಳಿ ರಂಗನಾಥ್ ತಾಯಿ ಹೆಸರಿಗೆ ಮಂಜೂರಾಗಿದ್ದ ಬಗರ್ ಹುಕುಂ ಭೂಮಿಯನ್ನು ಸರ್ಕಾರ ವಜಾ ಮಾಡಿದ್ದಾರೆ ಎಂದು ತಿಳಿಸಿ, ಇಂತಹ ಅಕ್ರಮಗಳನ್ನು ಮಾಡಿ ಸಾಗುವಳಿ ಚೀಟಿ ನೀಡಿ ಎಂದು ಪ್ರತಿಭಟನೆ ಮಾಡುತ್ತಾರೆ ಎಂದು ತಿಳಿಸಿದರು.
ಬಿಜೆಪಿಯಿಂದ ಜೆಡಿಎಸ್ ಸೇರುವ ವಿಚಾರವಾಗಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿರುವ ರೆಕಾರ್ಡ್ ಇದ್ದರೆ ಎಂ.ಟಿ. ಕೃಷ್ಣಪ್ಪ ತಾಕತ್ತಿದ್ದರೆ ಅಂತಹ ಆಡಿಯೋ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು. ನಾನು ಶಾಸಕನಾದ್ದರಿಂದ ತಾಲ್ಲೂಕಿನ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತರಲು ಸಿ.ಎಂ ಮತ್ತು ಸಚಿವರ ಮನೆಗೆ ಹೋಗಿದ್ದೇನೆ. ನಾನೊಬ್ಬ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ. ಕೃಷ್ಣಪ್ಪ ತನ್ನ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಇಂತಹ ಇಲ್ಲಸಲ್ಲದ ಆರೋಪಗಳನ್ನು ಮಾಡುವುದೆ ನಿತ್ಯ ಕಾಯಕವಾಗಿದೆ. ಮೂರು ಬಾರಿ ತಾಲ್ಲೂಕಿನ ಶಾಸಕರಾಗಿ ಆರಿಸಿ ಬಂದವರು. ಒಳ್ಳೆಯ ಸನ್ನಢತೆಯಿಂದ ರಾಜಕಾರಣ ಮಾಡಲಿ ಎಂದು ಸಲಹೆ ನೀಡಿದರು.
ಶಾಸಕರಾಗಿ ಆಯ್ಕೆಯಾದ ನಾನು ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡುವ ಅರ್ಹತೆ ಇದೆ. ಆದರೆ ಮಾಜಿ ಶಾಸಕರು ಇನ್ನೂ ನಾನೇ ಶಾಸಕ, ನನ್ನ ಅನುದಾನ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು. 2013ರಲ್ಲಿ ಹೇಮಾವತಿ ನಾಲಾ ವಿಚಾರವಾಗಿ ರಾಮಡಿಹಳ್ಳಿ ರೈತರ ಮೇಲಿನ ಪ್ರಕರಣವನ್ನು ಜಿಲ್ಲಾಡಳಿತ ಕೂಡಲೆ ಕೈಬಿಟ್ಟು ರೈತರನ್ನು ದೋಷಮುಕ್ತಗೊಳಿಸ ಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ದುಂಡಾರೇಣುಕಪ್ಪ, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಟಿಎಪಿಸಿಎಮ್‍ಎಸ್ ಅಧ್ಯಕ್ಷ ಮೈನ್ಸ್‍ರಾಜು, ನವೀನ್‍ಬಾಬು, ರವಿ, ಜಯಶೀಲಾ, ದೊಡ್ಡನರಸೇಗೌಡ, ಕೆಇಬಿ ಕಂಟ್ರಾಕ್ಟ್‍ಮಲ್ಲಿಕಣ್ಣ, ಸಿದ್ದೇಶ್, ಪ್ರಸಾದ್, ಡಿಪೋ ಮೇನೇಜರ್ ತುಳಸೀರಾವ್ ಸೇರಿದಂತೆ ಇತರರು ಇದ್ದರು.