ಚಳ್ಳಕೆರೆ
ತಾಲ್ಲೂಕಿನ ಹೆಗ್ಗೆರೆ ಗ್ರಾಮದ ರೈತರು ಗುರುವಾರ ಪುನಃ ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ತಮ್ಮ ಜಮೀನುಗಳಲ್ಲಿ ಒಣಗಿದ ಕಡ್ಲೆ ಗಿಡ, ಸೂರ್ಯಕಾಂತಿ ಬೆಳೆಗಳನ್ನು ತಂದು ಪರಿಹಾರ ನೀಡುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ನ್ಯಾಯ ಒದಗಿಸುವಂತೆ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದರು.
ಹೆಗ್ಗೆರೆ ಗ್ರಾಮದ ಸಮೀಪವಿರುವ ಪ್ರಕಾಶ್ ಸ್ಟಾಂಜ್ ಐರನ್ ಲಿಮಿಟೆಡ್ ಕಂಪನಿ ಪ್ರತಿನಿತ್ಯ ಕಲುಷಿತ ನೀರು ಹೊರ ಬಿಡುತ್ತಿದ್ದು, ನೀರು ಹರಿಯುವ ಎಲ್ಲಾ ಜಮೀನು ವ್ಯಾಪ್ತಿಯಲ್ಲಿ ಬೆಳೆಗಳು ಒಣಗುತ್ತಿದ್ದು, ಆ ಭಾಗದ ರೈತರೆಲ್ಲರೂ ಕಳೆದ 2011ರಿಂದ ನಿರಂತರವಾಗಿ ಪ್ರತಿಭಟನೆ ನಡೆಸಿ ತಮ್ಮ ಒಣಗಿದ ಬೆಳೆಗಳಿಗೆ ಪರಿಹಾರವನ್ನು ನೀಡುವಂತೆ ಒತ್ತಾಯಿಸುತ್ತಿದ್ದು, ಇದುವರೆಗೂ ಯಾವುದೇ ಅಧಿಕಾರಿ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಫೆ.1ರಂದು ಗ್ರಾಮದ ರೈತರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಫೆ.20ರಂದು ಸಂಬಂಧಪಟ್ಟ ಕಂಪನಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಒದಗಿಸುವ ಭರವಸೆ ನೀಡಿದ್ದರು.
ಅವಧಿ ಮುಗಿದ ನಂತರವೂ ಸ್ಥಳಕ್ಕೆ ಬಾರದ ತಹಶೀಲ್ದಾರ್ ವಿರುದ್ದ ಬೇಸತ್ತ ರೈತರು ಗುರುವಾರ ತಾಲ್ಲೂಕು ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸತೊಡಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ರೈತರು ಕಳೆದ ಹತ್ತಾರು ವರ್ಷಗಳಿಂದ ನಮಗೆ ಬೆಳೆಯಿಲ್ಲ, ಕಷ್ಟ ಪಟ್ಟು ಬಿತ್ತನೆ ಮಾಡಿದ ಬೆಳೆ ಒಣಗುತ್ತಿದೆ, ನಮ್ಮ ಸಮಸ್ಯೆ ಪರಿಹಾರಕ್ಕೆ ಯಾವುದೇ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ, ನಮಗೆ ಪರಿಹಾರ ನೀಡುವ ತನಕ ನಾವು ಈ ಜಾಗಬಿಟ್ಟು ಕದಲುವುದಿಲ್ಲ, ನಾವುಗಳು ಬೆಳೆ ಇಲ್ಲದೆ ನಷ್ಟದ ಹಿನ್ನೆಲೆಯಲ್ಲಿ ಜೀವನದಲ್ಲಿ ನೊಂದಿದ್ದು, ಪ್ರಾಣಾ ಹೋದರೂ ಸರಿ ನಮಗೆ ಪರಿಹಾರ ದೊರೆಯುವ ತನಕ ಮುಷ್ಕರವನ್ನು ವಾಪಾಸ್ ಪಡೆಯುವುದಿಲ್ಲವೆಂದು ಪಟ್ಟು ಹಿಡಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ನಾನು ರೈತರ ಪ್ರತಿನಿಧಿ ಮತ್ತು ಖಾಸಗಿ ಕಂಪನಿಗಳ ಪ್ರತಿನಿಧಿಗಳೊಂದಿಗೆ ಫೆ.1ರಂದೇ ಪರಸ್ವರ ಚರ್ಚೆ ನಡೆಸಿದ್ದು, ನಷ್ಟವಾಗಿರುವ ಪರಿಹಾರ ನೀಡುವ ಬಗ್ಗೆ ಖಾಸಗಿ ಕಂಪನಿ ಭರವಸೆ ನೀಡಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಈ ಭಾಗದ ರೈತರ ನಷ್ಟ ಪರಿಹಾರವನ್ನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು, ಜಿಲ್ಲಾ ಪಂಚಾಯಿತಿ ವತಿಯಿಂದ ನಷ್ಟ ಪರಿಹಾರ ಪರಿಶೀಲಿಸಿ ವರದಿ ನೀಡಿದ ನಂತರ ಪರಿಹಾರ ನೀಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ರೈತರು ಅಲ್ಲಿಯ ತನಕ ಸಮದಾನದಿಂದ ಇರುವಂತೆ ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಆಂಜನೇಯ, ಸಿದ್ದಾಪುರ ಮಂಜಣ್ಣ, ರೈತರಾದ ಎಚ್.ಈಶ್ವರಪ್ಪ, ಆರ್.ಹನುಮಂತರಾಯ, ಎಚ್.ಆನಂದಪ್ಪ, ರಂಗನಾಥ, ಗೌರಮ್ಮ, ಎಚ್.ಎಸ್.ನಿಜಲಿಂಗಪ್ಪ, ಎಂ.ಆರ್.ರಂಗಸ್ವಾಮಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.