ಚಿತ್ರದುರ್ಗ
ನಮ್ಮ ಸಂಘಟನೆಯು ಪುರುಷ ವಿರೋಧಿ ಸಂಘಟನೆಯಲ್ಲ, ಪುರುಷರು ಹಾಗು ಮಹಿಳೆಯರು ಜೊತೆಸೇರಿ ಸಮಾಜದಲ್ಲಿನ ಪುರುಷ ಪ್ರಧಾನ ಮನಸ್ಥಿತಿಯ ವಿರುದ್ಧ ಹೋರಾಡಬೇಕು ಎಂದು ಎ.ಐ.ಎಂ.ಎಸ್.ಎಸ್ನ ರಾಜ್ಯ ಉಪಾಧ್ಯಕ್ಷರಾದ ಕಾ||ಎಂ.ಎನ್. ಮಂಜುಳಾ ಹೇಳಿದರು
ಆಲ್ ಇಂಡಿಯಾ ಮಹಿಳಾ ಸಾಂಸ್ಕತಿಕ ಸಂಘಟನೆ ಚಿತ್ರದುರ್ಗ ಜಿಲ್ಲಾ ಘಟಕದವತಿಯಿಂದ ನಗರದ ರಂಗಯ್ಯನಬಾಗಿಲು ಬಳಿಯ ಎ.ಐ.ಎಂ.ಎಸ್.ಎಸ್ ಕಛೇರಿ ನಡೆದ ಎರಡನೇ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.ಇಂದು ಮಹಿಳೆ ತನ್ನ ಭ್ರೂಣಾವಸ್ಥೆಯಿಂದ ಮಸಣದವರೆಗೆ ಸಮಸ್ಯೆಗಳನ್ನು ಎದುರಿಸುತ್ತದ್ದಾಳೆ, ಆದ್ದರಿಂದ ಮಹಿಳೆಯರು ಸಂಘಟಿತರಾಗಿ ಇವುಗಳ ವಿರುದ್ಧ ಹೋರಾಡಲು ಸಂಘಟನೆಯು ಅತ್ಯಾವಶ್ಯಕ ಎಂದು ಸಂಘಟನೆಯ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟರು.
ಎ.ಐ.ಎಂ.ಎಸ್.ಎಸ್ನ ಮಾತೃ ಸಂಘಟನೆಯಾದ ಎಸ್.ಯು.ಸಿ.ಐ(ಸಿ)ನ ರಾಜ್ಯ ಸಮಿತಿಯ ಸದಸ್ಯ ಕಾ||ಶಶಿಧರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಧೈರ್ಯ ಮತ್ತು ಆತ್ಮಸ್ತೈರ್ಯಗಳ ಜೊತೆಗೆ ಮಹಿಳೆಯರ ಘನತೆಯುಕ್ತ ಬದುಕಿಗಾಗಿ ಹೋರಾಟವನ್ನು ಕಟ್ಟಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಅಶ್ಲೀಲ ಸಿನಿಮಾ ಸಾಹಿತ್ಯ, ಮದ್ಯ ಹಾಗು ಮಾದಕ ವಸ್ತುಗಳನ್ನು ನಿಷೇದಿಸಬೇಕು, ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಹೆಚ್ಚಿನ ಸೌಕರ್ಯ ಒದಗಿಸಬೇಕು ಮತ್ತು ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಹೊಸ ಕಟ್ಟಡ ಮತ್ತು ಮೂಲಭೂತ ಸೌಕರ್ಯ ಒದಗಿಸಿ. ಇತ್ಯಾದಿ ಬೇಡಿಕೆಗಳನ್ನೊಳಗೊಂಡ ಮುಖ್ಯ ಗೊತ್ತುವಳಿಯನ್ನು ಮಂಡಿಸಿ ಅನುಮೋದಿಸಲಾಯಿತು.
ಕಾರ್ಯಕ್ರಮದಲ್ಲಿ ಎ.ಐ.ಎಂ.ಎಸ್.ಎಸ್ ನ ಸ್ಥಳೀಯ ಜಿಲ್ಲಾ ಸಂಘಟನಾ ಸಮಿತಿಯನ್ನು ರಚಿಸಲಾಯಿತು.ಜಿಲ್ಲಾ ಸಂಚಾಲಕರಾಗಿ ಕಾ|| ಸುಜಾತ.ಡಿ ಜಿಲ್ಲಾ ಸಹಸಂಚಾಲಕರಾಗಿ ತ್ರಿವೇಣಿ ಸೇನ್, ಕುಮುದ.ಈ ಕೌನ್ಸಿಲ್ ಸದಸ್ಯರಾಗಿ ಗಿರಿಜಮ್ಮ, ಚೈತ್ರ, ಪ್ರಕೃತಿ, ಸ್ನೇಹ, ರಶ್ಮಿ, ನವ್ಯ, ಪೂರ್ಣಿಮ. ನೇಮಕವಾದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಮಹಿಳೆಯರು ಪಾಲ್ಗೊಂಡಿದ್ದರು.