ಲೋಕಸಭೆ ಚುನಾವಣೆ : ಖರ್ಗೆ ಸೋಲಿಸಲು ಬಿಜೆಪಿ ರಣತಂತ್ರ

ಬೆಂಗಳೂರು

      ಬರುವ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಧುರೀಣ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪರಾಭವಗೊಳಿಸಲು ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರು ಭಾರಿ ತಂತ್ರಗಾರಿಕೆ ನಡೆಸುತ್ತಿದ್ದು, ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರನ್ನು ಕಣಕ್ಕಿಳಿಸಲು ಸಕಲ ತಯಾರಿ ನಡೆಸುತ್ತಿದ್ದಾರೆ.

      ಉಮೇಶ್ ಜಾಧವ್ ಅವರಿಗೆ ಆರ್ಥಿಕ ಸಂಪನ್ಮೂಲ ಸೇರಿ ಸಕಲ ಶಕ್ತಿ, ಸೌಲಭ್ಯಗಳನ್ನು ಸಲ್ಲಿಸುತ್ತಿದ್ದಾರೆ.ಲೋಕಸಭೆ ಚುನಾವಣೆ ಸನ್ನಿಹಿತವಾಗಿದ್ದು ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರದ್ದೇ ಪಕ್ಷದ ನಾಯಕನಿಂದ ಸೋಲಿಸಲು ಕಮಲ ಪಕ್ಷದವರು ರಣತಂತ್ರ ಹೆಣೆದಿದ್ದಾರೆ.

       ಕಾಂಗ್ರೆಸ್ ನ ಬಂಡಾಯ ಶಾಸಕರಾಗಿ ಗುರುತಿಸಿಕೊಂಡಿರುವ ಉಮೇಶ್ ಜಾಧವ್ ಮುಂಬೈಗೆ ಹೋಗಿ ಯಡಿಯೂರಪ್ಪನವರ ಆಡಿಯೊ ಟೇಪ್ ಹೊರಬಿದ್ದ ನಂತರ ರಾಜ್ಯಕ್ಕೆ ವಾಪಸ್ಸಾಗಿದ್ದರು. ಮುಂದಿನ ಲೋಕಸಭೆ ಚುನಾವಣೆ ವೇಳೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗಿದೆ.

      ಈ ಮಧ್ಯೆ ಖರ್ಗೆ ಕಲಬುರಗಿ ಬಿಟ್ಟು ಕೋಲಾರ ಕ್ಷೇತ್ರಕ್ಕೆ ಗುಳೆ ಹೋಗಲಿದ್ದಾರೆ ಎಂಬ ಸುದ್ದಿ ಹರಡಿದ್ದು, ಇದನ್ನು ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.ಹನ್ನೊಂದು ಬಾರಿ ಚುನಾವಣೆಗಳಲ್ಲಿ ಗೆಲ್ಲಿಸಿರುವ ಕಲಬುರಗಿ ಬಿಟ್ಟು ಬೇರೆಲ್ಲಿಗೆ ಹೋಗಲಿ? ನನ್ನ ಜನ, ನನ್ನ ಜೀವ ಕಲಬುರಗಿಯಲ್ಲಿದೆ. ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಊಹಾಪೋಹ ಎಂದು ಹೇಳಿದ್ದಾರೆ.

       ಈ ಕುರಿತು ಉಮೇಶ್ ಜಾಧವ್ ಪ್ರತಿಕ್ರ್ರಿಯಿಸಿ, ಪಕ್ಷ ತೊರೆಯುವ ಕುರಿತು ತಾವಿನ್ನೂ ನಿರ್ಧಾರದ ಹಂತದಲ್ಲಿದ್ದು, ಸದ್ಯದಲ್ಲಿಯೇ ಘೋಷಣೆ ಮಾಡಲಿದ್ದೇನೆ ಎಂದರು.ಇದರಿಂದ ತಮಗೆ ಕೆಟ್ಟ ಹೆಸರು ಬರಬಹುದು ಎಂಬ ಯೋಚನೆಯಿದೆಯೇ ಎಂದು ಕೇಳಿದಾಗ, ನಾನು ಜನರೊಂದಿಗೆ ಗುರುತಿಸಿಕೊಂಡಿದ್ದೇನೆ. ಜನರು ಏನು ಹೇಳುತ್ತಾರೆ, ನಾನು ಹಾಗೆ ಮಾಡುತ್ತೇನೆ. ನಿರ್ಧಾರ ಕೈಗೊಳ್ಳುವ ಮುನ್ನ ಕೆಲವು ವಿಷಯಗಳನ್ನು ಇತ್ಯರ್ಥಪಡಿಸಬೇಕಿದೆ ಎಂದರು.

        ಬಿಜೆಪಿಗೆ ಜಾಧವ್ ಬಂದರೆ ಲಾಭವೇ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ರೇವು ನಾಯಕ್ ಬೆಳಮಗಿ ಖರ್ಗೆ ವಿರುದ್ಧ 73 ಸಾವಿರ ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದರು. ನಂತರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದಿದ್ದಕ್ಕೆ ಬಿಜೆಪಿ ತೊರೆದಿದ್ದರು.

        ಜಾಧವ್ ಇಲ್ಲದಿದ್ದರೆ ಖರ್ಗೆ ವಿರುದ್ಧ ಹೋರಾಡಲು ಬಿಜೆಪಿಗೆ ಪ್ರಬಲ ಸ್ಪರ್ಧಿ ತಕ್ಷಣಕ್ಕೆ ಇಲ್ಲ. ಬಿಜೆಪಿ ಈ ತಂತ್ರವನ್ನು ಹಿಂದೆಯೇ ಕಂಡುಕೊಂಡಿದೆ. 2009ರಲ್ಲಿ ಬಿಜೆಪಿಯಿಂದ ಗುರುಪಾದಪ್ಪ ನಾಗಮಾರಪಳ್ಳಿ ಮತ್ತು 2014ರಲ್ಲಿ ಜೆಡಿಎಸ್‍ನಿಂದ ಬೆಳಮಗಿ ಸ್ಪರ್ಧಿಸಿದ್ದರು.
ಆದರೆ ಈ ಬಾರಿ ಖರ್ಗೆ ಗೆದ್ದರೆ ಅದು 12 ನೆ ಗೆಲುವಾಗಲಿದೆ. ಜತೆಗೆ ದೇಶದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಲಿದೆ. ಸೋತರೆ ಸೋಲಿಲ್ಲದ ಸರದಾರನನ್ನು ಸೋಲಿಸಿದ ಕೀರ್ತಿಗೆ ಜಾಧವ್ ಪಾತ್ರರಾಗಲಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link