ಏರ್ ಷೋ ಹಿನ್ನೆಲೆ ಸರಣಿ ಅಪಘಾತ : 10ಕ್ಕೂ ಹೆಚ್ಚು ಕಾರುಗಳು ಜಖಂ!!!

ಬೆಂಗಳೂರು:

      ಹೆಬ್ಬಾಳ ಫ್ಲೈಓವರ್ ಮೇಲೆ ಸರಣಿ ಅಪಘಾತ ಸಂಭವಿಸಿದ್ದು, ವಾಹನಗಳನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

      ಮುಂದೆ ಹೋಗುತ್ತಿದ್ದ ಕಾರು ತಕ್ಷಣ ಬ್ರೇಕ್​ ಹಾಕಿದ ಹಿನ್ನೆಲೆ, ಹಿಂದೆ ಬರುತ್ತಿದ್ದ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ.    ಅದು ಮೊದಲೇ ಆಕ್ಸಿಡೆಂಟ್ ಝೋನ್‌ ಎಂದೇ ಗುರುತಿಸಲಾಗಿದ್ದ ಪ್ರದೇಶವಾಗಿದೆ. ಇದರ ಮಧ್ಯೆ 10ಕ್ಕೂ ಹೆಚ್ಚು ವಾಹನಗಳಿಗೆ ಅಪಘಾತವಾಗಿರುವ ಕಾರಣ ಟ್ರಾಫಿಕ್ ಜಾಂ ಉಂಟಾಗಿದೆ. ಬೆನ್ಝ್ ಇನ್ನಿತರೆ ದುಬಾರಿ ಕಾರುಗಳಿಗೆ ಹಿಂಭಾಗ ಹಾಗೂ ಮುಂಭಾಗ ತೀವ್ರ ಹಾನಿಯಾಗಿದೆ.

      ಕಾರುಗಳಿಗೆ ಡಿಕ್ಕಿಯಾದ ಹಿನ್ನೆಲೆ ಕಾರು ಮಾಲೀಕರು ವಾಗ್ವಾದಕ್ಕಿಳಿದಿದ್ದರು. ಫ್ಲೈ ಓವರ್ ಮೇಲೆಯೇ ಕಾರುಗಳನ್ನು ನಿಲ್ಲಿಸಿ ಗಲಾಟೆ ಮಾಡಿದರು. ಸ್ಥಳಕ್ಕೆ ಹೆಬ್ಬಾಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

      ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ಮಾರ್ಗದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಮಧ್ಯಾಹ್ನ 12 ಗಂಟೆಯ ಬಳಿಕ ಈ ಮಾರ್ಗದಲ್ಲಿ ವಾಹನಗಳು ಹೆಚ್ಚು ಸಂಚರಿಸಲು ಆರಂಭಿಸಿದ್ದವು. ಆದರೆ ಸಂಜಯ ನಗರದಿಂದ ಬರುವ ಮಾರ್ಗದಿಂದ ಬಂದ ಕಾರು ಅಡ್ಡವಾಗಿ ಸಂಚರಿಸಿದ ಕಾರಣ ಸರಣಿ ಅಪಘಾತ ಸಂಭವಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ