ಬೆಂಗಳೂರು
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಪಾವತಿಗೆ ಬಾಕಿ ಇರುವ ಕೂಲಿ ಮೊತ್ತವನ್ನೂ ಸಹ ರಾಜ್ಯ ಸರ್ಕಾರದ ಮುಂಗಡ ಹಣದಿಂದಲೇ ಕೂಲಿಕಾರರಿಗೆ ಬಿಡುಗಡೆ ಮಾಡುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಚಾಲನೆ ನೀಡಿದರು.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಿದ ಅವರು ರಾಜ್ಯದ 156 ತಾಲ್ಲೂಕುಗಳು ತೀವ್ರ ಬರಗಾಲ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೂಲಿಕಾರರಿಗೆ ಸಕಾಲದಲ್ಲಿ ವೇತನ ಪಾವತಿಯಾಗದೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಸ್ವಯಂ ಪ್ರೇರಣೆಯಿಂದ ಕೇಂದ್ರ ಸರ್ಕಾರ ಭರಿಸಬೇಕಾದ ಮೊತ್ತವನ್ನು ಮುಂಗಡ ರೂಪದಲ್ಲಿ ಬಿಡುಗಡೆ ಮಾಡಿದ್ದು ಇನ್ನು 2-3 ದಿನಗಳಲ್ಲಿ ಕೂಲಿಕಾರರ ಖಾತೆಗೆ ವರ್ಗಾವಣೆಯಾಗಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ನರೇಗಾ ಕಾಯ್ದೆಯನ್ವಯ ಶೇ. ನೂರರಷ್ಟು ಕೂಲಿ ಮೊತ್ತ ಹಾಗೂ ಶೇ. 75 ರಷ್ಟು ಸಾಮಗ್ರಿ ವೆಚ್ಚ ಬಿಡುಗಡೆ ಮಾಡಬೇಕಾಗಿದೆ. ಕೂಲಿಯ ಮೊತ್ತವನ್ನು 15 ದಿನದೊಳಗೆ ಪಾವತಿ ಮಾಡಬೇಕಾಗಿದೆ. ಆದರೆ ರಾಜ್ಯದಲ್ಲಿ 2018ರ ಡಿಸೆಂಬರ್ ತಿಂಗಳಿನಿಂದ ಕೂಲಿ ಮೊತ್ತ ಹಾಗೂ ನವೆಂಬರ್ ತಿಂಗಳಿನಿಂದ ಸಾಮಗ್ರಿ ವೆಚ್ಚ ಬಿಡುಗಡೆ ಆಗಿಲ್ಲ. ಈಗಾಗಲೇ ಬರದಿಂದ ಕಂಗೆಟ್ಟಿರುವ ಗ್ರಾಮೀಣ ಜನತೆಗೆ ಇದರಿಂದಾಗುವ ಅನಾನುಕೂಲವನ್ನು ಅರಿತು, ಅದರಲ್ಲೂ ಉತ್ತರ ಕರ್ನಾಟಕದ ಜನತೆ ಗುಳೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಹೀಗೆ ಬಾಕಿ ಉಳಿದಿರುವ 438.96 ಕೋಟಿ ರೂ. ಗಳ ಮುಂಗಡವನ್ನು ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಕೇಂದ್ರ ಸರ್ಕಾರವು ಹಿಂದಿನ ವರ್ಷಗಳಲ್ಲಿಯೂ ಇದೇ ರೀತಿ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭರಿಸಿದ ಮುಂಗಡ ಮೊತ್ತವೂ ಸೇರಿ ಒಟ್ಟು 2149.65 ಕೋಟಿ ರೂ. ಮೊತ್ತ ಬಾಕಿ ಇದ್ದು ಈ ಬಗ್ಗೆ ಪದೇ ಪದೇ ಕೇಂದ್ರ ಸರ್ಕಾರಕ್ಕೆ ವಿವಿಧ ಹಂತಗಳಲ್ಲಿ ಮನವಿ ಮಾಡಿದ ನಂತರ ಫೆಬ್ರವರಿ 1 ರಂದು ಕೇವಲ 117 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಮುಂದಿನ 2 ತಿಂಗಳಿನಲ್ಲಿಯೂ ಕೇಂದ್ರ ಸರ್ಕಾರದಿಂದ ಅನುದಾನ ಲಭ್ಯವಾಗುವುದು ಅನುಮಾನವಾದ್ದರಿಂದ ಕೂಲಿ ಬಾಬ್ತು ಇನ್ನೂ 500 ಕೋಟಿ ರೂ. ಮುಂಗಡವನ್ನು ಮಂಜೂರು ಮಾಡಿದ್ದೇವೆ. ಒಟ್ಟು ಕೇಂದ್ರದ ಪಾಲಿನ 938.96 ಕೋಟಿ ರೂ. ಮೊತ್ತವನ್ನು ಜನರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಾಮಗ್ರಿ ವೆಚ್ಚ ಮುಂಗಡ ಬಿಡುಗಡೆ ಮಾಡುವ ಕುರಿತು ಸಹ ಗ್ರಾಮೀಣಾಭಿವೃದ್ಧಿ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದ್ದು, ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.ರಾಜ್ಯದಲ್ಲಿ ತೀವ್ರ ಬರಗಾಲ ತಲೆದೋರಿದ್ದು, ಬರ ಪರಿಹಾರಕ್ಕಾಗಿ 2000 ಕೋಟಿ ರೂ. ಒದಗಿಸುವಂತೆ ಮನವಿ ಮಾಡಿದ್ದೆವು. 900 ಕೋಟಿ ರೂ. ಮಂಜೂರು ಮಾಡಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಈ ವರೆಗೆ ಅನುದಾನ ಬಿಡುಗಡೆಯೇ ಆಗಿಲ್ಲ ಎಂದು ಅವರು ಮಾಹಿತಿ ನೀಡಿದರು.ಕೇಂದ್ರದ ಇಂತಹ ನಿಲುವುಗಳಿಗೆ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿಷಾದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ರಾಜ್ಯದಲ್ಲಿ ಗ್ರಾಮೀಣ ಜನರಿಗೆ ಆರ್ಥಿಕ ಭದ್ರತೆ ನೀಡುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದಲ್ಲಿ ಮೊದಲಿಗೆ 8.5 ಕೋಟಿ ಮಾನವದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿತ್ತು. ಈ ಗುರಿಯನ್ನು 10 ಕೋಟಿ ಮಾನವದಿನಗಳಿಗೆ ಪರಿಷ್ಕರಿಸಲಾಗಿದ್ದು, ಈಗಾಗಲೇ 8.71 ಕೋಟಿ ಮಾನವದಿನಗಳನ್ನು ರಾಜ್ಯದಲ್ಲಿ ಸೃಜಿಸಲಾಗಿದೆ ಎಂದು ಮಾಹಿತಿ ನೀಡಿದರು.ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಉಪಸ್ಥಿತರಿದ್ದರು.