ಹಾಸನ:

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಳಿ ನಡೆದ ಬೆಂಕಿಯ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ದುರ್ಘಟನೆ ಸಂಭವಿಸಿದೆ.
ಚಿಕ್ಕಬಾಣಾವರ ಮೂಲದ ವಿವೇಕ ನಾಯಕ್, ಅವರ ಪತ್ನಿ ರೇಷ್ಮಾ ನಾಯಕ್ ಹಾಗೂ ಇಬ್ಬರು ಮಕ್ಕಳು ಮೃತಪಟ್ಟೆವರೆಂದು ಗುರುತಿಸಲಾಗಿದೆ.
ಬೆಂಗಳೂರಿನ ಸ್ಪೈಕರ್ ಕಂಪೆನಿಯ ಉದ್ಯೋಗಿಯಾಗಿದ್ದ ವಿವೇಕ್ನಾಯಕ್ ಇಂದು ಬೆಳಗ್ಗೆ 8.30ರಲ್ಲಿ ಕುಟುಂಬದವರನ್ನು ಕಾರಿನಲ್ಲಿ ಕರೆದುಕೊಂಡು ಬೆಂಗಳೂರಿನಿಂದ ಹಾಸನ ಕಡೆಗೆ ಹೋಗುತ್ತಿದ್ದರು.
ಚನ್ನರಾಯಪಟ್ಟಣದ ರಾಷ್ಟ್ರೀಯ ಹೆದ್ದಾರಿ 75ರ ಹಾಸನ-ಬೆಂಗಳೂರು ಹೆದ್ದಾರಿಯ ಖಾಸಗಿ ಹೋಟೆಲ್ ಬಳಿ ಇವರಿದ್ದ ಕಾರು ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಲಭ್ ಶೌಚಾಲಯ ಕಟ್ಟಡಕ್ಕೆ ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು ಬೆಂಕಿ ಹೊತ್ತಿಕೊಂಡಿದ್ದರಿಂದ ಕಾರಿನಲ್ಲಿದ್ದ ದಂಪತಿ ಹಾಗೂ ಪುತ್ರಿ ಸಜೀವ ದಹನವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವೇಗವಾಗಿ ಬಂದ ಕಾರು ರಸ್ತೆ ಬದಿಯ ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬೆಂಕಿ ತಗುಲಿ, ಒಮ್ಮೆಲೆ ಬೆಂಕಿ ವ್ಯಾಪಿಸಿದ್ದು, ಕಾರಿನಲ್ಲಿದ್ದವರು ಹೊರ ಬರಲಾಗದೇ ಸುಟ್ಟು ಕರಕಲಾಗಿದ್ದಾರೆ ಎನ್ನಲಾಗಿದೆ.
ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ.







