ದಾವಣಗೆರೆ
ಇನ್ನೂ ಒಂಭತ್ತು ತಿಂಗಳಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಗರದ ಕೆ.ಆರ್. ಮಾರುಕಟ್ಟೆಯು ಸುಸಜ್ಜಿತವಾಗಿ ನಿರ್ಮಾಣವಾಗಲಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ನಗರದ ಕೆ.ಆರ್.ಮಾರುಕಟ್ಟೆ ಆವರಣದಲ್ಲಿ ಬುಧವಾರ ಆಧುನಿಕ ತರಕಾರಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣ ರಾಜೇಂದ್ರ ತರಕಾರಿ ಮಾರುಕಟ್ಟೆ ಕಾಮಗಾರಿಗೆ ಈಗಾಗಲೇ ಭೂಮಿ ಪೂಜೆ ನೆರವೇರಿದ್ದು, ಇನ್ನೂ ಒಂಭತ್ತು ತಿಂಗಳಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾಗುವ ವಿಶ್ವಾಸವಿದೆ ಎಂದರು.
ಬಹುಮಹಡಿ ಕಟ್ಟಡದಲ್ಲಿ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದು, ಮಾರುಕಟ್ಟೆಯ ಎರಡನೇ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಲಾಗಿದ್ದು, ಇದರಿಂದ ವಾಹನ ಮತ್ತು ಜನದಟ್ಟಣೆಯೂ ಕಡಿಮೆಯಾಗಲಿದೆ. ಹರಿಹರದ ಹುಲ್ಮನಿ ಕನ್ಸ್ಟ್ರಕ್ಷನ್ಸ್ಗೆ ಕಟ್ಟಡ ನಿರ್ಮಾಣದ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರಿಗೆ ಕಾಲ ಮಿತಿಯಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಕೆ.ಆರ್. ಮಾರುಕಟ್ಟೆಯಲ್ಲಿ 138 ಮಳಿಗೆಗಳು ನಿರ್ಮಾಣವಾಗಲಿದ್ದು, ಹಿಂದೆ ಪಾಲಿಕೆಯ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ಮಳಿಗೆಗಳನ್ನು ವಿತರಿಸಲಾಗುವುದು. ತದ ನಂತ ಬೀದಿ ಬದಿ ವ್ಯಾಪಾರಸ್ಥರಿಗೆ ಮಳಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು. ಈ ಮಳಿಗೆಗಳಿಗೆ ಪಾಲಿಕೆಯು ಬಾಡಿಗೆ ನಿಗದಿ ಮಾಡಲಿದೆ ಎಂದು ಹೇಳಿದರು.
ಬಾಷಾನಗರ, ಯರಗುಂಟೆ ಸೇರಿದಂತೆ ನಗರ ಬಹುತೇಕ ಬಾಗಗಳಲ್ಲಿ ನೀರು ಪೂರೈಕೆ ಸರರಾಗವಾಗಿ ನಡೆಯುತ್ತಿದೆ. ಜಲಸಿರಿ ಯೋಜನೆಯಡಿ ನಗರದಲ್ಲಿ 1200 ಕಿಮಿ ಪೈಪ್ಲೈನ್ ಹಾಕಬೇಕು. ಇದು ಸಾಮಾನ್ಯ ಕೆಲಸವಲ್ಲ. ಈ ಕಾಮಗಾರಿ ಮುಗಿದರೆ ಮುಂದಿನ ಒಂದು ವರ್ಷದಲ್ಲಿ ನಗರದ ಜನರಿಗೆ ಸಮೃದ್ಧವಾಗಿ ನೀರು ಪೂರೈಕೆಯಾಗಲಿದೆ ಎಂದರು.
ಈ ಹಿಂದೆ ಮಲ್ಲಿಕಾರ್ಜುನ್ ಖರ್ಗೆ ರೈಲ್ವೇ ಮಂತ್ರಿಗಳಾಗಿದ್ದಾಗ. ನಗರದ ಎಸಿ ಕಚೇರಿ ಬಳಿ ಇರುವ ಜಾಗವನ್ನು ರೈಲ್ವೇ ಇಲಾಖೆಗೆ ನೀಡಿ ಗೂಡ್ಸ್ಶೆಡ್ಹಿಂಭಾಗದ ಜಾಗವನ್ನು ಪಾಲಿಕೆಗೆ ನೀಡಿದರೆ ಅಶೋಕ ರೈಲ್ವೇಗೇಟ್ಗೆ ಮೇಲುಸೇತುವೆ ನಿರ್ಮಾಣ ಮಾಡಬಹುದು ಎಂದಿದ್ದರು. ಆದರೆ, ಎಸಿ ಕಚೇರಿ ಜಾಗ ಪೂನಾ-ಬೆಂಗಳೂರು ರಸ್ತೆಗೆ ಹೊಂದಿಕೊಂಡಿದ್ದು, ಬೆಲೆವುಳ್ಳ ಜಾಗವಗಿದೆ. ಆದರೆ ರೈಲ್ವೆಯ ಗೂಡ್ಸ್ಶೆಡ್ ಜಾಗ ಹಿಂಭಾಗಕ್ಕೆ ಇದ್ದು, ಅಷ್ಟೊಂದು ಬೆಲೆ ಇಲ್ಲ. ಈ ಜಾಗಗಳನ್ನು ಯಾವುದೇ ಹಣದ ವ್ಯವಹಾರವಿಲ್ಲದೇ ಪರಸ್ಪರ ವಿನಿಮಯ ಮಾಡಿಕೊಂಡು ಮೇಲುಸೇತುವೆ ನಿರ್ಮಾಣ ಮಾಡುವ ಕುರಿತು ಮಾತುಕತೆಗಳು ನಡೆದಿದ್ದವು. ಆದರೆ, ಆ ವೇಳೆಗೆ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಅಧಿಕಾರ ಕಳೆದುಕೊಂಡಿತು. ಅಂದಿನಿಂದ ಮೇಲುಸೇತುವೆ ನಿರ್ಮಾಣ ವಿಷಯ ನನೆಗುದಿಗೆ ಬಿದ್ದಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಉಪಮೇಯರ್ ಕೆ.ಚಮನ್ಸಾಬ್, ಗುತ್ತಿಗೆದಾರ ಹುಲ್ಮನಿ, ಕೆಆರ್ ಮಾರ್ಕೆಟ್ ಅಧ್ಯಕ್ಷ ಐರಣಿ ಬಕ್ಕೇಶ್, ಉಪಾಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಆರ್.ಬಿ.ರವಿಕುಮಾರ್, ಮುಖಂಡರಾದ ಆರ್.ಪಿ.ರುದ್ರೇಶ್, ದಾನೇಶಪ್ಪ, ವೀರಭದ್ರಯ್ಯ, ಎ.ಡಿ.ನಾಗರಾಜ್, ಎಚ್.ಎಸ್.ರುದ್ರಪ್ಪ, ರೆಹಮಾನ್ಸಾಬ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








