ಬೆಂಗಳೂರು
ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಕೇಂದ್ರ ಕಲ್ಲಿದ್ದಲು ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಭೇಟಿಯಾಗಿ ರಾಜ್ಯದ ಕಲ್ಲಿದ್ದಲು ಪೂರೈಕೆ ಹಾಗೂ ಉಪನಗರ ರೈಲು ಯೋಜನೆ ಕುರಿತು ಚರ್ಚಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತಾನಾಡಿದ ಪಿಯೂಷ್ ಗೋಯಲ್ ಅವರು, ಬೆಂಗಳೂರು ಸಬ್‍ಅರ್ಬನ್ ರೈಲು ಅನಂತಕುಮಾರ್ ಅವರ ಕನಸಾಗಿತ್ತು. ಆ ಕನಸನ್ನು ನನಸು ಮಾಡುವುದು ಅವರ ಸಹೋದರನಾಗಿ ನನ್ನ ಕರ್ತವ್ಯವಾಗಿದೆ ಎಂದು ಅನಂತಕುಮಾರ್ ಅವರನ್ನು ಸ್ಮರಿಸಿದರು.
ಈ ಯೋಜನೆ ಪ್ರಕ್ರಿಯೆ 2016ರಲ್ಲೇ ಆರಂಭವಾಗಿರುವುದರಿಂದ ಈಗ ಲೋಕಸಭಾಚುನಾವಣೆ ಘೋಷಣೆಯಾದರೂ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಫೆಬ್ರವರಿ 25ರಂದು ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದ ತಕ್ಷಣವೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು. ಸದ್ಯ ಈ ಯೋಜನೆಗೆ 23,000 ಕೋಟಿರೂ. ಅಂದಾಜು ವೆಚ್ಚವಾಗುತ್ತದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲೂ ಸಹ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಸಬ್‍ಅರ್ಬನ್ ರೈಲ್ವೆ ಯೋಜನೆ ಜಾರಿಗೆರಾಜ್ಯ ಸರ್ಕಾರ 19 ಷರತ್ತುಗಳನ್ನು ವಿಧಿಸಿತ್ತು. ಈ ಸಂಬಂಧ ತಾನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದ್ದೆ. ಇಂದು ಒಂದೇ ಸಭೆಯಲ್ಲಿ ಆ ಎಲ್ಲ ಷರತ್ತುಗಳನ್ನು ರದ್ದು ಮಾಡಲು ಸಿಎಂ ಒಪ್ಪಿಗೆ ನೀಡಿದ್ದಾರೆ. ಸುಮಾರು 6000 ಕೋಟಿರೂ. ಮೌಲ್ಯದ ಭೂಮಿಯನ್ನು ಕೇವಲ ಒಂದು ರೂ. ಗುತ್ತಿಗೆಗೆ ನೀಡಲಾಗುತ್ತಿದೆ. ಬೆಂಗಳೂರು ನಗರದೊಳಗೆ ಭೂಸ್ವಾಧೀನ ಕಷ್ಟ ಸಾಧ್ಯ. ಹೀಗಾಗಿ 70 ಕಿಮೀ ಎತ್ತರಿಸಿದ ಮಾರ್ಗ ಹಾಗೂ 90 ಕಿಮಿ ಉದ್ದ ಸಾಧಾರಣ ಮಾರ್ಗವಾಗಿ ರೂಪಿಸಲು ರೈಲ್ವೆ ಇಲಾಖೆ ಉದ್ದೇಶಿಸಿದೆ ಎಂದು ಸಚಿವ ಗೋಯಲ್ ತಿಳಿಸಿದರು.
ಇನ್ನು ಆಪರೇಷನ್ ಕಮಲದ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾಪಿಸಿದ ಗೋಯಲ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಬಲ್ ಎಂಜಿನ್ ರೈಲಿನಂತೆ ಕಾರ್ಯನಿರ್ವಹಿಸಬೇಕು. ಕರ್ನಾಟಕದ ಜನ ಬಿಜೆಪಿಗೆ 104 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ನೀಡಿದ್ದರೆ, ಈ ಡಬಲ್ ಎಂಜಿನ್ ಮತ್ತಷ್ಟು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಹೇಳಿ ಸಿಎಂ ಹೆಚ್ಡಿಕೆ ಕಡೆಗೆ ಕೈ ತೋರಿಸಿ ನಗೆ ಬೀರಿದರು.
ರಾಷ್ಟ್ರಾದ್ಯಂತ 100ಕ್ಕೂ ಹೆಚ್ಚು ವಂದೇ ಭಾರತ್ ಸೆಮಿ ಸ್ಪೀಡ್ ರೈಲುಗಳನ್ನು ಜಾರಿಗೊಳಿಸಲು ಉದ್ದೇಶಿಸಿದ್ದೇವೆ. ವಿಶೇಷವಾಗಿ ವಂದೇ ಭಾರತ್ ರೈಲುಗಳ ಮೂಲಕ ಬೆಂಗಳೂರು-ಚೆನ್ನೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಹೈದ್ರಾಬಾದ್ ಮೊದಲಾದವನ್ನು ಸಂಪರ್ಕಿಸಲು ಉದ್ದೇಶಿಸಿದ್ದೇವೆ. ಈ ಮಧ್ಯೆ ಸ್ವದೇಶಿ ನಿರ್ಮಿತ ವಂದೇ ಭಾರತ್ ರೈಲುಗಳ ಬಗ್ಗೆ ಪ್ರತಿಪಕ್ಷಗಳ ಪ್ರಮುಖರು ಟೀಕೆ ಮಾಡಿರುವುದೂ ಸಹ ನಮಗೆ ನೋವನ್ನುಂಟು ಮಾಡಿದೆ. ಇದು ಭಾರತೀಯ ರೈಲ್ವೆ ಇಂಜಿನಿಯರ್ಗಳ ಶ್ರಮವನ್ನುಅಪಮಾನ ಮಾಡಿದಂತಾಗಿದೆ ಎಂದು ಸಚಿವ ಗೋಯಲ್ ಬೇಸರ ವ್ಯಕ್ತಪಡಿಸಿದರು.
ಇನ್ನು ಕೋಲಾರದಲ್ಲಿ ಮೊದಲು ಕೋಚ್ ವರ್ಕ್ಶಾಪ್ ಪ್ರಾರಂಭಿಸಲು ಉದ್ದೇಶಿಸಿದ್ದೇವೆ. ನಂತರ ಬೇಡಿಕೆ ಹೆಚ್ಚಿದಲ್ಲಿ ಅದನ್ನುಉನ್ನತ ದರ್ಜೆಗೇರಿಸಿ ಕೋಚ್ ಫ್ಯಾಕ್ಟರಿಯಾಗಿ ಪರಿವರ್ತಿಸಲಾಗುತ್ತದೆ. ಆದರೆ ಇದಕ್ಕೂ ಸಹ ರಾಜ್ಯ ಸರ್ಕಾರ 50:50 ವೆಚ್ಚ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಸಚಿವ ಗೋಯಲ್ ತಿಳಿಸಿದರು.